ವಿಧಾನ ಮಂಡಲ ಅಧಿವೇಶನ: ವಿಧಾನಸೌಧದಲ್ಲಿ ಯಾರು? ಏನಂದ್ರು?
ಬೆಂಗಳೂರು, ಡಿ. 09: ವಿಧಾನ ಮಂಡಲ ಆಧಿವೇಶನ ಮೂರನೇ ದಿನಕ್ಕೆ ಕಾಲಿಟ್ಟಿದೆ. ಶಾಸಕರ ಒತ್ತಾಯದಿಂದಾಗಿ 7 ದಿನಗಳ ಕಾಲ ನಡೆಯಬೇಕಾಗಿದ್ದ ವಿಧಾನ ಮಂಡಲ ಅಧಿವೇಶನ ನಾಲ್ಕೇ ದಿನಕ್ಕೆ ಮೊಟಕು ಗೊಳಿಸಲಾಗಿದೆ. ಹೀಗಾಗಿ ಕೊನೆಯ ಎರಡು ಡಿಸೆಂಬರ್ 14 ಹಾಗೂ 15ರಂದು ನಡೆಯಬೇಕಾಗಿದ್ದ ಒಂದು ರಾಷ್ಟ್ರ ಒಂದು ಚುನಾವಣೆ ಚರ್ಚೆಯನ್ನೂ ಕೂಡ ಮುಂದಿನ ಅಧಿವೇಶನದಲ್ಲಿ ಮಾಡಲು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಪ್ರಸಕ್ತ ರಾಜಕೀಯ ಬೆಳವಣಿಗೆಗಳು, ದೇಶಾದ್ಯಂತ ನಡೆಯುತ್ತಿರುವ ರೈತರ ಪ್ರತಿಭಟನೆ, ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಜೆಡಿಎಸ್ ಬೆಂಬಲ ಕುರಿತು ಕಲಾಪ ಆರಂಭಕ್ಕೂ ಮೊದಲು ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಆರ್. ಅಶೋಕ್, ಮಾಜಿ ಸಚಿವ ಯುಟಿ ಖಾದರ್ ಹಾಗೂ ಜೆಡಿಎಸ್ ಸದಸ್ಯ ಬಸವರಾಜ್ ಹೊರಟ್ಟಿ ಸೇರಿದಂತೆ ಬಹಳಷ್ಟು ನಾಯಕರು ಮಾತನಾಡಿದ್ದಾರೆ. ಯಾರು ಏನು ಮಾತನಾಡಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಮತ್ತೆ ಬಂದ್ ಮಾಡಬೇಡಿ: ಸಿಎಂ ಯಡಿಯೂರಪ್ಪ ಮನವಿ
ರೈತರ ಪ್ರತಿಭಟನೆ ಕುರಿತು ವಿಧಾನಸೌಧದಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ರೈತ ಮುಖಂಡರಲ್ಲಿ ಮನವಿ ಮಾಡುತ್ತೇನೆ. ನಿನ್ನೆ ಭಾರತ್ ಬಂದ್ ಮಾಡಿದ್ದೀರಿ, ಇವತ್ತು ಮತ್ತೆ ಬಂದ್, ಪ್ರತಿಭಟನೆ ಮಾಡುವುದು ಸರಿಯಲ್ಲ. ಜನರಿಗೆ ತೊಂದರೆ ಕೊಡುವುದು ಬೇಡ. ದಿನನಿತ್ಯ ಒಂದೊಂದು ಪ್ರತಿಭಟನೆ ಮಾಡೋದು ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರತಿದಿನ ಪ್ರತಿಭಟನೆ ಮಾಡೋಕೆ ಅವಕಾಶ ಮಾಡಿಕೊಡುವುದಿಲ್ಲ. ಏನೇ ಇದ್ದರೂ ಬನ್ನಿ, ಕುಳಿತು ಮಾತನಾಡೋಣ. ರೈತರ ಉತ್ಪನ್ನಕ್ಕೆ ಆದಾಯ ಹೆಚ್ಚಿಸಬೇಕಿದೆ. ನಿಮಗಿಂತ ಹೆಚ್ಚು ನಮಗೆ ನಿಮ್ಮ ಬಗ್ಗೆ ಕಾಳಜಿ ಇದೆ. ಪ್ರಧಾನಿ ಮೋದಿ ಕಾಳಜಿ ವಹಿಸಿ ಕಾಯಿದೆ ತರುತ್ತಿದ್ದಾರೆ. ರೈತ ಮುಖಂಡರೇ ಕುಳಿತು ಮಾತಾಡೋಣ ಬನ್ನಿ ಎಂದು ಪ್ರತಿಭಟನಾ ನಿರತ ಮುಖಂಡರಿಗೆ ಸಿಎಂ ಯಡಿಯೂರಪ್ಪ ಮನವಿ ಮಾಡಿದರು.

