ನಂದಿಗ್ರಾಮದಲ್ಲಿ ಕಾರ್ಯಕರ್ತನ ಮೇಲೆ ಟಿಎಂಸಿಯಿಂದ ಹಲ್ಲೆ: ಬಿಜೆಪಿ ಆರೋಪ
ಕೋಲ್ಕತಾ, ಮಾರ್ಚ್ 18: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಅವರ ಚುನಾವಣಾ ಪ್ರಚಾರದ ವೇಳೆ ಹಲ್ಲೆ ನಡೆಸಲಾಗಿದೆ ಎಂದು ಬಿಜೆಪಿ ಗುರುವಾರ ಆರೋಪಿಸಿದೆ. ರಾಜ್ಯದಲ್ಲಿ ಚುನಾವಣೆಗೂ ಮುನ್ನ ಮತ್ತಷ್ಟು ಭದ್ರತಾ ಪಡೆಗಳನ್ನು ನಿಯೋಜನೆ ಮಾಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ಸಂಘರ್ಷ ನಡೆದ ಬಳಿಕ ಬಿಜೆಪಿ ಯುವ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಲಾಗಿದೆ. ಆತನ ಸ್ಥಿತಿ ಗಂಭೀರವಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ.
'ಸುವೇಂದು ಅಧಿಕಾರಿ ಅವರ ಪಾದಯಾತ್ರೆ ಇಂದು ಆರಂಭವಾದ ಬಳಿಕ ಇಲ್ಲಿ ನಮ್ಮ ಯುವ ಮೋರ್ಚಾದ ಮುಖಂಡರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಅವರಲ್ಲಿ ರಕ್ತಸ್ರಾವ ಆಗುತ್ತಿರುವುದನ್ನು ಕಂಡು ನಾನು ಆಸ್ಪತ್ರೆಗೆ ಸಾಗಿಸಿದ್ದೇನೆ. ಅವರಿಗೆ ಇನ್ನೂ ವಿಶೇಷ ಸೌಲಭ್ಯದ ಆಸ್ಪತ್ರೆಯ ಅಗತ್ಯ ಬೀಳಬಹುದು. ಇಲ್ಲಿ ಇನ್ನಷ್ಟು ಅರೆ ಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ' ಎಂದು ಅವರು ಹೇಳಿದ್ದಾರೆ.

'ಮಮತಾ ದೀದಿ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಚುನಾವಣೆಯನ್ನು ಎದುರಿಸಬೇಕು. ನಮಗೆ ಅರ್ಥವಾಗುತ್ತಿಲ್ಲ.. ಆಕೆ ಈ ರೀತಿ ಎಲ್ಲ ಮಾಡಬಾರದು. ಅವರು ನಂದಿಗ್ರಾಮಕ್ಕೆ ಸೇರಿದವರು' ಎಂದಿದ್ದಾರೆ.
ಟಿಎಂಸಿ ನಡೆಸಿದ ಹಿಂಸಾಚಾರಗಳಲ್ಲಿ ಇದುವರೆಗೂ 130 ಬಿಜೆಪಿ ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಮದು ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ.












Click it and Unblock the Notifications