ಚುನಾವಣೆ; ಕೊಪ್ಪಳದಲ್ಲಿ ಭದ್ರತಾ ಪಡೆಗಳ ಪಥಸಂಚಲನ
ಕೊಪ್ಪಳ, ಏಪ್ರಿಲ್ 06; ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿಯನ್ನು ಘೋಷಣೆ ಮಾಡಿದೆ. ತಕ್ಷಣವೇ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ರಾಜ್ಯದ 224 ಕ್ಷೇತ್ರಗಳಿಗೆ ಮೇ 10ರ ಬುಧವಾರ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ 13ರ ಶನಿವಾರ ಮತ ಎಣಿಕೆ ನಡೆಯಲಿದೆ.
ವಿಧಾನಸಭಾ ಚುನಾವಣೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು, ಚುನಾವಣೆ ಪ್ರಕ್ರಿಯೆಯನ್ನು ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಯಲು ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಯಿಂದ ಭದ್ರತಾ ಪಡೆಯ ಪಥಸಂಚಲನ ನಡೆಸಲಾಯಿತು. ಜನರು ಹೂಗಳನ್ನು ನೀಡಿ ಭದ್ರತಾಪಡೆಗಳನ್ನು ಸ್ವಾಗತಿಸಿದರು. ಕೊಪ್ಪಳ ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಯಿತು.

ಕೊಪ್ಪಳ ಜಿಲ್ಲಾಧಿಕಾರಿ, ಚುನಾವಣಾಧಿಕಾರಿ ಎಂ. ಸುಂದರೇಶ ಬಾಬು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಭದ್ರತಾಪಡೆಗಳ ಪಥಸಂಚಲನಕ್ಕೆ ಹಸಿರು ನಿಶಾನೆ ತೋರಿಸಿದರು ಮತ್ತು ಪಥಸಂಚಲನದಲ್ಲಿ ಹೆಜ್ಜೆ ಹಾಕಿದರು.
ಭದ್ರತಾ ಪಡೆಗಳ ಪಥಸಂಚಲನವು ಕೊಪ್ಪಳ ನಗರದ ಬಸ್ ನಿಲ್ದಾಣದಿಂದ ಪ್ರಾರಂಭಗೊಂಡಿತು. ಬಳಿಕ ಅಶೋಕ ವೃತ್ತ, ಜವಾಹರ ರಸ್ತೆ ಮೂಲಕ ಗಡಿಯಾರ ಕಂಭ, ಸಾಲಾರಜಂಗ ರಸ್ತೆ ಮೂಲಕ ಈಶ್ವರ ಪಾರ್ಕ್‌ವರೆಗೆ ನಡೆಯಿತು. ಪಥಸಂಚಲನದಲ್ಲಿ ಚುನಾವಣೆ ಕರ್ತವ್ಯಕ್ಕೆ ಆಗಮಿಸಿದ ಪ್ಯಾರಾ ಮಿಲಿಟರಿ ತುಕಡಿ ಮತ್ತು ಕೊಪ್ಪಳ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

