ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ್ದ ಮಹಿಳೆ ಸಾವು, ದೂರು ದಾಖಲು!
ಬೆಂಗಳೂರು, ಮೇ 28: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಿದ್ದ ದೂರುದಾರ ಮಹಿಳೆಯು ದಿಢೀರ್ ಸಾವನ್ನಪ್ಪಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸದೇ ಸಾಗಿಸಲು ಅನುಮತಿಸಿದ ವೈದ್ಯರ ವಿರುದ್ಧ ತನಿಖೆ ನಡೆಸುವಂತೆ ಅಖಿಲ ಭಾರತ ಮಹಿಳಾ ಸಂಘಟನೆಯು ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ
ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ನಾನೋ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಮಹಿಳೆ ಅಸಹಜ ಸಾವಿಗೆ ಕಾರಣರಾದವರ ಬಗ್ಗೆ ಸೂಕ್ತ ಮತ್ತು ಸಮಗ್ರ ತನಿಖೆಗೆ DCP ಸೌತ್ ಈಸ್ಟ್ ಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕರ್ನಾಟಕ ರಾಜ್ಯ ಸಮಿತಿಯಿಂದ ದೂರು ನೀಡಲಾಗಿದೆ. ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಗೌರಮ್ಮ ನೇತೃತ್ವದಲ್ಲಿ ದೂರು ನೀಡಲಾಗಿದೆ.

ದೂರಿನಲ್ಲಿ ಏನಿದೆ?
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರವರ ವಿರುದ್ದ ಮಹಿಳೆಯೊಬ್ಬರು ಪೋಕ್ಸೋ ಕೇಸ್ ದಾಖಲಿಸಿದ್ದರು. 17 ವರ್ಷದ ತಮ್ಮ ಪುತ್ರಿ ಮೇಲೆ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆ ಬೆಂಗಳೂರಿನ ಸದಾಶಿವ ನಗರ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ 2024 ಮಾರ್ಚ್ 14ರಂದು ಯಡಿಯೂರಪ್ಪ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣದ ದಾಖಲು ಮಾಡಲಾಗಿತ್ತು. ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾದರೆ ಬಂಧನವಾಗಬೇಕು ಎಂದು ಆ ಕಾನೂನು ಹೇಳುತ್ತದೆ. ಆದರೆ ಯಡಿಯೂರಪ್ಪರವರ ಬಂಧನವಾಗಿಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ಸತ್ಯ.
ತನ್ನ ಅಪ್ರಾಪ್ತ ಪುತ್ರಿ ಮೇಲಾದ ಲೈಂಗಿಕ ದೌರ್ಜನ್ಯದ ವಿರುದ್ದ ಏಕಾಂಗಿಯಾಗಿ ಬಿ ಎಸ್ ಯಡಿಯೂರಪ್ಪ ವಿರುದ್ದ ಕಾನೂನು ಹೋರಾಟ ನಡೆಸುತ್ತಿದ್ದ ಮಹಿಳೆಗೆ 'ಕೇಸ್ ವಾಪಸ್ ಪಡೆಯುವಂತೆ' ಒತ್ತಡಗಳಿತ್ತು. ತೀರಾ ಇತ್ತಿಚೆಗೆ ಜನವಾದಿ ಮಹಿಳಾ ಸಂಘಟನೆಯನ್ನು ಸಂಪರ್ಕಿಸಿದ್ದ ಸದರಿ ಮಹಿಳೆಯು ಕಾನೂನು ಹೋರಾಟಕ್ಕೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದರು. ಜನವಾದಿ ಮಹಿಳಾ ಸಂಘಟನೆಯು ಕರ್ನಾಟಕ ಹಿರಿಯ ಕ್ರಿಮಿನಲ್ ಅಡ್ವಕೇಟ್ ಎಸ್ ಬಾಲನ್ ಅವರನ್ನು ಸಂಪರ್ಕಿಸಿ ಕಾನೂನು ಸೇವೆ ನೀಡುವಂತೆ ಮನವಿ ಮಾಡಿತ್ತು. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಕೇಸ್ ಮಾಹಿತಿಗಳನ್ನು ಪಡೆದುಕೊಂಡು ಉಚಿತವಾಗಿ ಕಾನೂನು ಸೇವೆ ನೀಡಲು ಒಪ್ಪಿದ್ದರು.