ಕಾಂಗ್ರೆಸ್ ನಾಯಕರದ್ದು ಇಬ್ಬುಗೆ ನೀತಿ: ಆರ್. ಅಶೋಕ್
ಭೂ ಸುಧಾರಣೆ ತಿದ್ದುಪಡಿ ಕಾಯ್ದೆಗೆ ನಾಂದಿ ಹಾಡಿದ್ದು ಕಾಂಗ್ರೆಸ್. ಅದನ್ನು ನಾವು ಕಾನೂನು ಮಾಡಿದ್ದೇವೆ. ಕಾಯ್ದೆಯ ಸೆಕ್ಷನ್ 79 ಎ, ಬಿ ತಿದ್ದುಪಡಿಗೆ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಂಪುಟ ಉಪ ಸಮಿತಿ ರಚಿಸಿ ತಿದ್ದುಪಡಿಗೆ ಒಪ್ಪಿಗೆ ಸೂಚಿಸಲಾಗಿತ್ತು. ಈಗ ವಿರೋಧ ಮಾಡಬೇಕು ಅಂತಾ ಕಾಂಗ್ರೆಸ್ ನಾಯಕರು ವಿರೋಧ ಮಾಡುತ್ತಿದ್ದಾರೆ ಎಂದು ಕಮದಾಯ ಸಚಿವ ಆರ್. ಅಶೋಕ್ ಅವರು ವಿಧಾನಸೌಧದಲ್ಲಿ ಹೇಳಿದ್ದಾರೆ.
79 ಎ ಹಾಗೂ ಬಿ ಸೆಕ್ಷನ್ ತೆಗೆದುಹಾಕಬೇಕೆಂದು ಅಂದೇ ಕಾಂಗ್ರೆಸ್ ಮುಖಂಡರು ಹೇಳಿದ್ದರು. ಕಾನೂನು ತಿದ್ದುಪಡಿಯಿಂದ ಇದೀಗ ಕಾಶ್ಮೀರದಲ್ಲೂ ಜಮೀನು ತೆಗೆದುಕೊಳ್ಳಲು ಎಲ್ಲರಿಗೂ ಅವಕಾಶ ನೀಡಲಾಗಿದೆ. ಮದ್ಯವರ್ತಿಗಳ ಹಿಡಿತದಲ್ಲಿ ರೈತರು ಸಿಲುಕುವಂತ ಪರಿಸ್ಥಿತಿ ತಂದಿದ್ದ ಕಾನೂನು ತೆಗೆದುಹಾಕಿದ್ದೇವೆ. ಹಿಂದೆ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಮುಖಂಡರು ಆ ಸೆಕ್ಷನ್ ಲಂಚಕ್ಕೆ ಎಡಮಾಡಿಕೊಟ್ಟಿದೆ ಎಂದು ಹೇಳಿಕೆ ನೀಡಿದ್ದಾರೆ. ಈಗ ಕಾಂಗ್ರೆಸ್ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಆರ್. ಅಶೋಕ್ ಹೇಳಿಕೆ ನೀಡಿದ್ದಾರೆ.

