ದೀಪಾವಳಿ ಸಂದರ್ಭದಲ್ಲಿ ಎ.ಆರ್ ಮಣಿಕಾಂತ್ 'ಮತ್ತೆ ಹಾಡಿತು ಕೋಗಿಲೆ' ಮಾರುಕಟ್ಟೆಗೆ
ಪತ್ರಕರ್ತ- ಲೇಖಕ ಎ. ಆರ್. ಮಣಿಕಾಂತ್ ಅವರ ಹೊಸ ಪುಸ್ತಕ ' ಮತ್ತೆ ಹಾಡಿತು ಕೋಗಿಲೆ' ದೀಪಾವಳಿ ಸಂದರ್ಭದಲ್ಲಿ ಅಕ್ಟೋಬರ್ 24 ರಂದು ರಾಜ್ಯದೆಲ್ಲೆಡೆ ಲಭ್ಯವಾಗಲಿದೆ.
ನೀಲಿಮಾ ಪ್ರಕಾಶನ ಹೊರತಂದಿರುವ ಈ ಪುಸ್ತಕದಲ್ಲಿ ಅಬಾಲವೃದ್ಧರಾದಿಯಾಗಿ ಇಲ್ಲರಿಗೂ ಇಷ್ಟವಾಗುವ 31 ಸ್ಪೂರ್ತಿದಾಯಕ ಕಥೆಗಳು, ವ್ಯಕ್ತಿತ್ವವಿಕಸನಕ್ಕೆ ಪೂರಕವಾಗುವ ಸ್ಮರಣೀಯ ನಿಜಘಟನೆಗಳು, ನೀತಿಬೋಧಕ ಪ್ರಸಂಗಗಳು, ಯಾರೊಬ್ಬರ ಸಹಾಯವಿಲ್ಲದೆಯೂ ಅನನ್ಯ ಸಾಧನೆಯ ಮೂಲಕ ರೋಲ್ ಮಾಡೆಲ್ ಗಳಾಗಿರುವ ಸಾಧಕರ ಕಥೆಗಳಿವೆ. ಸರಳ, ಸುಲಲಿತ ಮತ್ತು ಹೃದಯಸ್ಪರ್ಶಿ ಭಾಷೆಯ ನಿರೂಪಣೆ ಈ ಕೃತಿಯ ಹೆಚ್ಚುಗಾರಿಕೆ.
ನವಕರ್ನಾಟಕ, ಸಪ್ನಾ ಬುಕ್ ಹೌಸ್, ವಸಂತ ಪ್ರಕಾಶನ, ವೀರಲೋಕ ಬುಕ್ಸ್, ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ, ವಿದ್ಯಾಮಂದಿರ ಬುಕ್ ಹೌಸ್ ಸೇರಿದಂತೆ ರಾಜ್ಯದ ಎಲ್ಲಾ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಅಕ್ಟೋಬರ್ 24 ರಿಂದ ದೊರೆಯಲಿದೆ.

ಈ ಪುಸ್ತಕ ಕುರಿತಂತೆ ಸ್ವತಃ ಲೇಖಕ ಮಣಿಕಾಂತ್ ಹೇಳಿರುವ ಮಾತುಗಳು ಇಲ್ಲಿವೆ.. ಜೊತೆಗೆ ಅಭಿಮಾನಿಗಳು ವಿಡಿಯೋ ಮಾಡಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಮಣಿಕಾಂತ್ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದನ್ನು ಯಥಾವತ್ತಾಗಿ ಇಲ್ಲಿ ಮೂಡಿಸಲಾಗಿದೆ:
ತಾಳು ಮನವೇ ತಾಳು, ತುಂಬ ಉಳಿದಿದೆ ಬಾಳು...
ಹೌದಲ್ಲವಾ? ಒಂದು ಯಶಸ್ಸಿಗಾಗಿ, ಗೆಲುವಿಗಾಗಿ, ಸಂಭ್ರಮಕ್ಕಾಗಿ, ಸಂತಸದ ಕ್ಷಣಕ್ಕಾಗಿ ಹಗಲಿರುಳು ದುಡಿದಿರುತ್ತೇವೆ. ದಣಿದಿರುತ್ತೇವೆ. ನಾವು ಅಂದುಕೊಂಡಂತೆಯೇ ಆಗಿಬಿಟ್ಟರೆ, ಆನಂತರದಲ್ಲಿ ಹೇಗೆಲ್ಲ ಬದುಕಬಹುದು ಎಂದು ಕನಸು ಕಂಡಿರುತ್ತೇವೆ. ಗೆಲುವೆಂಬ ಆ ಗಂಧದ ಹಾರ ನಮ್ಮ ಕೊರಳಿಗೆ ಬೀಳಲಿ ಎಂದು ಬಯಸುತ್ತೇನೆ. ಅದಕ್ಕಾಗಿ ಪ್ರಾರ್ಥಿಸಿರುತ್ತೇವೆ. ಪೂಜೆ ಮಾಡಿಸುತ್ತೇವೆ. ಹರಕೆ ಕಟ್ಟಿರುತ್ತೇವೆ. ಹಾರೈಕೆಗೆ ತಲೆಯೊಡ್ಡಿರುತ್ತೇವೆ. ನಮ್ಮ ಪ್ರಯತ್ನ, ಪ್ರಾಮಾಣಿಕತೆ ಮತ್ತು ಆತ್ಮವಿಶ್ವಾಸವನ್ನು ಪಣಕ್ಕಿಟ್ಟು ಕಾದಿರುತ್ತೇವೆ. ಅಂಥ ಸಂದರ್ಭದಲ್ಲಿ, ಗೆಲುವು ಕೈ ಜಾರಿ, ಸೋಲೆಂಬುದು ಹೆಗಲೇರಿ ಕೂತುಬಿಡುತ್ತದೆ.
