IPL ಬ್ಯಾನ್‌ ಮಾಡಿ: RCB ಕಪ್‌ ಗೆದ್ರೂ ಅಭಿಮಾನಿಗಳ ಬಾಯಲ್ಲಿ ಈ ಮಾತು ಬಂದಿದ್ದೇಕೆ?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (IPL) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡಕ್ಕೆ ಬೇರೆ ಯಾರಿಗೂ ಇಲ್ಲದ ಫ್ಯಾನ್‌ ಫಾಲೋಯಿಂಗ್‌, ಕ್ರೇಜ್‌ ಇದೆ. ಇಷ್ಟು ವರ್ಷ ಒಂದೂ ಕಪ್‌ ಗೆಲ್ಲದಿದ್ರೂ ಅಭಿಮಾನಿಗಳ ಕ್ರೇಜ್‌ ಮಾತ್ರ ಕೊಂಚವೂ ಕಡಿಮೆಯಾಗಿದ್ದೇ ಇಲ್ಲ. ಇಂತಹ ನಿಷ್ಠಾವಂತ ಅಭಿಮಾನಿಗಳಿಗೆ ಒಂದಾದರೂ ಕಪ್‌ ಅನ್ನು ಉಡುಗೊರೆಯಾಗಿ ಕೊಡಬೇಕು ಎಂದುಕೊಂಡ ಆರ್‌ಸಿಬಿ, ಕೊನೆಗೂ ಕನ್ನಡಿಗರ ಕನಸು ನನಸು ಮಾಡಿದೆ. ಈ ಸೀಸನ್‌ನಲ್ಲಿ ಆರ್‌ಸಿಬಿ ಕಪ್‌ ಗೆಲ್ಲುವ ಮೂಲಕ ಕೊನೆಗೂ "ಈ ಸಲ ಕಪ್‌ ನಮ್ದು" ಎಂದು ಹೇಳಿದೆ. ಇದರ ಬೆನ್ನಲ್ಲೇ ಸಂಭ್ರಮಾಚರಣೆಗಳು ಮುಗಿಲು ಮುಟ್ಟಿದ್ದರೆ, ಈಗ ಇದ್ದಕ್ಕಿದ್ದಂತೆ ಕನ್ನಡಿಗರೇ ಐಪಿಎಲ್‌ ಬ್ಯಾನ್‌ ಮಾಡಿ ಎಂದು ಹಿಡಿಶಾಪ ಹಾಕುತ್ತಿದ್ದಾರೆ.

ಐಪಿಎಲ್‌ನಲ್ಲಿ ಇಲ್ಲಿವರೆಗೆ ಒಂದೂ ಕಪ್‌ ಗೆದ್ದಿಲ್ಲ, ಆದ್ರೂ ಪ್ರತಿ ಬಾರಿಯೂ ಈ ಸಲ ಕಪ್‌ ನಮ್ದೇ ಎನ್ನುತ್ತಿದ್ದ ಕನ್ನಡಿಗರೇ ಇದೀಗ ಐಪಿಲ್‌ ಬ್ಯಾನ್‌ ಮಾಡಿ ಎನ್ನುವ ಮೂಲಕ ತಿರುಗಿಬಿದ್ದಿದ್ದಾರೆ. 17 ವರ್ಷಗಳ ಕನಸನ್ನು ಆರ್‌ಸಿಬಿ ನನಸು ಮಾಡಿದೆ. ಈ ಹಿನ್ನೆಲೆ ಕಪ್‌ ಗೆದ್ದ ಕ್ಷಣದಿಂದಲೇ ಕರ್ನಾಟಕದೆಲ್ಲೆಡೆ ಸಂಭ್ರಮ ಮುಗಿಲುಮುಟ್ಟಿತ್ತು. ರಾತ್ರಿಯಿಡೀ ಪಟಾಕಿ ಸಿಡಿಸಿ, ಬೀದಿಬೀದಿಗಳಲ್ಲಿ ಕುಣಿದು ಕುಪ್ಪಳಿಸಿ, ಆರ್‌ಸಿಬಿ....ಆರ್‌ಸಿಬಿ...ಆರ್‌ಸಿಬಿ ಎಂದು ಘೋಷಣೆಗಳನ್ನು ಕೂಗಿ ಅಭಿಮಾನವನ್ನು ಆಕಾಶದೆತ್ತರಕ್ಕೆ ತಲುಪಿಸಿದ್ದರು.