ರೈತರಿಗೆ ಅನ್ಯಾಯವಾಗಲು ಬಿಡಲ್ಲ: ಸಿ.ಟಿ. ರವಿ
ಎಪಿಎಂಸಿ ಯಾಯ್ದೆಗೆ ತಿದ್ದುಪಡಿಯಿಂದ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಎಪಿಎಂಸಿ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ, ಆ ವ್ಯವಸ್ಥೆ ಮೊದಲಿನಂತೆಯೆ
ಮುಂದುವರೆಯಲಿದೆ. ಮುಕ್ತ ಮಾರುಕಟ್ಟೆಯಲ್ಲಿ ರೈತ ಉತ್ಪನ್ನಗಳನ್ನು ಮಾರಾಟ ಮಾಡಿದ ಬಳಿಕ ಮೂರು ದಿನಗಳಲ್ಲಿ ಅವರುಗೆ ಹಣ ಪಾವತಿ ಆಗಬೇಕು. ಅದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಅವರು ವಿಧಾನಸೌಧದಲ್ಲಿ ಹೇಳಿಕೆ ನೀಡಿದ್ದಾರೆ.
ರೈತರನ್ನು ದಲ್ಲಾಳಿಗಳಿಂದ ಮುಕ್ತಗೊಳಿಸಲು ನಾವು ಕಾನೂನಿಗೆ ತಿದ್ದುಪಡಿ ತಂದಿದ್ದೇವೆ. ನಿಮಗೆ ಕಾನೂನಿನ ಕುರಿತು ಏನೇ ತಪ್ಪು ತಿಳುವಳಿಕೆಗಳಿದ್ದರೂ ಅದನ್ನು ನಾವು ಪರಿಹರಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರಿಗೆ ಸಿ.ಟಿ. ರವಿ ಹೇಳಿದ್ದಾರೆ.

ಯಾವ ಪಕ್ಷದಲ್ಲೂ ತತ್ವ-ಸಿದ್ದಾಂತ ಇಲ್ಲ: ಬಸವರಾಜ್ ಹೊರಟ್ಟಿ
ವಿಧಾನ ಪರಿಷತ್‌ನಲ್ಲಿ ಎಪಿಎಂಸಿ, ಭೂಸುಧಾರಣಾ ಕಾಯ್ದೆಗಳಿಗೆ ಬೆಂಬಲ ಕೊಟ್ಟಿರುವ ಕುರಿತು ಮಾತನಾಡಿರುವ ಜೆಡಿಎಸ್ ಹಿರಿಯ ಸದಸ್ಯ ಬಸವರಾಜ್ ಹೊರಟ್ಟಿ ಅವರು, ಬಿಜೆಪಿಗೆ ಬೆಂಬಲ ಕೊಟ್ಟಿರುವುದನ್ನು ಸಮರ್ಥನೆ ಮಾಡಿಕೊಂಡರು. ಈಗಿನ ರಾಜಕಾರಣ ಕಲುಷಿತಗೊಂಡಿದೆ. ಯಾವ ಪಕ್ಷದಲ್ಲೂ ತತ್ವ-ಸಿದ್ದಾಂತ ಇಲ್ಲ. ಕೆಲವೊಂದು ಸರಿ ತಪ್ಪುಗಳು ಆಗುತ್ತೇವೆ. ಅದಕ್ಕೆ ಏನು ಮಾಡುವುದಕ್ಕೂ ಆಗುವುದಿಲ್ಲ. ಕಳೆದ ಬಾರಿ ವಿಧೇಯಕ ಮಂಡನೆ ವೇಳೆ ನಾವು ಬಿಜೆಪಿಗೆ ಬೆಂಬಲ ಕೊಟ್ಟಿರಲಿಲ್ಲ.