ಮನಸ್ಸು ಕದಡಿ ಹೋಗುವುದು, ಆತ್ಮವಿಶ್ವಾಸದ ಬಲೂನು ಒಡೆದುಹೋಗುವುದೇ ಆಗ. ನಮಗೆ ದೈವಬಲವಿಲ್ಲ. ಅದೃಷ್ಟವೂ ಇಲ್ಲ. ಬಯಸಿದ್ದು ಸಿಗುವುದಿಲ್ಲ. ಸೋಲುಗಳಿಂದ ಮುಕ್ತಿಯಿಲ್ಲ. ಎಸ್, ನಮ್ಮ ಪಾಲಿಗೆ ಒಳ್ಳೆಯ ದಿನಗಳೇ ಇಲ್ಲ. ಪರಿಶ್ರಮ, ತಪನೆ, ಶ್ರದ್ಧೆ- ಯಾವುದಕ್ಕೂ ಅರ್ಥವಿಲ್ಲ ಅನ್ನಿಸಿಬಿಡುತ್ತದೆ. ಸಂಕಟ- ಹತಾಶೆ ಜೊತೆಯಾಗುತ್ತದೆ. ಅಂಥ ಸಂದರ್ಭದಲ್ಲಿ ದುಡುಕಬಾರದು, ಹೆದರಬಾರದು, ತಾಳ್ಮೆ ಕಳೆದುಕೊಳ್ಳಬಾರದು. ತಾಳು ಮನವೇ ತಾಳು ಎಂದು ತನುವ ಸಂತೈಸಿಕೊಂಡು ಹೆಜ್ಜೆ ಮುಂದಿಡಬೇಕು. ನೆನಪಿರಲಿ: ಬೆಟ್ಟ ಹತ್ತುವಾಗ ಆಯಾಸವಾಗುತ್ತದೆ. ಕಾಲು ನೋಯುತ್ತದೆ. ನೆತ್ತಿ ಸುಡುತ್ತದೆ. ಹೇಗೋ ಸಾವರಿಸಿಕೊಂಡು 620 ನೇ ಮೆಟ್ಟಿಲು ದಾಟಿದ ನಂತರವಷ್ಟೇ- ಶ್ರವಣಬೆಳಗೊಳದಲ್ಲಿ ಬಾಹುಬಲಿಯ ದರ್ಶನವಾಗುತ್ತದೆ! ಒಂದೊಂದು ಮೆಟ್ಟಿಲು ಹತ್ತಿದಾಗಲೂ ಸೋಲನ್ನು ಸೋಲಿಸಿದ್ದೇವೆ ಅಂದುಕೊಳ್ಳುವುದು ಜಾಣತನ.

ನಾವು ನತದೃಷ್ಟರು, ದುರಾದೃಷ್ಟವಂತರು ಎಂಬುದು ಹಲವರ ನೋವಿನ ನುಡಿ. ಆದರೆ, ನಮಗಿಂತ ಹೆಚ್ಚು ನೋವುಂಡವರು, ಅಸಹಾಯಕ ರು ನಮ್ಮ ಸುತ್ತಲೂ ಇರುತ್ತಾರೆ, ಮತ್ತು ಅಂಥವರ ಪೈಕಿ ಕೆಲವರು ಅನನ್ಯ ಸಾಧನೆಯ ಮೂಲಕ, ಕರುಣಾರ್ದ್ರ ಸೇವೆಯ ಮೂಲಕ, ನಿಷ್ಕಲ್ಮಶ ಪ್ರೀತಿಯ ಮೂಲಕ ಜಗವ ಗೆದ್ದಿರುತ್ತಾರೆ. ಅಂಥವರನ್ನು ಕಂಡಾಗ ಮತ್ತೆ ನೆನಪಾಗುವುದು ಅದೇ ಹಾಡು: ತಾಳು ಮನವೇ ತಾಳು, ತುಂಬ ಉಳಿದಿದೆ ಬಾಳು...
ಅಂದಹಾಗೆ, ಇದು ನನ್ನ ಹತ್ತನೇ ಪುಸ್ತಕ. ಪ್ರತಿಯೊಂದು ಪುಟವನ್ನೂ ತುಂಬ ಶ್ರದ್ಧೆಯಿಂದ ರೂಪಿಸಿದ್ದೇವೆ. ಇಲ್ಲಿನ ಬರಹಗಳು ಕೃಷ್ಣನ ಕೊಳಲ ನಾದದಂತೆ ಎಲ್ಲರಿಗೂ ಇಷ್ಟವಾಗಲಿ. ಮುದ್ದುಕಂದನ ನಗೆಯಂತೆ ಎಲ್ಲರ ಮನ ಗೆಲ್ಲಲಿ, ಎಂದು ಪ್ರಾರ್ಥನೆ.