why-kannadigas-say-ban-ipl-after-rcb-win-fan-stampede-controversy-explained

ದೂರದ ಅಹಮದಾಬಾದ್‌ನಲ್ಲಿ ಆರ್‌ಸಿಬಿಯ ಚೊಚ್ಚಲ ಕಪ್‌ ಗೆದ್ದ ಕೊಹ್ಲಿ-ರಜತ್‌ ಪಡೆಯು ಅದನ್ನು ತನ್ನ ಅಭಿಮಾನಿಗಳಿಗೆ, ಅದರಲ್ಲೂ ಆರ್‌ಸಿಬಿಯ ಹೃದಯದಂತೆ ಮಿಡಿಯುವ ಬೆಂಗಳೂರಿಗೆ ಮೊದಲು ಅರ್ಪಿಸಬೇಕು ಎಂದು ನಿರ್ಧರಿಸಿತು. ರಾತ್ರಿ ಗೆದ್ದ ಕಪ್‌ನೊಂದಿಗೆ ಬೆಳಗಾಗುವಷ್ಟರಲ್ಲಿ ತವರು ನೆಲದಲ್ಲಿ ಕಾಲಿಟ್ಟಿತ್ತು ಆರ್‌ಸಿಬಿ ಪಡೆ. ಇತ್ತ ರಾತ್ರಿಯಿಂದಲೇ ಶುರುವಾಗಿದ್ದ ಅಭಿಮಾನಿಗಳ ಜೋಶ್‌ ಕಡಿಮೆಯಾಗಿರಲಿಲ್ಲ. ಬೆಳಗಾದರೆ ನಮ್‌ ಆರ್‌ಸಿಬಿ ಮಂದಿ ಕಣ್ಣಮುಂದೆ ಬರ್ತಾರಲ್ಲ ಅಂತ ರಾತ್ರಿಯಿಡೀ ನಿದ್ದೆಯೂ ಮಾಡಲಿಲ್ಲ ಅಭಿಮಾನಿಗಳು.

ಆರ್‌ಸಿಬಿ ಅಭಿಮಾನಿಗಳಿಗೆ ಚಿನ್ನಸ್ವಾಮಿ ಸ್ಟೇಡಿಯಂ ಅಂದ್ರೆ ತವರು ಮನೆ ಇದ್ದಂತೆ. ಹಾಗಾಗಿ ತವರಿಗೆ ಬಂದ ಮನೆಯ ಕುಟುಂಬಸ್ಥರನ್ನು ಕಣ್ತುಂಬಿಕೊಂಡು ಬರೋಣ ಎಂದು ಜೆರ್ಸಿ ತೊಟ್ಟು ಬಂದವರಲ್ಲಿ ಕೆಲವರು ಹೋಗಿದ್ದು ಬಾರದ ಲೋಕಕ್ಕೆ. ಅಭಿಮಾನಕ್ಕೆ ಮಿತಿಯಿಲ್ಲ ಎಂದು ಹೆಸರು ಪಡೆದಿದ್ದ ಆರ್‌ಸಿಬಿ ಅಭಿಮಾನಿಗಳಿಗೆ ಇಂದು ಅದೇ ಅಭಿಮಾನ ಕುತ್ತು ತಂದಿಟ್ಟಿದೆ. ಆರ್‌ಸಿಬಿ ಸಂಭ್ರಮಾಚರಣೆಯು 11 ಮಂದಿಯನ್ನು ಬಾರದ ಲೋಕಕ್ಕೆ ಕಳುಹಿಸಿದೆ. ಇದು ಆರ್‌ಸಿಬಿ ಮೇಲಿನ ಅಭಿಮಾನವೋ? ಸರ್ಕಾರದ ಭದ್ರತಾ ವೈಫಲ್ಯವೋ? ಕ್ರಿಕೆಟ್‌ ಸಂಸ್ಥೆಯ ತರಾತುರಿಯೋ? ಎಂದು ಇತ್ಯರ್ಥ ಮಾಡುವಷ್ಟರಲ್ಲಿ ವಿಧಿಯಾಟ ಹಲವರ ಮನೆಗಳನ್ನು ಶೋಕದಲ್ಲಿ ಮುಳುಗಿಸಿದೆ.

