ರಾಮೋತ್ಸವದ ಗುಂಗಿನಲ್ಲಿ ದೇಶದ ಜನರು: ಈ ಬಾರಿಯ ಲೋಕ ಚುನಾವಣೆಗೆ ‘ರಾಮ’ನೇ ಬಿಜೆಪಿ ಅಸ್ತ್ರ
ಬೆಂಗಳೂರು, ಜನವರಿ 23: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಅಜೆಂಡಾ ಇಟ್ಟುಕೊಂಡು ಇದುವರೆಗೆ ಚುನಾವಣೆಗೆ ಹೋಗಿರುವ ಬಿಜೆಪಿಗೆ ಇವತ್ತು ಅಧಿಕಾರದಲ್ಲಿರಲು ರಾಮನ ಅಭಯವೇ ಕಾರಣವಾಗಿದೆ. ಸದ್ಯಕ್ಕೆ ರಾಮಮಂದಿರ ನಿರ್ಮಾಣದ ಜತೆಗೆ ರಾಮಲಲ್ಲಾನ ಪ್ರಾಣಪ್ರತಿಷ್ಠೆಯೂ ಸುಸೂತ್ರವಾಗಿ ನೆರವೇರಿದ್ದರಿಂದ ನಾಯಕರು ಮೈಕೊಡವಿಕೊಂಡು ಮುಂಬರುವ ಲೋಕಸಭಾ ಚುನಾವಣೆಯ ಅಖಾಡಕ್ಕೆ ಇಳಿಯಲಿದ್ದಾರೆ.
ಮೇಲ್ನೋಟಕ್ಕೆ ಕೇಸರಿ ಪಾಳಯದಲ್ಲಿ ಹೊಸ ಹುಮ್ಮಸ್ಸು ಬಂದಂತೆ ಕಾಣಿಸುತ್ತಿದೆ. ದೇಶದ ಕೋಟ್ಯಂತರ ಜನರು ರಾಮೋತ್ಸವವನ್ನು ಹಬ್ಬದಂತೆ ಸಂಭ್ರಮಿಸಿದ್ದು, ಇಡೀ ದೇಶ ಮಾತ್ರವಲ್ಲದೆ, ಹೊರ ದೇಶದ ಸನಾತನಿಗಳು ಕೂಡ ವಿಜಯೋತ್ಸವ ಆಚರಿಸಿದ್ದು ಎಲ್ಲವನ್ನೂ ನೋಡಿದ ಮೇಲೆ ಮುಂದಿನ ಲೋಕಸಭಾ ಚುನಾವಣೆ ಮೇಲೆ ಬಿಜೆಪಿ ನಾಯಕರಿಗೆ ಅದಮ್ಯ ಉತ್ಸಾಹ ಬಂದಂತೆ ಕಾಣಿಸುತ್ತಿದೆ.

ಚುನಾವಣೆಯ ವಿಚಾರ ಬಂದಾಗ ಎಲ್ಲವೂ ಅಂದುಕೊಂಡಂತೆ ಆಗುತ್ತೆ ಎಂಬುದನ್ನು ಅಷ್ಟು ಸುಲಭವಾಗಿ ಹೇಳಲಾಗುವುದಿಲ್ಲ. ಕೆಲವು ನಾಯಕರು ಮಾತಿಗೆ ರಾಜಕೀಯದಲ್ಲಿ ಧರ್ಮ ಇರಬೇಕು ಧರ್ಮದಲ್ಲಿ ರಾಜಕೀಯ ಇರಬಾರದು ಎಂಬ ಮಾತುಗಳನ್ನು ಹೇಳುತ್ತಾ ಬಂದರೂ ರಾಜಕೀಯವನ್ನು ಧರ್ಮದ ಮೇಲೆಯೇ ಮಾಡಿಕೊಂಡೇ ಬಂದಿದ್ದಾರೆ ಎಂಬುದನ್ನು ಇತಿಹಾಸ ಸಾರಿ ಹೇಳುತ್ತಿದೆ.