ಸಿಬ್ಬಂದಿಗಳಿಗೆ ತರಬೇತಿ; ಜಿಲ್ಲೆಯಲ್ಲಿ ಚುನಾವಣಾ ಅಪರಾಧಗಳ ಪತ್ತೆ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮತ್ತು ನೀತಿ ಸಂಹಿತೆಯ ನಿಯಮಗಳ ಪಾಲನೆ ಕುರಿತು ಸಿಬ್ಭಂದಿಗಳಿಗೆ ವಿಶೇಷ ತರಬೇತಿಯನ್ನು ನಡೆಸಲಾಗಿದೆ. ಚುನಾವಣಾ ಅಪರಾಧಗಳ ಬಗ್ಗೆ ಪ್ರಕರಣ ದಾಖಲಿಸುವಾಗ ಸಾಕಷ್ಟು ಜಾಗೃತಿ ವಹಿಸಬೇಕು. ಕಾಲಕಾಲಕ್ಕೆ ಚುನಾವಣೆ ಆಯೋಗವು ಹೊರಡಿಸುವ ಮಾರ್ಗಸೂಚಿಗಳನ್ನು ಸರಿಯಾಗಿ ಓದಿ ಅದೇ ರೀತಿ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚನೆ ನೀಡಲಾಗಿದೆ.
ಮತದಾರರಿಗೆ ಹಣ ಹಂಚಿಕೆ ಅಕ್ರಮ ಸೇರಿದಂತೆ ಯಾವುದೇ ರೀತಿಯ ಪ್ರಕರಣ ದಾಖಲಿಸುವಾಗ ಕಾನೂನು ತೊಡಕುಗಳಾಗುತ್ತಿದೆ ಎಂದು ಅನ್ನಿಸಿದಾಗ ಕೂಡಲೇ ಚುನಾವಣಾಧಿಕಾರಿಗಳು ಹಾಗೂ ಕಾನೂನು ಸಲಹೆಗಾರ ಸಂಪರ್ಕಿಸಿ ಗೊಂದಲ ಸರಿಪಡಿಸಿಕೊಂಡು ಮುಂದಿನ ಕ್ರಮಕ್ಕೆ ಮುಂದಾಗಬೇಕು. ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸುವಾಗ ದೂರಿನಲ್ಲಿ ಘಟನೆಯ ಮತ್ತು ಅಪರಾಧಿಯ ಸಂಪೂರ್ಣ ಮಾಹಿತಿಯನ್ನು ವಿವರವಾಗಿ ದಾಖಲಿಸಿ ಠಾಣಾಧಿಕಾರಿಗಳಿಗೆ ನೀಡುವುದು ಅಗತ್ಯವಾಗಿದೆ ಎಂದು ನಿರ್ದೇಶನ ನೀಡಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ 5 ವಿಧಾನಸಭಾ ಕ್ಷೇತ್ರಗಳಿವೆ. ಏಪ್ರಿಲ್ 13ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುತ್ತದೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 1,322 ಮತಗಟ್ಟೆಗಳಿವೆ. 5,62,376 ಪುರುಷರು ಮತ್ತು 5,66,341 ಮಹಿಳೆಯರು ಹಾಗೂ ಇತರೆ 47 ಸೇರಿ ಒಟ್ಟು 11,28,764 ಮತದಾರರಿದ್ದಾರೆ.
ಚೆಕ್ ಪೋಸ್ಟ್ ನಿರ್ಮಾಣ; ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ 14 ಕಡೆಗಳಲ್ಲಿ ಚೆಕ್‌ಪೋಸ್ಟ್ ಸ್ಥಾಪಿಸಲಾಗಿದೆ. ಕುಷ್ಟಗಿ ತಾಲೂಕಿನಲ್ಲಿ ಬಾದಿಮನಾಳ ಕ್ರಾಸ್, ಕಿಲ್ಲಾರಹಟ್ಟಿ ಮತ್ತು ಕ್ಯಾದಿಗುಪ್ಪದಲ್ಲಿ, ಕನಕಗಿರಿ ತಾಲೂಕಿನಲ್ಲಿ ಚನ್ನಳ್ಳಿ ಕ್ರಾಸ್, ನವಲಿ ಮತ್ತು ಹುಲಿಹೈದರ್‌ಗಳಲ್ಲಿ, ಗಂಗಾವತಿ ತಾಲೂಕಿನಲ್ಲಿ ಕಡೆಬಾಗಿಲು ಬ್ರಿಡ್ಸ್, ಚಿಕ್ಕಜಂತಕಲ್ ಮತ್ತು ವಿದ್ಯಾನಗರಕ್ರಾಸ್‌ನಲ್ಲಿ, ಯಲಬುರ್ಗಾ ತಾಲೂಕಿನಲ್ಲಿ ಬನ್ನಿಕೊಪ್ಪ, ಬಂಡಿಕ್ರಾಸ್ ಮತ್ತು ಸಂಕನೂರ ಕ್ರಾಸ್‌ಗಳಲ್ಲಿ, ಕೊಪ್ಪಳ ತಾಲೂಕಿನಲ್ಲಿ ಮೂನ್‌ಲೈಟ್‌ಡಾಬಾ ಮತ್ತು ಬೆಳಗಟ್ಟಿನಲ್ಲಿ ಚೆಕ್‌ಪೋಸ್ಟ್ ಇದೆ.
ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿತ ಎಲ್ಲಾ ರೀತಿಯ ದೂರುಗಳನ್ನು ದಾಖಲಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 1950 ಟೋಲ್ ಫ್ರೀ ಸಂಖ್ಯೆಯೊಂದಿಗೆ ಸಹಾಯವಾಣಿ ಸ್ಥಾಪಿಸಲಾಗಿದೆ. ಸಾರ್ವಜನಿಕರು ಈ ದೂರವಾಣಿ ಸಂಖ್ಯೆಗೆ 24*7 ದೂರುಗಳನ್ನು ಸಲ್ಲಿಸಬಹುದಾಗಿದೆ. ಚುನಾವಣಾ ಮಾದರಿ ನೀತಿ ಸಂಹಿತೆ ಅನುಷ್ಠಾನಗೊಳಿಸಲು ಜಿಲ್ಲಾಮಟ್ಟದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಮಾದರಿ ನೀತಿ ಸಂಹಿತೆ ಮತ್ತು ಚುನಾವಣಾ ವೆಚ್ಚ ವೀಕ್ಷಣೆ ತಂಡಗಳನ್ನು ಸಹ ನೇಮಿಸಲಾಗಿದೆ.












Click it and Unblock the Notifications