ಒಗ್ಗಟ್ಟಿನ ಮಂತ್ರ ಜಪ; ರಾಜ್ಯ ಬಿಜೆಪಿ ನಾಯಕರಿಗೆ ಅಮಿತ್ ಶಾ ಕಟ್ಟುನಿಟ್ಟಿನ ಸೂಚನೆ!
ಬೆಂಗಳೂರು, ಜೂನ್ 20: ರಾಜ್ಯ ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿದೆ ಎಂಬ ಮಾತು ಕಮಲ ಪಾಳಯದಲ್ಲಿಯೇ ಕೇಳಿ ಬರುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ ವೈ ವಿಜಯೇಂದ್ರ ಅವರು ನೇಮಕಗೊಂಡ ದಿನದಿಂದಲೂ ವಿರೋಧ ಬಣ ಬಹಿರಂಗವಾಗಿ ಅಸಮಾಧಾನವನ್ನ ಹೊರಹಾಕಿದ್ದು, ಬಹುದಿನಗಳ ಬಳಿಕ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ಬ್ರೇಕ್ ಹಾಕುಲು ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಿದ್ದಾರೆ
ರಾಜ್ಯಕ್ಕೆ ಅಮಿತ್ ಶಾ ಆಗಮನದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಅಮಿತ್ ಶಾ ರಾಜ್ಯಕ್ಕೆ ಬಂದಿರುವಾಗಲೇ ರೆಬೆಲ್‌ಗಳು ತಂತ್ರಗಾರಿಕೆ ನಡೆಸಿದ್ದಾರೆ. ಮಾಜಿ ಸಂಸದ ಜಿ ಎಂ ಸಿದ್ದೇಶ್ವರ್ ಮನೆಯಲ್ಲಿ ರೆಬೆಲ್‌ಗಳು ಸಭೆ ಸೇರಿದ್ದಾರೆ. ಜಿಎಂ ಸಿದ್ದೇಶ್ವರ್, ಬಿಪಿ ಹರೀಶ್, ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ ಸೇರಿದಂತೆ ಪ್ರಮುಖರು ಚರ್ಚೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದು, ರಾಜ್ಯ ಬಿಜೆಪಿ ನಾಯಕರ ಜೊತೆಗೆ ಚರ್ಚೆ ನಡೆಸಿರುವ ಅಮಿತ್ ಶಾ ಅವರು, ರಾಜ್ಯ ನಾಯಕರಿಗೆ ಒಗ್ಗಟ್ಟಿನ ಮಂತ್ರ ಜಪಿಸುವಂತೆ ಖಡಕ್ ಸೂಚನೆ ನೀಡಿದೆ.

ಈ ಕುರಿತು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಮಾಧ್ಯಮಗಳ ಜೊತೆಗೆ ಮಾತನಾಡಿ, ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ನಮ್ಮ ಹೋರಾಟವನ್ನು ದ್ವಿಗುಣಗೊಳಿಸಬೇಕೆಂಬ ವಿಷಯದಲ್ಲಿ ಕೇಂದ್ರ ಗೃಹ ಸಚಿವ ಮತ್ತು ಪಕ್ಷದ ರಾಷ್ಟ್ರೀಯ ಮುಖಂಡ ಅಮಿತ್ ಶಾ ಜೀ ಅವರು ಕೆಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಇಂದು ಮುಂಜಾನೆ ನಾನು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್.ಅಶೋಕ್, ಅರವಿಂದ ಬೆಲ್ಲದ್ ಅವರ ಜೊತೆಗೂಡಿ ಅಮಿತ್ ಶಾ ಜೀ ಅವರನ್ನು ಭೇಟಿ ಮಾಡಿದ್ದೇವೆ. ರಾಜ್ಯ ರಾಜಕಾರಣ, ಪ್ರಸ್ತುತ ಬೆಳವಣಿಗೆಗಳ ಕುರಿತು ಚರ್ಚಿಸಿದ್ದೇವೆ ಎಂದು ವಿವರಿಸಿದರು.
