ಏನೂ ಆಗಿಲ್ಲ, ತಲೆಕೆಡಿಸಿಕೊಳ್ಬೇಡಿ! ಕೇಂದ್ರಕ್ಕೆ ದೀದಿ ಸರ್ಕಾರದ ಪತ್ರ
ಕೋಲ್ಕತ್ತಾ, ಜೂನ್ 10: 'ಕೆಲವು ಬೀದಿ ಜಗಳಗಳಷ್ಟೆ. ಮತ್ತೇನೂ ಆಗಿಲ್ಲ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ, ತಲೆಕೆಡಿಸಿಕೊಳ್ಬೇಡಿ' ಎಂಬರ್ಥದಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ.
ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆದ ಗಲಭೆಯಲ್ಲಿ ಮೂವರು ಬಿಜೆಪಿ ಮತ್ತು ಓರ್ವ ಟಿಎಂಸಿ ಸದಸ್ಯರ ಹತ್ಯೆಯಾಗಿತ್ತು. ಇದರಿಂದಾಗಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಸರ್ಕಾರವನ್ನು ಕೇಳಿತ್ತು.
ಅದಕ್ಕೆ ಪ್ರತಿಕ್ರಿಯೆ ನೀಡಿದ ಮಮತಾ ಬ್ಯಾನರ್ಜಿ ಸರ್ಕಾರ ಮುಖ್ಯ ಕಾರ್ಯದರ್ಶಿ ಮಲಾಯ್ ಕುಮಾರ್ ಡೆ "ನಾವು ಗಲಭೆಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಗಲಭೆಗೆ ಕಾರಣೀಕರ್ತರಾದವರ ಮೇಲೂ ಕೂಡಲೆ ಶಿಸ್ತು ಕ್ರಮ ಕೈಗೊಳ್ಳುತ್ತೇವೆ" ಎಂದಿದ್ದಾರೆ.

ಕೆಲವು ಸಮಾಜ ಘಾತುಕ ಶಕ್ತಿಗಳು ಈ ಗಲಭೆ ನಡೆಸಿದ್ದು, ಇದೊಂದು ಬೀದಿ ಜಗಳವಷ್ಟೆ. ಆದರೆ ಈ ಘಟನೆಗೆ ಕಾರಣರಾದ ಎಲ್ಲರ ಮೇಲೂ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಕಾನೂನು ಮತ್ತು ಸುವ್ಯವಸ್ಥೆ ಹದಗೆಡುವುದಕ್ಕೆ ನಾವು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಶನಿವಾರ ನಡೆದ ಗಲಭೆಯಲ್ಲಿ ಬಿಜೆಪಿಯ ಮೂವರು ಹಾಗೂ ತೃಣಮೂಲ ಕಾಂಗ್ರೆಸ್ ನ ಒಬ್ಬ ಕಾರ್ಯಕರ್ತ ಮೃತರಾಗಿದ್ದರು.
ಈ ಹಿಂಶಾಚಾರದ ಬಗ್ಗೆ ಸವಿವರ ವರದಿ ನೀಡುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಮನವಿ ಮಾಡಿದ್ದರು.












Click it and Unblock the Notifications