ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ ರೆಡ್ಡಿ?
ಬಳ್ಳಾರಿ, ಜನವರಿ 17 : ಮಾಜಿ ಸಚಿವ, ಗಣಿಧಣಿ ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆಯೇ?. ಬಿಜೆಪಿ ಹೈಕಮಾಂಡ್ ನಾಯಕರು ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ.
'ಜನಾರ್ದನ ರೆಡ್ಡಿ ಬಳ್ಳಾರಿಯಲ್ಲಿ ಚುನಾವಣಾ ಪ್ರಚಾರ ನಡೆಸಲು ಅನುಮತಿ ನೀಡಬೇಕು' ಎಂದು ರಾಷ್ಟ್ರೀಯ ನಾಯಕರಿಗೆ ಬಳ್ಳಾರಿ ಸಂಸದ ಶ್ರೀರಾಮುಲು ಮನವಿ ಮಾಡಿದ್ದಾರೆ.
ಈ ಕುರಿತು ಅವರು ಮಾಹಿತಿ ನೀಡಿದ್ದು, 'ಜನಾರ್ದನ ರೆಡ್ಡಿ ಅವರು ಜಿಲ್ಲೆಯಲ್ಲಿ ಪ್ರಚಾರ ನಡೆಸಿದರೆ ಬಳ್ಳಾರಿಯ 9 ಕ್ಷೇತ್ರಗಳಲ್ಲಿಯೂ ನಾವು ಜಯಗಳಿಸಲಿದ್ದೇವೆ' ಎಂದರು.

'ಜನಾರ್ದನ ರೆಡ್ಡಿ ಬಳ್ಳಾರಿಗೆ ಬಂದರೆ ಸಾಕು ಪ್ರಚಾರ ನಡೆಸದಿದ್ದರೂ ಪಕ್ಷಕ್ಕೆ ಬಲ ಬರಲದೆ. ಹೈದರಾಬಾದ್-ಕರ್ನಾಟಕ ಭಾಗದಲ್ಲಿಯೂ ನಾವು ಹೆಚ್ಚಿನ ಸ್ಥಾನಗಳನ್ನು ನಾವು ಪಡೆಯಲಿದ್ದೇವೆ' ಎಂದು ಶ್ರೀರಾಮುಲು ಹೇಳಿದರು.
ಪರಿವರ್ತನಾ ಯಾತ್ರೆ ಸಮಯದಲ್ಲಿ ಬಳ್ಳಾರಿಗೆ ಭೇಟಿ ನೀಡಿದ್ದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, 'ಜನಾರ್ದನ ರೆಡ್ಡಿ ಅವರು ಪಕ್ಷದಲ್ಲಿ ಸಕ್ರಿಯವಾಗಿಲ್ಲ. ಅವರ ಪಕ್ಷ ಸೇರ್ಪಡೆ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ' ಎಂದು ಹೇಳಿದ್ದರು
ಸುಪ್ರೀಂಕೋರ್ಟ್ ಆದೇಶದ ಅನ್ವಯ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡುವಂತಿಲ್ಲ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ನೀಡುವಾಗ ಬಳ್ಳಾರಿ, ಅನಂತಪುರ, ಕಡಪಕ್ಕೆ ಭೇಟಿ ನೀಡಬಾರದು ಎಂದು ಕೋರ್ಟ್ ಷರತ್ತು ವಿಧಿಸಿದೆ.
2015ರ ಜನವರಿ 1ರಂದು ಜಾಮೀನು ಪಡೆದ ಬಳಿಕ ಜನಾರ್ದನ ರೆಡ್ಡಿ ಸುಪ್ರೀಂಕೋರ್ಟ್ ಅನುಮತಿ ಪಡೆದು ಮಗಳ ಮದುವೆ, ದೀಪಾವಳಿ, ದಸರಾ ಆಚರಣೆ ಮಾಡಲು ಬಳ್ಳಾರಿಗೆ ಭೇಟಿ ನೀಡಿದ್ದರು. 2017ರ ನವೆಂಬರ್‌ನಲ್ಲಿ ಸಂಬಂಧಿಕರ ವಿವಾಹಕ್ಕಾಗಿ ಮೂರು ದಿನ ಬಳ್ಳಾರಿಯಲ್ಲಿದ್ದರು.











Click it and Unblock the Notifications