ಆರ್‌ಸಿಬಿ ಆಟಗಾರರನ್ನು ನೋಡಲು ಮುಗಿಬಿದ್ದು ಬಂದಿದ್ದ ಲಕ್ಷಾಂತರ ಅಭಿಮಾನಿಗಳು ಸಂಭ್ರಮದ ನಡುವೆಯೇ ಕಾಲ್ತುಳಿತ ಸಂಭವಿಸಿ, 11 ಮಂದಿ ಜೀವಬಿಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡು ಜೀವನ್ಮರಣದ ಹೋರಾಟದಲ್ಲಿದ್ದಾರೆ. ಸತ್ತವರಲ್ಲಿ ಬಹುತೇಕರು ಭವಿಷ್ಯದ ಕನಸು ಹೊತ್ತಿದ್ದ ಯುವಕ, ಯುವತಿಯರೇ ಎನ್ನುವುದು ದುರ್ದೈವದ ಸಂಗತಿ. ಮನೆಯಿಂದ ನಗುತ್ತಾ ಬಂದವರು ಮನೆಯವರನ್ನು ಕಣ್ಣೀರಧಾರೆಯಲ್ಲಿ ಮುಳುಗಿಸಿದ್ದಾರೆ. ಹೆತ್ತ ಮಕ್ಕಳನ್ನು ಕಳೆದುಕೊಂಡ ಪೋಷಕರು ಅಭಿಮಾನವನ್ನು ದೂಷಿಸುತ್ತಿದ್ದಾರೆ. ನಮ್ಮನೆ ದೀಪ ಆರಿಸಿರುವ ಈ ಐಪಿಎಲ್‌ ನಮಗೆ ಬೇಡ, ಅದನ್ನ ಕೂಡಲೇ ಬ್ಯಾನ್‌ ಮಾಡಿ ಎಂದು ಮೃತರ ಪೋಷಕರು ಹಿಡಿಶಾಪವೂ ಹಾಕುತ್ತಿದ್ದಾರೆ. ಸಂಭ್ರಮಾಚರಣೆಗೆ ಹೋದವರು ದುರಂತಕ್ಕೀಡಾಗಿದ್ದು ನಿಜಕ್ಕೂ ಕಪ್‌ ಗೆದ್ದ ಸಂತಸವನ್ನು ಕುಗ್ಗಿಸಿಬಿಟ್ಟಿದೆ. ಐಪಿಎಲ್‌ ಅಂದ್ರೆ ಆರ್‌ಸಿಬಿ ಎನ್ನುತ್ತಿದ್ದವರು, ಈ ಹತ್ತಾರು ಶವಗಳು ಬಿದ್ದ ಬಳಿಕ ಐಪಿಲ್‌ ಬ್ಯಾನ್‌ ಮಾಡಬೇಕು ಎನ್ನುತ್ತಿದ್ದಾರೆ. ಆದರೆ ಈ ಸಾವುಗಳಿಗೆ ಹೊಣೆ ಯಾರು ಎನ್ನುವುದೇ ದೊಡ್ಡ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.

why-kannadigas-say-ban-ipl-after-rcb-win-fan-stampede-controversy-explained

ಸಂತಾಪ ಸೂಚಿಸಿದ ಆರ್‌ಸಿಬಿ

ಬೆಂಗಳೂರಿನಲ್ಲಿ ಸಂಭ್ರಮಾಚರಣೆ ವೇಳೆ ಅಭಿಮಾನಿಗಳ ಸಾವಿಗೆ ಆರ್‌ಸಿಬಿ ಸಂತಾಪ ಸೂಚಿಸಿದೆ. ತಂಡದ ಆಗಮನದ ನಿರೀಕ್ಷೆಯಲ್ಲಿ ಬೆಂಗಳೂರಿನಾದ್ಯಂತ ಸಾರ್ವಜನಿಕ ಸಭೆಗಳ ಕುರಿತು ಮಾಧ್ಯಮ ವರದಿಗಳ ಮೂಲಕ ಬೆಳಕಿಗೆ ಬಂದಿರುವ ದುರದೃಷ್ಟಕರ ಘಟನೆಗಳಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯವಾಗಿದೆ. ಈ ಜೀವಹಾನಿಗೆ ಆರ್‌ಸಿಬಿ ಶೋಕ ವ್ಯಕ್ತಪಡಿಸುತ್ತದೆ. ಮೃತರ ಕುಟುಂಬಗಳಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳು ಎಂದು ಹೇಳಿದೆ. ಪರಿಸ್ಥಿತಿಯ ಬಗ್ಗೆ ತಿಳಿದ ತಕ್ಷಣ, ನಾವು ನಮ್ಮ ಕಾರ್ಯಕ್ರಮವನ್ನು ತ್ವರಿತವಾಗಿ ರದ್ದು ಮಾಡಿದ್ದೇವೆ. ಸ್ಥಳೀಯ ಆಡಳಿತದ ಮಾರ್ಗದರ್ಶನ ಮತ್ತು ಸಲಹೆಯನ್ನು ಅನುಸರಿಸಿದ್ದೇವೆ. ದಯವಿಟ್ಟು ಸುರಕ್ಷಿತವಾಗಿರಲು ನಮ್ಮ ಎಲ್ಲ ಬೆಂಬಲಿಗರನ್ನು ನಾವು ಒತ್ತಾಯಿಸುತ್ತೇವೆ ಎಂದು ಅಭಿಮಾನಿಗಳಿಗೆ ಮನವಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+