ಗೋಪಾಷ್ಠಮಿಯ ದಿನ ಕುಲ ನಾಶ: ಇಂದಿರಾಗಾಂಧಿಗೆ ಸಿಕ್ಕ ಶಾಪ ವಿವರಿಸಿದ ಸಂಸದ ಅನಂತ ಕುಮಾರ್ ಹೆಗಡೆ
ಕಾರವಾರ, ಜನವರಿ 13: ದೊಡ್ಡ ತಪಸ್ವಿ ಕರಪಾತ್ರಿ ಮಹಾರಾಜರು ಇಂದಿರಾಗಾಂಧಿ ಅವರಿಗೆ ಶಾಪ ಕೊಟ್ಟರು. ಅದರಂತೆ ಬಾಂಬ್ ಬ್ಲಾಸ್ಟ್ ನಲ್ಲಿ ರಾಹುಲ್ ಗಾಂಧಿಯೂ ಸತ್ತಿದ್ದರು ಎಂದು ಮಾತಿನ ಭರದಲ್ಲಿ ಹಿಡಿತ ತಪ್ಪಿ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದ ಘಟನೆ ಕುಮಟಾದಲ್ಲಿ ನಡೆದಿದೆ.
ಕುಮಟಾದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಅಂದು ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಗೋ ಹತ್ಯೆ ನಿಷೇಧದ ಬಗ್ಗೆ ದೊಡ್ಡ ಆಂದೋಲನ ನಡೆದಿತ್ತು. ಈ ಆಂದೋಲನದಲ್ಲಿ ಗೋಲಿಬಾರ್ ಆಗಿ ಹತ್ತಾರು ಸಂತರೂ ಸತ್ತರು. ಇಂದಿರಾಗಾಂಧಿ ಸಮ್ಮುಖದಲ್ಲಿ ಈ ಹತ್ಯೆ ನಡೆಯಿತು. ಅಲ್ಲದೆ ನೂರಾರು ಗೋವುಗಳನ್ನೂ ಗುಂಡಿಟ್ಟು ಕೊಲ್ಲಲಾಯಿತು ಎಂದು ಹೇಳಿದರು.

ಇನ್ನು ಇದೇ ಕಾರಣಕ್ಕೆ ದೊಡ್ಡ ತಪಸ್ವಿ ಕರಪಾತ್ರಿ ಮಹಾರಾಜರು ಇಂದಿರಾಗಾಂಧಿ ಅವರಿಗೆ ಗೋಪಾಷ್ಠಮಿ ದಿನದಂದೇ ನಿನ್ನ ಕುಲ ನಾಶವಾಗಲಿದೆ ಎಂದು ಶಾಪ ನೀಡಿದ್ದರು. ಅದರಂತೆ ಗೋಪಾಷ್ಠಮಿಯಂದೇ ಒಬ್ಬೊಬ್ಬರು ಅಂತ್ಯವಾದರು. ವಿಮಾನ ದುರಂತದಲ್ಲಿ ಸಂಜಯ್ ಗಾಂಧಿ ಸತ್ತಿದ್ದು ಗೋಪಾಷ್ಠಮಿಯಂದು. ಇಂದಿರಾಗಾಂಧಿಗೆ ಗುಂಡಿಟ್ಟು ಕೊಂದಿದ್ದು ಗೋಪಾಷ್ಠಮಿಯಂದು. ಬಾಂಬ್ ಬ್ಲಾಸ್ಟ್‍ನಲ್ಲಿ ಸತ್ತಿದ್ದು, ರಾಜೀವ್ ಗಾಂಧಿ ಎನ್ನುವ ಬದಲು ರಾಹುಲ್ ಗಾಂಧಿ ಸತ್ತಿದ್ದರು ಎಂದರು. ಬಳಿಕ ಕಾರ್ಯಕರ್ತರು ರಾಹುಲ್ ಗಾಂಧಿ ಅಲ್ಲ ರಾಜೀವ್ ಗಾಂಧಿ ಎಂದಾಗ ಕೈ ಮುಗಿದು ರಾಜೀವ್ ಗಾಂಧಿ ಎಂದರು.
ಇನ್ನು ಇದೇ ಸಭೆಯಲ್ಲಿ ಬಾಬ್ರಿ ಮಸೀದಿ ನಿರ್ನಾಮ ಆದಂತೆ ಭಟ್ಕಳದ ಚಿನ್ನದ ಪಳ್ಳಿಯೂ ಅದರ ಸಾಲಿಗೆ ಸೇರಲಿದೆ. ಇದನ್ನು ಬೇಕಾದರೇ ಬೆದರಿಕೆ ಅಂತ ಬೇಕಾದರೂ ತಿಳಿಯಿರಿ ಎಂದೂ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿದರು.

ಬಾಬ್ರಿ ಮಸೀದಿ ನಿರ್ನಾಮದಂತೆ ಮಾಡುವುದು ಗ್ಯಾರಂಟಿಯೇ. ಇದು ಹಿಂದೂ ಸಮಾಜದ ತೀರ್ಮಾನ. ಅನಂತ್ ಕುಮಾರ್ ಹೆಗಡೆ ತೀರ್ಮಾನ ಅಲ್ಲ. ಶಿರಸಿಯ ಸಿಪಿ ಬಜಾರ್‍ದಲ್ಲಿರುವ ಮಸೀದಿ ಇರುವುದು ಅದು ವಿಜಯ ವಿಠ್ಠಲ ದೇವಸ್ಥಾನ. ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಅದು ಮಾರುತಿ ದೇವಸ್ಥಾನ. ದೇಶದ ಹಳ್ಳಿಯ ಮೂಲೆ ಮೂಲೆಗಳಲ್ಲಿ ಅಪಮಾನಗೊಂಡಿರುವ ಅನೇಕ ಸಂಕೇತಗಳಿವೆ. ಅದನ್ನು ಕಿತ್ತುಹಾಕೋ ತನಕ ಈ ಹಿಂದು ಸಮಾಜ ಮತ್ತೆ ವಾಪಾಸ್ ಕೂತುಕೊಳ್ಳೋದಿಲ್ಲ. ಈಗ ರಣಭೈರವ ಎದ್ದಾಗಿದೆ. ಮತ್ತೆ ಕೂರುವ ಪ್ರಶ್ನೆಯೇ ಇಲ್ಲ. ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳದೇ ಇದ್ದರೆ ಇದು ಹಿಂದೂ ರಕ್ತವೇ ಅಲ್ಲ ಎಂದು ಕಾರ್ಯಕರ್ತರ ಎದುರು ಹೇಳಿಕೊಂಡಿದ್ದಾರೆ.












Click it and Unblock the Notifications