****
ಕೋಗಿಲೆ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವುದಿಲ್ಲ. ಕಾಗೆ ಇಲ್ಲದ ಸಂದರ್ಭ ನೋಡಿಕೊಂಡು ಅದರ ಗೂಡಲ್ಲಿ ಮೊಟ್ಟೆಯಿಟ್ಟು ಬಂದುಬಿಡುತ್ತದೆ. ಈ ಕಪಟ ಗೊತ್ತಿಲ್ಲದ ಕಾಗೆ, ಕೋಗಿಲೆಯ ಮೊಟ್ಟೆಗೂ ಕಾವು ಕೊಟ್ಟು ಮರಿ ಮಾಡಿ ಅದನ್ನು ಸಾಕುತ್ತದೆ. ಮುಂದೆ ಸತ್ಯ ಗೊತ್ತಾದಾಗ, ಕೋಗಿಲೆಯ ಮರಿಯನ್ನು ಗೂಡಿಂದ ಆಚೆ ತಳ್ಳುತ್ತದೆ. ಇದು ನಮಗೆಲ್ಲಾ ಗೊತ್ತಿರುವ ಪ್ರಕೃತಿ ರಹಸ್ಯ, ಕಣ್ಣೆದುರಿನ ವಾಸ್ತವ.
ಹೀಗೆ ದಿಢೀರನೆ ಬೀದಿಗೆ ಬೀಳುತ್ತದಲ್ಲ; ಅದು ಕೋಗಿಲೆಯ ಬದುಕಿನ ಮೊದಲ ಸೋಲು. ನಂತರದ ಅದೆಷ್ಟೋ ದಿನಗಳನ್ನು ತಬ್ಬಲಿತನ, ಅಸಹಾಯಕತೆ, ಅನಾಥಭಾವ, ಕಷ್ಟ, ಕಣ್ಣೀರು, ನೋವು, ನಿಟ್ಟುಸಿರಿನ ಜೊತೆಗೇ ಕಳೆಯುವ ಕೋಗಿಲೆಯ ಬದುಕಲ್ಲಿ ಕಡೆಗೂ ' ಬಂಗಾರದ ಕ್ಷಣವೊಂದು' ಬಂದುಬಿಡುತ್ತದೆ. ಮಾಮರದಲ್ಲಿ ಚಿಗುರು ಕಾಣಿಸಿದ ಕ್ಷಣದಿಂದಲೇ ಕೋಗಿಲೆಯ ಕೊರಳು ಸಂಗೀತದ ಆಲಯವಾಗುತ್ತದೆ. ಕುಹೂ...ಕುಹೂ ದನಿಯಲ್ಲಿ ಸಪ್ತಸ್ವರ ಕೇಳಿಸುತ್ತದೆ. ಆ ಸುಮಧುರ ದನಿಗೆ ಜಗತ್ತು ತಲೆದೂಗುತ್ತದೆ. ಕುಣಿದು, ನಲಿದು, ಮಣಿದು ಕೃತಜ್ಞತೆ ಸಲ್ಲಿಸುತ್ತದೆ. ನಿರಂತರ ಪರಿಶ್ರಮ ಮತ್ತು ಹೋರಾಟಕ್ಕೆ ಬಳುವಳಿಯಾಗಿ ದೊರೆಯುವ ಗೆಲುವು ಎಂಬ ಅಮೃತ ಸಿಂಚನಕ್ಕೆ ಸಿಗುವ ಗೌರವ ಇದು.
ಕಷ್ಟಗಳ ಕುಲುಮೆಯಲ್ಲಿ ಬೇಯುತ್ತಲೇ ಅಂಥದೊಂದು ಅಮೃತ ಘಳಿಗೆಗೆ ಹಂಬಲಿಸಿದ, ಸೋಲುಗಳ ಸರಪಳಿಯನ್ನು ತುಂಡರಿಸಿ ಗೆಲುವಿನ ಗಾಳಿಪಟವನ್ನು ಮುಗಿಲಿಗೆ ಹಾರಿಬಿಟ್ಟ, ಅಂತಃಕರಣವನ್ನೇ ಉಸಿರಾಗಿಸಿಕೊಂಡ ಹೃದಯವಂತರ ಕಥೆಗಳು ಈ ಪುಸ್ತಕದ ಪುಟಗಳನ್ನೂ ತುಂಬಿಕೊಂಡಿವೆ. ಆ ಕೋಗಿಲೆಗಳ ಬದುಕಿನ ಹಾಡು ನಮ್ಮೊಳಗೂ ಉಳಿಯಲಿ.
ಎ. ಆರ್. ಮಣಿಕಾಂತ್
ಬೆಂಗಳೂರು
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications