ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುವ ಕಾಂಗ್ರೆಸ್ ಅಭಿವೃದ್ಧಿಗೆ ಮಾರಕ- ಮಾಜಿ ಸ್ಪೀಕರ್ ವಾಗ್ದಾಳಿ
ಕಾರವಾರ, ಡಿಸೆಂಬರ್ 12: ಕಾಂಗ್ರೆಸ್ ಭ್ರಷ್ಟಾಚಾರದ ಜನಕ. ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುವ ಕಾಂಗ್ರೆಸ್ ಅಭಿವೃದ್ಧಿಗೆ ಮಾರಕವಾಗಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಿಂದ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಸುಭಾಸ್ ಸರ್ಕಲ್ ಬಳಿ ಜಮಾವಣೆಗೊಂಡ ಬಳಿಕ ಮಾತನಾಡಿದ ಅವರು, ಜಾರ್ಖಂಡ್ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರನ್ನು ಕೂಡಲೇ ಬಂಧಿಸಬೇಕು. ಅಲ್ಲದೆ ಕಾಂಗ್ರೆಸ್ ಈ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಅಲ್ಪಸಂಖ್ಯಾತರ ಒಲೈಕೆಗೆ ಮುಂದಾಗಿದೆ. ಭ್ರಷ್ಟಾಚಾರದಿಂದಾಗಿ ಕಾಂಗ್ರೆಸ್ ಸಾವಿನ ಸಮೀಪ ಬಂದಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಭೂಮಿ ಮೇಲೆ ಕೆಳಗೆ ಎಲ್ಲೆಡೆ ಹಗರಣವಾಗಿದೆ. ಇದೀಗ ಜಾರ್ಕಂಡ್‌ನಲ್ಲಿ ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಭ್ರಷ್ಟಾಚಾರದ ಹಣ ಪತ್ತೆಯಾಗಿದೆ. 40 ಮಷಿನ್ ಬಳಸಿದರು ಹಣ ಎಣಿಕೆ ಮುಕ್ತಾಯವಾಗಿಲ್ಲ. ಕಾಂಗ್ರೆಸ್‌ಗೆ ಅಭಿವೃದ್ಧಿ ಬಗ್ಗೆ ಹೇಳಿಕೊಂಡು ಚುನಾವಣೆ ಎದುರಿಸುವ ನೈತಿಕ ಶಕ್ತಿ ಇಲ್ಲ. ಹಣವನ್ನು ಹಂಚಿ ಜನರನ್ನು ಕೊಂಡುಕ್ಕೊಳ್ಳಲು ತಯಾರಿ ಮಾಡಿದ್ದಾರೆ. ಅದರ ಭಾಗವಾಗಿಯೇ ಈ 350 ಕೋಟಿ ಪತ್ತೆಯಾಗಿದೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಹಣ ಮಾಡಲು ಮುಂದಾಗಿದ್ದಾರೆ. ಕಳೆದ 6 ತಿಂಗಳಲ್ಲಿ ರಾಜ್ಯದಲ್ಲಿ ಸರ್ಕಾರ ಬಣ್ಣ ಬಯಲಾಗಿದೆ. ಬರ ಇದ್ದರೂ ಸಚಿವರುಗಳು ಜಿಲ್ಲೆಗಳಿಗೆ ಭೇಟಿ ನೀಡುತ್ತಿಲ್ಲ. ಬರ ಪರಿಹಾರಕ್ಕೆ ಹಣ ಇಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಲ್ಪಸಂಖ್ಯಾತರ ಓಲೈಕೆಯಲ್ಲಿ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾದವರ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ ಮಾತನಾಡಿ, ಜಾರ್ಖಂಡ್ ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರಿಗೆ ಸೇರಿದ ಸಂಸ್ಥೆ ಮೇಲೆ ನಿರಂತರ ದಾಳಿ ಮಾಡಿದ್ದು 350ಕ್ಕೂ ಹೆಚ್ಚು ಕೋಟಿ ಹಣ ಪತ್ತೆಯಾಗಿದೆ. ಇವರು ರಾಹುಲ್ ಗಾಂಧಿ ಅವರ ಆಪ್ತರು ಕೂಡ ಆಗಿದ್ದು, ಲೋಕಸಭೆ ಚುನಾವಣೆಗೆ ಹಣ ಸಂಗ್ರಹದಲ್ಲಿ ಕಾಂಗ್ರೆಸ್ ತೊಡಗಿಕೊಂಡಿರುವುದು ಇದರಿಂದ ಗೊತ್ತಾಗುತ್ತಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಸುನೀಲ್ ಹೆಗಡೆ ಮಾತನಾಡಿ, ಸ್ವಾತಂತ್ಯ ಬಂದಾಗಿನಿಂದ ಅಧಿಕಾರದಲ್ಲಿದ್ದ ಎಲ್ಲ ಕಾಂಗ್ರೆಸ್ ನಾಯಕರು ಕೂಡ ಭ್ರಷ್ಟಾಚಾರ ನಡೆಸಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಬಂದ ಬಳಿಕ ದೇಶ ನಾಲ್ಕನೇ ಆರ್ಥಿಕತೆ ಶಕ್ತಿಯಾಗಿದೆ. ದೇಶದಲ್ಲಿ ಭ್ರಷ್ಟಾಚಾರ ನಡೆಸುವವರನ್ನು ಮುಂದಿನ ದಿನಗಳಲ್ಲಿ ಜನ ತಿರಸ್ಕಾರ ಮಾಡಬೇಕು ಎಂದರು.