ಹಿರಿಯ ನ್ಯಾಯವಾದಿ ಎಸ್ ಬಾಲನ್ ವರ ಜೊತೆ 2024 ಮೇ 25 ರಂದು ಸಂಜೆ ದೂರವಾಣಿಯಲ್ಲಿ ಮಾತನಾಡಿದ್ದರು. ದಾಖಲೆಗಳೊಂದಿಗೆ ಸೋಮವಾರ ಕಚೇರಿಗೆ ಬರುವಂತೆ ಸದರಿ ಮಹಿಳೆಗೆ ಬಾಲನ್ ವರು ಸೂಚಿಸಿದ್ದರು. 2024 ಮೇ 26 ರಂದು ಭಾನುವಾರ ಸಂಜೆ ಹುಳಿಮಾವು ಆಸ್ಪತ್ರೆಯಲ್ಲಿ ಸದ್ರಿ ಮಹಿಳೆ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಮಾದ್ಯಮಗಳಲ್ಲಿ ಮಹಿಳೆ ಶ್ವಾಸಕೋಶದ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. 24 ಗಂಟೆಯ ಮೊದಲು ಕಾನೂನು ಸಮರ ನಡೆಸುವಷ್ಟು ಸಮರ್ಥರಾಗಿದ್ದವರು.ಏಕಾಏಕಿ ಶ್ವಾಸಕೋಶದ ಕ್ಯಾನ್ಸರ್ ನಿಂದ ನಿಧನರಾಗಲು ಹೇಗೆ ಸಾದ್ಯ ? ಎಂದು ದೂರಿನಲ್ಲಿ ಪ್ರಶ್ನಿಸಿದ್ದಾರೆ.
ಜನವಾದಿ ಮಹಿಳಾ ಸಂಘಟನೆಗೆ ನೆರವು ಕೇಳಿ ಬರುವ ಮಹಿಳೆಯರನ್ನು ಪ್ರಾಥಮಿಕವಾಗಿ ವಿಚಾರಣೆಗೆ ಒಳಪಡಿಸುತ್ತೇವೆ. ಜನವಾದಿ ಮಹಿಳಾ ಸಂಘಟನೆ ಅರ್ಥ ಮಾಡಿಕೊಂಡಂತೆ ಮಹಿಳೆಗೆ ಪುತ್ರಿ ಹೊರತುಪಡಿಸಿ ಇನ್ನಾರೂ ಸಂಬಂಧಿಕರು ಇಲ್ಲ. ಆದರೆ ಆಸ್ಪತ್ರೆಯ ಹಿಂದುಗಡೆಯ ಬಾಗಿಲಿನಿಂದ ಮಹಿಳೆಯ ಶವವನ್ನು ವಿಲೇವಾರಿ ಮಾಡಿದ ಸಂಬಂಧಿಕರು ಯಾರು ? ಹಿಂಬದಿಯ ಬಾಗಿಲು ಯಾಕೆ ಬಳಸಿದರು. ಈವರೆಗೂ ಮಹಿಳೆಯ ಬಗ್ಗೆ ಕಾಳಜಿ ವಹಿಸದೇ ಇದ್ದ ಕುಟುಂಬಸ್ಥರು ದಿಡೀರನೆ ಆಗಮಿಸಿದ್ದು ಹೇಗೆ ?
ಶ್ವಾಸಕೋಶದ ಕ್ಯಾನ್ಸರ್ ಎಂಬುದು ದಿಡೀರನೆ ಸಾವು ತರುವಂತಹ ತೀವ್ರ ಹೃದಯಾಘಾತ ಮಾದರಿಯ ಖಾಯಿಲೆಯಲ್ಲ. ಏಕಾಏಕಿ ಅಸಹಜ ಸಾವು ಆದಾಗ ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಬೇಕಿತ್ತು. ಆದರೆ ವೈದ್ಯರು ಆ ಕರ್ತವ್ಯ ನಿರ್ವಹಿಸಿಲ್ಲ. ಹಾಗಾಗಿ ವೈದ್ಯರ ಮೇಲೆ ಇದ್ದ ಒತ್ತಡವೇನು ? ವೈದ್ಯರನ್ನು ಯಾರು ಯಾವಾಗ ಯಾಕಾಗಿ ಸಂಪರ್ಕಿಸಿದರು? ಇವೆಲ್ಲವು ಅನುಮಾನಾಸ್ದವಾಗಿದ್ದು ಈ ಕುರಿತು ಸಮಗ್ರ ತನಿಖೆಯಾಗಬೇಕು.












Click it and Unblock the Notifications