ಧರ್ಮ ಬಿಟ್ಟು ರಾಜಕೀಯ ಅಸಾಧ್ಯ
ಯಾರು ಯಾವ ಜಾತಿ, ಧರ್ಮವನ್ನು ತಮ್ಮ ಮತಬ್ಯಾಂಕ್ ಆಗಿ ಬಳಸಿಕೊಂಡು ಅದನ್ನು ಪೋಷಿಸಿಕೊಂಡು ಬರುತ್ತಿದ್ದಾರೆ ಎನ್ನುವುದು ರಾಜಕೀಯ ಬಲ್ಲವರೆಲ್ಲರಿಗೂ ಗೊತ್ತಾಗಿ ಬಿಡುತ್ತದೆ. ಈ ವಿಚಾರದಲ್ಲಿ ಎಲ್ಲ ಪಕ್ಷಗಳ ರಾಜಕೀಯ ನಾಯಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಧರ್ಮವನ್ನು ಬಳಕೆ ಮಾಡಿಕೊಂಡಿದ್ದಾರೆ. ಈಗಲೂ ಮಾಡುತ್ತಿದ್ದಾರೆ. ಹೀಗಾಗಿ ಧರ್ಮ ರಾಜಕೀಯದಲ್ಲಿ ಮತ ತಂದುಕೊಡುವ ಒಂದು ಶಕ್ತಿಯಾಗಿ ಬಳಕೆಯಾಗುತ್ತಲೇ ಬರುತ್ತಿದೆ. ನಾಳೆಯೂ ಅದು ಮುಂದುವರೆಯುತ್ತದೆ ಅದನ್ನು ಬಿಟ್ಟು ರಾಜಕೀಯ ಮಾಡುತ್ತೇವೆ ಎನ್ನುವುದು ಹಾಸ್ಯಾಸ್ಪದ.
ಬಿಜೆಪಿ ಹಿಂದುತ್ವದ ಅಜೆಂಡಾವನ್ನಿಟ್ಟುಕೊಂಡು ರಾಜಕೀಯ ಮಾಡುತ್ತಾ ಬಂದಿದೆ. ಆ ಕಾರಣಕ್ಕಾಗಿ ಇತರೆ ಪಕ್ಷಗಳ ಕಣ್ಣಿಗೆ ಕೋಮುವಾದಿಯಾಗಿ ಕಾಣಿಸುತ್ತಿದೆ. ಮತ್ತು ವಿರೋಧ ಪಕ್ಷಗಳು ತಮಗೆ ಅವಕಾಶ ಸಿಕ್ಕಿದಾಗಲೆಲ್ಲ ಕೋಮುವಾದಿ ಪಕ್ಷವೆಂದು ಜರೆಯುತ್ತಲೇ ಬರುತ್ತಿವೆ. ಆದರೂ ಕಳೆದೊಂದು ದಶಕದಿಂದ ಇಂತಹ ಆರೋಪಗಳ ನಡುವೆಯೂ ಬಿಜೆಪಿ ತನ್ನ ಗೆಲುವಿನ ಪತಾಕೆ ಹಾರಿಸುತ್ತಲೇ ಬರುತ್ತಿದೆ.

ರಾಮನ ಗುಂಗಿನಲ್ಲಿ ದೇಶದ ಜನರು
ಈ ಬಾರಿ 2024ರ ಲೋಕಸಭಾ ಚುನಾವಣೆ ಬಹುಶಃ ರಾಮನ ಮೇಲೆಯೇ ನಡೆದರೆ ಅಚ್ಚರಿಯಿಲ್ಲ. ರಾಮಮಂದಿರ ವಿಚಾರವನ್ನು ಬಿಜೆಪಿ ನಾಯಕರು ಚುನಾವಣೆಯಲ್ಲಿ ಬಳಸಿಕೊಳ್ಳುತ್ತಾರೆ ಎಂಬುದಂತು ನಿಶ್ಚಿತ. ಇಡೀ ದೇಶ ರಾಮನ ಗುಂಗಿನಲ್ಲಿದ್ದು, ಅದನ್ನು ಚುನಾವಣೆ ತನಕವೂ ಜೀವಂತವಾಗಿಟ್ಟುಕೊಳ್ಳುವ ಕೆಲಸವನ್ನು ಬಿಜೆಪಿಗರು ಮಾಡಲಿದ್ದಾರೆ. ಆ ಮೂಲಕ ಇದು ಎನ್ ಡಿಎ ಮೈತ್ರಿಕೂಟಕ್ಕೆ ಟಾನಿಕ್ ಆದರೂ ಅಚ್ಚರಿಪಡಬೇಕಾಗಿಲ್ಲ.
ಚುನಾವಣೆ ಮುನ್ನ ತರಾತುರಿಯಲ್ಲಿ ಅಪೂರ್ಣ ರಾಮಮಂದಿರದ ಉದ‍್ಘಾಟನೆ ಮಾಡಬೇಕಿತ್ತಾ? ಇದು ಎಲೆಕ್ಷನ್ ಗಿಮಿಕ್ ಎಂದು ಕಾಂಗ್ರೆಸ್ ಸೇರಿದಂತೆ ಮಿತ್ರ ಪಕ್ಷಗಳು ಆರೋಪ ಮಾಡುತ್ತಾ ಬಂದಿದ್ದವು. ಆದರೆ ಇದು ಪಕ್ಷದ ಕಾರ್ಯಕ್ರಮವಲ್ಲ ಎಂಬುದನ್ನು ಬಿಜೆಪಿ ನಾಯಕರು ಹೇಳುತ್ತಾ ಬಂದಿದ್ದರು.