ಅಲ್ಪಸಂಖ್ಯಾತರ ಓಲೈಕೆ ನಿಟ್ಟಿನಲ್ಲಿ ರಾಜ್ಯ ಸರಕಾರ ತೀರ್ಮಾನ ತೆಗೆದುಕೊಳ್ಳುತ್ತಿದೆ. ನಿನ್ನೆ ವಸತಿ ಇಲಾಖೆಯಡಿ ಅಲ್ಪಸಂಖ್ಯಾತರಿಗೆ ಶೇ 10 ಇದ್ದ ಮೀಸಲಾತಿಯನ್ನು ಶೇ 15ಕ್ಕೆ ಏರಿಸಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಔರ್ ಸಬ್ ಕಾ ಪ್ರಯಾಸ್' ಆಧಾರದ ಮೇಲೆ ದೇಶದ ಹಿಂದೂಗಳು, ಅಲ್ಪಸಂಖ್ಯಾತರು ಸೇರಿ ಎಲ್ಲರಿಗೂ ನ್ಯಾಯ ಕೊಡುತ್ತಿದ್ದಾರೆ. ಮೋದಿಜೀ ಅವರು ಕೊಟ್ಟ ಕಿಸಾನ್ ಸಮ್ಮಾನ್ ಯೋಜನೆಯು ರೈತರಿಗೆ 6 ಸಾವಿರ ಜಮಾ ಆಗುತ್ತಿದ್ದು, ಇದು ಕೇವಲ ಹಿಂದೂಗಳಿಗೆ ಮಾತ್ರ ಅಲ್ಲ ಎಂದು ಗಮನ ಸೆಳೆದರು. ರೈತಾಪಿ ವರ್ಗದ ಎಲ್ಲ ಸಮುದಾಯ, ಧರ್ಮದವರಿಗೆ ಅದು ಜಮಾ ಆಗುತ್ತಿದೆ ಎಂದು ತಿಳಿಸಿದರು.
ಮೋದಿಜೀ ಅವರ ಬೇಟಿ ಬಚಾವೊ, ಬೇಟಿ ಪಡಾವೊ ಕಾರ್ಯಕ್ರಮವು ಕೇವಲ ಹಿಂದೂ ಹೆಣ್ಮಕ್ಕಳಿಗೆ ಮಾತ್ರ ಸೀಮಿತವಾಗಿಲ್ಲ. ಆದರೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಖಂಡಿತವಾಗಿ ಭಗವಂತ ಒಳ್ಳೆಯದು ಮಾಡಲು ಸಾಧ್ಯವಿಲ್ಲ, ಬಿಜೆಪಿ ಹೋರಾಟ ಒಂದು ಕಡೆ ಇದ್ದರೆ, ಮುಖ್ಯಮಂತ್ರಿಗಳ ನಡವಳಿಕೆ ಅವರ ಸ್ಥಾನಕ್ಕೆ ಅಪಮಾನ ಮಾಡುವಂತಿದೆ. ರಾಜ್ಯದ ಮುಖ್ಯಮಂತ್ರಿ ಎಂಬುದನ್ನು ಮರೆತು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಬರುವ ದಿನಗಳಲ್ಲಿ ರಾಜ್ಯದ ಜನರೇ ಅವರಿಗೆ ಉತ್ತರ ನೀಡುತ್ತಾರೆ ಎಂದು ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ಜೊತೆ ಸಮನ್ವಯಕ್ಕಾಗಿ ಎಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕರ ಜೊತೆ ಅಧಿವೇಶನಕ್ಕೆ ಮೊದಲು ಚರ್ಚೆ ಮಾಡುವುದಾಗಿ ಎಂದರು.
ವಸತಿ ಹಂಚಿಕೆಗೆ ಹಣ ಕೊಡಬೇಕೆಂಬ ಕಾಂಗ್ರೆಸ್ಸಿನ ಬಿ.ಆರ್.ಪಾಟೀಲ್ ಅವರ ಆರೋಪ ಕುರಿತ ಧ್ವನಿಸುರುಳಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ಬಳಿಕ ಹೈಕಮಾಂಡಿನ ಎಟಿಎಂ ಆಗಿ ಸರಕಾರವನ್ನು ಪರಿವರ್ತನೆಗೊಳಿಸಿದೆ. ಹಿಂದೆ ಬಿಜೆಪಿಯ ಸರಕಾರದ ವಿರುದ್ಧ ಶೇ 40 ರ ಭ್ರಷ್ಟಾಚಾರದ ಆರೋಪ ಮಾಡುತ್ತಿದ್ದರು. ಇವತ್ತು ಜನಸಾಮಾನ್ಯರು, ಉದ್ಯಮಿಗಳು ಸೇರಿ ಯಾರನ್ನೇ ಕೇಳಿದರೂ ಶೇ 100 ಭ್ರಷ್ಟಾಚಾರ ನಡೆಯುವ ಬಗ್ಗೆ ಜನಸಾಮಾನ್ಯರೇ ಮಾತನಾಡುತ್ತಿದ್ದಾರೆ. ಈ ರೀತಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋದ ಬಗ್ಗೆ ಸ್ವತಃ ಆಡಳಿತ ಪಕ್ಷದ ಶಾಸಕರೇ ಬಹಿರಂಗ ಪಡಿಸಿದ್ದಾರೆ. ಯಾವುದೇ ಇಲಾಖೆಗೆ ಹೋದರೂ ಲಂಚ ಇಲ್ಲದೇ ಕೆಲಸಗಳು ಆಗುತ್ತಿಲ್ಲ ಎಂದು ತಿಳಿಸಿದರು.












Click it and Unblock the Notifications