ಬಳಿಕ ನಮ್ಮ ನಾಯಕರ ಜೊತೆ ಬಿಜೆಪಿಯವರು ಮಾತನಾಡಿದ್ದಾರೆ. ನಾವು ವಿರೋಧ ಮಾಡಿದ ಕೆಲವೊಂದು ಅಂಶಗಳನ್ನು ಕಾಯ್ದೆಯಲ್ಲಿ ತೆಗದು ಹಾಕಿದ್ದಾರೆ. ಹೀಗಾಗಿ ನಾವು ಬೆಂಬಲ ಕೊಟ್ಟಿದ್ದೇವೆ ಇದರಲ್ಲಿ ತಪ್ಪೇನಿದೆ? ಯಾವ್ ಪಕ್ಷದಲ್ಲಿ ತತ್ವ ಸಿದ್ದಾಂತ ಇದೆ ನೀವೇ ಹೇಳಿ? ಎಂದು ಬಸವರಾಜ್ ಹೊರಟ್ಟಿ ಅವರು ಪ್ರಶ್ನೆ ಮಾಡಿದ್ದಾರೆ.
Recommended Video

ಜೆಡಿಎಸ್ ಡಬಲ್ ಸ್ಟ್ಯಾಂಡರ್ಡ್ ರಾಜಕೀಯ: ಯು.ಟಿ. ಖಾದರ್
ವಿಧಾನ ಪರಿಷತ್‌ನಲ್ಲಿ ರೈತ ವಿರೋಧಿ ಕಾನೂನುಗಳಿಗೆ ಜೆಡಿಎಸ್ ಪಕ್ಷ ಬಿಜೆಪಿಯನ್ನು ಬೆಂಬಲಿಸಿರುವುದನ್ನು ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ ಖಂಡಿಸಿದ್ದಾರೆ. ಕೇಂದ್ರ ಸರ್ಕಾರ ರೈತ ವಿರೋಧಿ ಕಾನೂನುಗಳನ್ನು ತಂದಿದೆ. ಅವುಗಳ ವಿರುದ್ಧ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ರೈತರ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಆದರೆ ಸರ್ಕಾರ ರೈತರ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಕನಿಷ್ಠ ಬೆಂಬಲ ಬೆಲೆ ಕುರಿತು ಲಿಖಿತವಾಗಿ ಕೊಡುವಂತೆ ರೈತರು ಕೇಳುತ್ತಿದ್ದಾರೆ. ಕನಿಷ್ಠ ಬೆಂಬಲ ಬೆಲೆಯ ಕುರಿತು ಲಿಖಿತವಾಗಿ ಕೊಡಲು ಸರ್ಕಾರ ಯಾಕೆ ಹಿಂದೇಟು ಹಾಕುತ್ತಿದೆ ಎಂದು ಖಾದರ್ ಪ್ರಶ್ನೆ ಮಾಡಿದರು.
ನಿನ್ನೆ ವಿಧಾನ ಪರಿಷತ್‌ನಲ್ಲಿ ಭೂ ಸುಧಾರಣಾ ಕಾಯ್ದೆಗೆ ಅಂಗೀಕಾರ ಸಿಕ್ಕಿದೆ. ಜೆಡಿಎಸ್‌ನವರು ಸದನದ ಹೊರಗೆ ರೈತರ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದಾರೆ. ಸದನದ ಒಳಗೆ ಸರ್ಕಾರದ ಕಾಯ್ದೆಯನ್ನು ಬೆಂಬಲಿಸಿದ್ದಾರೆ. ಇದು ಜೆಡಿಎಸ್‌ನ ಇಬ್ಬುಗೆ ನೀತಿ. ಅವರದ್ದು ಸ್ವಾರ್ಥದ ರಾಜಕೀಯ ಎಂದು ಜೆಡಿಎಸ್ ನಾಯಕರ ವಿರುದ್ಧ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications