ಕೊವಿಡ್-19 ಸಾವು: ಕರ್ನಾಟಕದಲ್ಲಿ 1 ಲಕ್ಷ ರೂ. ಪರಿಹಾರ ಪಡೆಯುವುದು ಹೇಗೆ?

ಬೆಂಗಳೂರು, ಜುಲೈ 08: ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟ ಬಡ ಬಿಪಿಎಲ್ ಕಾರ್ಡುದಾರರ ಕುಟುಂಬಕ್ಕೆ 1 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈಗಾಗಲೇ ಘೋಷಿಸಿದ್ದಾರೆ.

ಕೊವಿಡ್-19 ಸೋಂಕಿನಿಂದ ಮೃತಪಟ್ಟ ಬಡ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಗುರುವಾರ ಅಧಿಕೃತ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲು ಯಾವ ಯಾವ ಮಾನದಂಡಗಳನ್ನು ಅನುಸರಿಸಲಾಗುತ್ತದೆ. ಯಾವ ನಿಯಮಗಳನ್ನು ಪಾಲನೆ ಮಾಡಲಾಗುತ್ತದೆ ಹಾಗೂ ಕುಟುಂಬಕ್ಕೆ ಪರಿಹಾರದ ಮೊತ್ತವನ್ನು ಹೇಗೆ ತಲುಪಿಸಲಾಗುತ್ತದೆ ಎಂಬುದನ್ನು ಆದೇಶದ ಪ್ರತಿಯಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ.

ಜಗತ್ತಿನಾದ್ಯಂತ ಹರಡಿರುವ ಹಾಗೂ ಹರಡುತ್ತಿರುವ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಸಾರ್ವಜನಿಕರನ್ನು ರಕ್ಷಿಸುವುದಕ್ಕೆ ಕರ್ನಾಟಕ ಸರ್ಕಾರವು ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಅದಾಗ್ಯೂ, ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕಾರ್ಡುದಾರರ ಕುಟುಂಬದಲ್ಲಿ ದುಡಿಯುವ ವ್ಯಕ್ತಿಯು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟರೆ ಆ ಕುಟುಂಬಕ್ಕೆ 1 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ. ಹೀಗೆ ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಸರ್ಕಾರ ಪರಿಗಣಿಸುವ ಮಾನದಂಡ ಹಾಗೂ ನಿಯಮಗಳ ಜೊತೆ ಕೆಲವು ಷರತ್ತುಗಳನ್ನು ವಿಧಿಸಿದೆ. ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿರುವ ಅಂಶಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಸರ್ಕಾರ 1 ಲಕ್ಷ ರೂ. ಪರಿಹಾರ ನೀಡಲು ವಿಧಿಸಿರುವ ಷರತ್ತು

ಸರ್ಕಾರ 1 ಲಕ್ಷ ರೂ. ಪರಿಹಾರ ನೀಡಲು ವಿಧಿಸಿರುವ ಷರತ್ತು

* ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದರೂ, ಒಬ್ಬ ಸದಸ್ಯರಿಗೆ ಮಾತ್ರ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು.

* ರಾಜ್ಯ ಕೊವಿಡ್-19 ತಾಂತ್ರಿಕ ಸಲಹಾ ಸಮಿತಿಯು ಕೊವಿಡ್-19 ನಿಂದಾದ ಮರಣಗಳನ್ನು ದೃಢಪಡಿಸಲು ನೀಡಿರುವ ಮಾನದಂಡಗಳ ಆಧಾರದ ಮೇಲೆ ದೃಢಪಡಿಸಿರುವಂತಹ ಸಾವಿನ ಪ್ರಕರಣಗಳಿಗೆ ಮಾತ್ರ ಪರಿಹಾರ ಮೊತ್ತವನ್ನು ಪಾವತಿಸತಕ್ಕದ್ದು.

* ಜಿಲ್ಲಾಧಿಕಾರಿಗಳು ಕೊವಿಡ್-19 ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಸಂಪೂರ್ಣ ಮಾಹಿತಿಯನ್ನು ಜಿಲ್ಲಾ ವೈದ್ಯಾಧಿಕಾರಿಗಳಿಂದ ಪಡೆಯತಕ್ಕದ್ದು.

* ಜಿಲ್ಲಾ ವೈದ್ಯಧಿಕಾರಿಗಳು ಕೊವಿಡ್-19 ನಿಂದ ಮೃತಪಟ್ಟ ವ್ಯಕ್ತಿಗಳ ವಿವರ ನೀಡುವುದಕ್ಕೂ ಮೊದಲು ತಾಂತ್ರಿಕ ಸಲಹಾ ಸಮಿತಿ ನಿಗದಿಪಡಿಸಿರುವ ಮಾನದಂಡಗಳನ್ನು ಮತ್ತು ದಾಖಲೆಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವುದು.

* ಜಿಲ್ಲಾ ವೈದ್ಯಧಿಕಾರಿಗಳು ನೀಡಿರುವ ಮೃತ ವ್ಯಕ್ತಿಗಳ ಮಾಹಿತಿ ಆಧಾರದ ಮೇಲೆ ಮೃತರ ಕಾನೂನುಬದ್ಧ ವಾರಸುದಾರರನ್ನು / ಕುಟುಂಬ ಸದಸ್ಯರನ್ನು ನಿಯಮಾನುಸಾರ ಗುರುತಿಸಿ ದೃಢಪಡಿಸಿಕೊಂಡ ನಂತರವಷ್ಟೇ ಮೃತರ ಕಾನೂನು ಸಮ್ಮತ ವಾರಸುದಾರರಿಂದ ಅಧಿಕೃತ ಗುರುತು ಪತ್ರ ಮತ್ತು ಬ್ಯಾಂಕ್ ವಿವರಗಳನ್ನು ಜಿಲ್ಲಾಧಿಕಾರಿಗಳು ಪಡೆದು ನಿರ್ದೇಶಕರು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ, ಕಂದಾಯ ಇಲಾಖೆ, ಬೆಂಗಳೂರು ಇವರಿಗೆ ಸಲ್ಲಿಸತಕ್ಕದ್ದು.

* ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದಿಂದ 1 ಲಕ್ಷ ರೂಪಾಯಿ ಪರಿಹಾರದ ಹಣವನ್ನು RTGS/NEFT ಮೂಲಕ ನೇರವಾಗಿ ಕೊವಿಡ್-19 ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬದ ವ್ಯಕ್ತಿಯ ವಾರಸುದಾರರ ಬ್ಯಾಂಕ್ ಖಾತೆಗೆ ಜಮಾ ಮಾಡತಕ್ಕದ್ದು.

* ಈ ಸಂಬಂಧ ಕಾಲಕಾಲಕ್ಕೆ ಸರ್ಕಾರದಿಂದ ಹಾಗೂ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದಿಂದ ಹೊರಡಿಸುವ ಆದೇಶ ಮತ್ತು ಸುತ್ತೋಲೆಯಲ್ಲಿನ ಸೂಚನೆಗಳನ್ನು ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಪಾಲಿಸತಕ್ಕದ್ದು.

* ಜಿಲ್ಲಾ ಹಂತದಲ್ಲಿ ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಮಟ್ಟದಲ್ಲಿ ನಿರ್ದೇಶಕರು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ, ಬೆಂಗಳೂರು ಇವರು ಪ್ರತಿವಾರ ಯೋಜನೆ ಪ್ರಗತಿಯನ್ನು ಪರಿಶೀಲಿಸತಕ್ಕದ್ದು.

* ಪರಿಹಾರ ಪಾವತಿಯಲ್ಲಿ ವಿಳಂಬ ಧೋರಣೆ ಅನುಸರಿಸುವುದು ಮತ್ತು ಕಾನೂನು ಬದ್ಧವಾಗಿ ಅಧಿಕೃತವಲ್ಲದ ವಾರಸುದಾರರಿಗೆ ಪರಿಹಾರ ಮೊತ್ತ ವಿತರಿಸುವುದು ಮೊದಲಾದ ಲೋಪಗಳು ಕಂಡು ಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.

* ಕೊವಿಡ್-19 ಸೋಂಕಿನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ವ್ಯಕ್ತಿಗಳ ವಾರಸುದಾರರಿಗೆ ಪರಿಹಾರ ಪಾವತಿಸುವಂತಹ ಎಲ್ಲಾ ಪ್ರಕ್ರಿಯೆಗಳನ್ನು ಅಂತರ್ಜಾಲ ಮೂಲಕವೇ ನಿರ್ವಹಿಸತಕ್ಕದ್ದು.

* ಈ ಉದ್ದೇಶಕ್ಕಾಗಿ, ಈಗಾಗಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ತಂತ್ರಾಂಶಗಳ ನೆರವನ್ನು ಪಡೆಯತಕ್ಕದ್ದು.

* ಕೊವಿಡ್-19 ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬದ ವ್ಯಕ್ತಿಗಳ ಅಧಿಕೃತ ವಾರಸುದಾರರಿಗೆ ಪರಿಹಾರ ಮೊತ್ತವನ್ನು ಪಾವತಿಸಿರುವ ವಿವರಗಳ ವರದಿಯನ್ನು ನಿರ್ದೇಶಕರು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ, ಕಂದಾಯ ಇಲಾಖೆ ಬೆಂಗಳೂರು ಇವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹಾಗೂ ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಗೆ ಸಲ್ಲಿಸತಕ್ಕದ್ದು.

* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯೋಜನಾ ಇಲಾಖೆ ಹಾಗೂ ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ಅಂತರ್ಜಾಲ ತಾಣದಲ್ಲಿ ಕೊವಿಡ್-19 ಸೋಂಕಿನಿಂದ ಮೃತಪಟ್ಟ ಬಿಪಿಎಲ್ ಕುಟುಂಬದ ವ್ಯಕ್ತಿಗಳಿಗೆ ಪರಿಹಾರ ಪಾವತಿಸಿರುವ ಮಾಹಿತಿಯನ್ನೊಳಗೊಂಡ ಫಲಕವನ್ನು ಪ್ರಕಟಿಸತಕ್ಕದ್ದು ಮತ್ತು ಪ್ರತಿದಿನ ಇಂದೀಕರಿಸತಕ್ಕದ್ದು.

ರಾಜ್ಯದಲ್ಲಿ ಇಳಿಮುಖವಾಗದ ಕೊರೊನಾವೈರಸ್ ಸೋಂಕಿತರ ಸಾವು

ರಾಜ್ಯದಲ್ಲಿ ಇಳಿಮುಖವಾಗದ ಕೊರೊನಾವೈರಸ್ ಸೋಂಕಿತರ ಸಾವು

ಕರ್ನಾಟಕದಲ್ಲಿ ಕೊರೊನಾವೈರಸ್ ಹೊಸ ಪ್ರಕರಣಗಳ ಸಂಖ್ಯೆ 3,000ಕ್ಕಿಂತ ಕಡಿಮೆಯಾಗಿದೆ. ಆದರೆ ಸಾವಿನ ಸಂಖ್ಯೆಯು ಪ್ರತಿನಿತ್ಯ ಏರಿಕೆಯಾಗುತ್ತಿದೆ. ರಾಜ್ಯದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಪ್ರಮಾಣ ಶೇ.1.60ರಷ್ಟಿದ್ದು, ಸಾವಿನ ಸಂಖ್ಯೆಯ ಶೇಕಡಾವಾರು ಪ್ರಮಾಣ 2.45ರಷ್ಟಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 62 ಮಂದಿ ಕೊವಿಡ್-19 ಸೋಂಕಿನಿಂದಲೇ ಮೃತಪಟ್ಟಿದ್ದು, ಈವರೆಗೂ 35,663 ಮಂದಿ ಮಹಾಮಾರಿಯಿಂದ ಪ್ರಾಣ ಕಳೆದುಕೊಂಡಿದ್ದಾರೆ.

ರಾಜ್ಯದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ ಏರಿಳಿತ

ರಾಜ್ಯದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ ಏರಿಳಿತ

ಒಂದು ದಿನದಲ್ಲಿ 2,530 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 3,344 ಸೋಂಕಿತರು ಗುಣಮುಖರಾಗಿದ್ದಾರೆ. ಗುರುವಾರದ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 28,64,868ಕ್ಕೆ ಏರಿಕೆಯಾಗಿದೆ. ಈವರೆಗೂ 27,90,453 ಸೋಂಕಿತರು ಗುಣಮುಖರಾಗಿದ್ದು. 38,729 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಸಿಲಿಕಾನ್ ಸಿಟಿಯಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ

ಸಿಲಿಕಾನ್ ಸಿಟಿಯಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ

ಬೆಂಗಳೂರಿನಲ್ಲಿ ಕಳೆದ ಒಂದು ದಿನದಲ್ಲಿ 514 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 12,18,021ಕ್ಕೆ ಏರಿಕೆಯಾಗಿದೆ. 9 ಮಂದಿ ಪ್ರಾಣ ಬಿಟ್ಟಿದ್ದು, ಸಾವಿನ ಸಂಖ್ಯೆ 15,711ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಎಷ್ಟು ಮಂದಿಗೆ ಕೊವಿಡ್-19 ಪರೀಕ್ಷೆ?

ರಾಜ್ಯದಲ್ಲಿ ಎಷ್ಟು ಮಂದಿಗೆ ಕೊವಿಡ್-19 ಪರೀಕ್ಷೆ?

ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ತಪಾಸಣೆ ವೇಗವನ್ನು ಕೂಡ ತಗ್ಗಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 31,896 ಮಂದಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಹಾಗೂ 1,25,656 ಮಂದಿಗೆ RT-PCR ಟೆಸ್ಟ್ ನಡೆಸಲಾಗಿದ್ದು, ಒಟ್ಟು 1,57,552 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ. ರಾಜ್ಯದಲ್ಲಿ ಈವರೆಗೂ 64,90,878 ಜನರಿಗೆ ರಾಪಿಡ್ ಆಂಟಿಜೆನಿಕ್ ಟೆಸ್ಟ್ ಮಾಡಲಾಗಿದೆ. ಇದರ ಹೊರತಾಗಿ 2,89,85,436 ಮಂದಿಗೆ RT-PCR ಟೆಸ್ಟ್ ನಡೆಸಲಾಗಿದ್ದು, ಈವರೆಗೂ ಒಟ್ಟು 3,54,76,314 ಮಂದಿಗೆ ಕೊವಿಡ್-19 ಪರೀಕ್ಷೆ ನಡೆಸಲಾಗಿದೆ.

Recommended Video

    ತುಮಕೂರು ರಸ್ತೆಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿಗೆ ಡಿಕೆ ಶಿವಕುಮಾರ್ ಮಾಡಿದ ಸಹಾಯ ನೋಡಿ | Oneindia Kannada
    ಜಿಲ್ಲಾವಾರು ಕೊರೊನಾವೈರಸ್ ಸೋಂಕಿತರ ಸಂಖ್ಯೆ

    ಜಿಲ್ಲಾವಾರು ಕೊರೊನಾವೈರಸ್ ಸೋಂಕಿತರ ಸಂಖ್ಯೆ

    ರಾಜ್ಯದಲ್ಲಿ ಒಟ್ಟು 2530 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 3, ಬಳ್ಳಾರಿ 18, ಬೆಳಗಾವಿ 176, ಬೆಂಗಳೂರು ಗ್ರಾಮಾಂತರ 59, ಬೆಂಗಳೂರು 514, ಬೀದರ್ 3, ಚಾಮರಾಜನಗರ 47, ಚಿಕ್ಕಬಳ್ಳಾಪುರ 18, ಚಿಕ್ಕಮಗಳೂರು 114, ಚಿತ್ರದುರ್ಗ 30, ದಕ್ಷಿಣ ಕನ್ನಡ 210, ದಾವಣಗೆರೆ 28, ಧಾರವಾಡ 19, ಗದಗ 5, ಹಾಸನ 202, ಹಾವೇರಿ 9, ಕಲಬುರಗಿ 11, ಕೊಡಗು 81, ಕೋಲಾರ 63, ಕೊಪ್ಪಳ 12, ಮಂಡ್ಯ 88, ಮೈಸೂರು 294, ರಾಯಚೂರು 2, ರಾಮನಗರ 15, ಶಿವಮೊಗ್ಗ 167, ತುಮಕೂರು 135, ಉಡುಪಿ 148, ಉತ್ತರ ಕನ್ನಡ 49, ವಿಜಯಪುರ 4, ಯಾದಗಿರಿ 5 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+