ವಧು-ವರ ಬಡಿದಾಡಿಕೊಂಡು ಸತ್ತ ಕೇಸ್‌ಗೆ ಟ್ವಿಸ್ಟ್: ಎರಡು ಜೀವ ಬಲಿ ಪಡೆದ ಕಾಣದ ಕೈ ಯಾವುದು?
ಕೋಲಾರ, ಆಗಸ್ಟ್ 08: ಮದುವೆಯಾದ ಕೆಲವೇ ಗಂಟೆಗಳಲ್ಲಿ ನವ ವಧು ಹಾಗೂ ವರ ಬಡಿದಾಡಿಕೊಂಡು ಸಾವನ್ನಪ್ಪಿದ ಘಟನೆ ಕೋಲಾರ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಈ ಪ್ರಕರಣ ತನಿಖೆಯಲ್ಲಿರುವಾಗಲೇ ಕೇಸ್‌ಗೆ ಬಿಗ್ ಟ್ವಿಸ್ಟ್ ಕೊಡುವಂತಹ ಮಾಹಿತಿಯೊಂದು ಹೊರ ಬಿದ್ದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿಯಲ್ಲಿ ನವೀನ್ (29) ಹಾಗೂ ಲಿಖಿತಶ್ರೀ (20) ಸಾವಿಗೆ ಸಂಬಂಧಪಟ್ಟಂತೆ ಮೂರನೇ ವ್ಯಕ್ತಿಯ ಕೈವಾಡ ಇರುವ ಬಗ್ಗೆ ಅನುಮಾನಗಳು ದಟ್ಟವಾಗುತ್ತಿದೆ.
ಕೆಜಿಎಫ್ ತಾಲೂಕಿನ ಚಂಬರಸನಹಳ್ಳಿ ಗ್ರಾಮದ ನವೀನ್ ಹಾಗೂ ಲಿಖಿತಶ್ರೀ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಗೆ ಕುಟುಂಬಸ್ಥರು ಕೂಡ ಒಪ್ಪಿಗೆ ಸೂಚಿಸಿದ್ದು, ಎರಡು ಕುಟುಂಬದವರನ್ನು ಒಪ್ಪಿಸಿ ನಿನ್ನೆ( ಆಗಸ್ಟ್ 07) ಬುಧವಾರ ಸ್ಥಳೀಯ ದೇವಾಲಯದಲ್ಲಿ ಮದುವೆಯಾಗಿದ್ದರು. ಪ್ರೀತಿಸಿ ಮದುವೆಯಾದ ಖುಷಿಯಲ್ಲಿದ್ದ ನವೀನ್-ಲಿಖಿತಶ್ರೀ ಮದುವೆ ಮುಗಿದ ಬಳಿಕ ಇಬ್ಬರೂ ರೂಮಿಗೆ ಹೋಗಿದ್ದಾರೆ. ಬಳಿಕ ಇಬ್ಬರು ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಕುಟುಂಬಸ್ಥರಿಗೆ ಕಂಡು ಬಂದಿದ್ದರು.

ಕುಟುಂಬಸ್ಥರು ಕೂಡಲೇ ಇಬ್ಬರನ್ನೂ ಕೋಲಾರದ ಅರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ದುರಾದೃಷ್ಟವಶಾತ್ ನಿನ್ನೆ ನವ ವಧುವಾಗಿದ್ದ ಲಿಖಿತಶ್ರೀ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ನವೀನ್‌ನನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ರವಾನಿಸಲಾಗಿತ್ತು. ಆದರೆ ಈತನೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಮೊದಲು ನವ ವಧು-ವರರೇ ಬಡಿದಾಡಿಕೊಂಡು ಸಾವನ್ನಪ್ಪಿದ್ದರು ಎಂದು ಸುದ್ದಿ ಹರಿದಾಡಿತ್ತು. ಆದರೆ ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ವ್ಯಕ್ತಿಯ ಕೈವಾಡ ಇರುವ ಬಗ್ಗೆ ವಧು ಲಿಖಿತಶ್ರೀ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಬಹಳಷ್ಟು ಅನ್ಯೋನ್ಯವಾಗಿದ್ದವರು, ಪ್ರೀತಿಸಿ ಮದುವೆಯಾಗಿದ್ದವರು. ಇಬ್ಬರು ಹೊಡೆದಾಡಿಕೊಂಡಿರುವುದು ಅನುಮಾನ. ಯಾರೋ ಮೂರನೇ ವ್ಯಕ್ತಿ ಇದರ ಹಿಂದೆ ಇದ್ದಾರೆ. ನಾವು ಮದುವೆಗೆ ಹೋಗಿದ್ದೆವು. ಇಬ್ಬರೂ ತುಂಬಾ ಖುಷಿಯಾಗಿ ಇದ್ದರು. ಅವರು ಹೊಡೆದಾಡಿಕೊಂಡಿರುವುದು ಸುಳ್ಳು. ಇಬ್ಬರನ್ನು ಯಾರೋ ಹೊಡೆದಿರುವ ಅನುಮಾನ ಇದೆ ಎಂದು ಹೇಳಿದ್ದಾರೆ.












Click it and Unblock the Notifications