ಸುಪ್ರೀಂಕೋರ್ಟ್ ತೀರ್ಪಿಗೆ ಮಾಜಿ ಸ್ಪೀಕರ್ ಮೆಚ್ಚುಗೆ
ಕಾಶ್ಮೀರದಲ್ಲಿ ಆರ್ಟಿಕಲ್ಸ್ 370 ರದ್ದತಿ ಮಾಡಿರುವುದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದ ಹಿನ್ನೆಲೆಯಲ್ಲಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆರ್ಟಿಕಲ್ 370 ರದ್ದತಿಯನ್ನು ಪ್ರಶ್ನಿಸಿ ಕಾಂಗ್ರೆಸ್ ಮನಸ್ಥಿತಿಯ ಕೆಲವರು ಸುಪ್ರಿಂ ಕೋರ್ಟಿನಲ್ಲಿ ದಾವೆ ಹೂಡಿದ್ದರು. ಆದರೆ ಇಂದು ಅವರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಇದು ಸಂತಸದ ಸಂಗತಿ.
ಈ ಹಿಂದೆ ಕೇಂದ್ರದ ಬಿಜೆಪಿ ಸರಕಾರವು ಆರ್ಟಿಕಲ್ 370 ನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕರಿಸಿ, ಜಾರಿಗೆ ತಂದಿತ್ತು. ಬಳಿಕ ಕಾಶ್ಮೀರವನ್ನು ವಿಶ್ವದ ಸುಂದರ ಪ್ರವಾಸಿ ತಾಣವಾಗಿ ಮಾಡಲು ಬಿಜೆಪಿ ಮುಂದಾಗಿತ್ತು. ಆದರೆ ಅದನ್ನು ಪ್ರಶ್ನಿಸಿದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿ ಐತಿಹಾಸಿಕ ತೀರ್ಪು ನೀಡಿದೆ. ಈ ಮೂಲಕ ದೇಶದ ಸಮಗ್ರತೆಗೆ ನ್ಯಾಯಾಲಯದ ತೀರ್ಪು ಇನ್ನಷ್ಟು ಪುಷ್ಟಿ ನೀಡಿದೆ ಎಂದರು.
ಕಮಲದ ಹೂವೇ ಅಭ್ಯರ್ಥಿ
ಇತ್ತೀಚಿಗೆ ನಡೆದ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಇನ್ನಷ್ಟು ಹುರುಪು ಬಂದಿದೆ. ಕೆನರಾ ಕ್ಷೇತ್ರವನ್ನೂ ಸೇರಿದಂತೆ ರಾಜ್ಯದ 28 ಕ್ಷೇತ್ರದಲ್ಲಿ ಬಿಜೆಪಿಯು ಗೆಲುವು ಸಾಧಿಸುತ್ತದೆ. ಜಿಲ್ಲೆಯ ಕ್ಷೇತ್ರಕ್ಕೆ ಈಗಾಗಲೇ ಅಭ್ಯರ್ಥಿ ಸಿಕ್ಕಿದ್ದಾರೆ. ಕಮಲದ ಹೂವೇ ನಮ್ಮ ಅಭ್ಯರ್ಥಿ ಎಂದರು.
ಪಕ್ಷದ ವರಿಷ್ಠರ ತೀರ್ಮಾನಕ್ಕೆ ಎಲ್ಲಾ ಕಾರ್ಯಕರ್ತರೂ ಬದ್ಧ. ಹೀಗಾಗಿ ಸದ್ಯ ಕಮಲದ ಹೂವು ನಮ್ಮ ಅಭ್ಯರ್ಥಿ. ಯಾರಿಗೆ ಟಿಕೆಟ್ ನೀಡಿದರೂ ಸಂಪೂರ್ಣ ಬೆಂಬಲ ಇದೆ. ವ್ಯಕ್ತಿಯ ಹೆಸರನ್ನು ಹೈಕಮಾಂಡ್ ನಿರ್ಧರಿಸಲಿದೆ ಎಂದು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.












Click it and Unblock the Notifications