ಇನ್ಮುಂದೆ ಕಾಂಗ್ರೆಸ್ ತೀರ್ಮಾನ ಹೇಗಿರಲಿದೆ?
ರಾಮಲಲ್ಲಾ ಪ್ರಾಣಪ್ರತಿಷ್ಠೆ ಒಂದು ಧಾರ್ಮಿಕ ಕಾರ್ಯದಂತೆ ನಡೆಯಿತು. ಅಲ್ಲಿ ಯಾವುದೇ ರಾಜಕೀಯ ನುಸುಳದಂತೆ ನೋಡಿಕೊಳ್ಳಲಾಯಿತು. ಎಲ್ಲ ಧರ್ಮಗುರುಗಳನ್ನು ಕರೆಸಲಾಯಿತು. ಎಲ್ಲ ಕ್ಷೇತ್ರಗಳ ದಿಗ್ಗಜರನ್ನೂ ಆಹ್ವಾನಿಸಲಾಯಿತು. ಭಕ್ತರು ಯಾವುದೇ ಆಹ್ವಾನವಿಲ್ಲದೆ ಆಗಮಿಸಿದ್ದು ವಿಶೇಷವಾಗಿತ್ತು. ಎಲ್ಲೆಡೆಯೂ ಜೈಶ್ರೀರಾಮ್ ಘೋಷಣೆ ಹೊರತುಪಡಿಸಿ ಬೇರೇನು ಕಾಣಲಿಲ್ಲ.

ಅಯೋಧ್ಯೆ ಶ್ರೀರಾಮಮಂದಿರ ಟ್ರಸ್ಟ್ ಎಲ್ಲವನ್ನು ಸುಸೂತ್ರವಾಗಿ ನೆರವೇರಿಸುವಲ್ಲಿ ಮತ್ತು ರಾಜಕೀಯ ನುಸುಳದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಯಿತು. ರಾಮಮಂದಿರ ವಿಚಾರದಲ್ಲಿ ದಿನಕ್ಕೊಂದು ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಲೇ ಬಂದಿದ್ದು, ರಾಮಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಿಂದಲೂ ಪಕ್ಷ ದೂರ ಉಳಿಯಿತು. ಇನ್ಮುಂದೆ ಕಾಂಗ್ರೆಸ್ ಕೈಗೊಳ್ಳುವ ತೀರ್ಮಾನಗಳು ಹೇಗಿರುತ್ತೆ ಎಂಬುದು ಎಲ್ಲರಲ್ಲಿರುವ ಕುತೂಹಲವಾಗಿದೆ.
ಧರ್ಮ ಬದಿಗಿಟ್ಟು ಚುನಾವಣೆ ಸಾಧ್ಯನಾ?
ಲೋಕಸಭಾ ಚುನಾವಣೆ ಸಂದರ್ಭ ರಾಮಮಂದಿರ ವಿಚಾರವನ್ನು ಬಿಜೆಪಿ ಮಾತನಾಡುವುದಂತು ಖಚಿತ. ಈ ವೇಳೆ ಕಾಂಗ್ರೆಸ್ ಇದಕ್ಕೆ ಯಾವ ರೀತಿಯ ಕೌಂಟರ್ ನೀಡಲಿದೆ ಎಂಬುದು ಕುತೂಹಲಕಾರಿಯಾಗಿದೆ. ಈ ಬಾರಿ ಎನ್ ಡಿಎ ಮತ್ತು ಐಎನ್ ಡಿಐಎ ಎರಡು ಶಕ್ತಿಗಳಾಗಿ ದೇಶದಲ್ಲಿ ಚುನಾವಣೆಯನ್ನು ಎದುರಿಸುತ್ತಿವೆ. ಹೀಗಿರುವಾಗ ಇದೆರಡಕ್ಕೂ ಧರ್ಮವನ್ನು ಬದಿಗಿಟ್ಟು ಚುನಾವಣೆ ನಡೆಸಲು ಸಾಧ್ಯವಾಗುತ್ತಾ? ಕಾದು ನೋಡಬೇಕಿದೆ.












Click it and Unblock the Notifications