ಸರ್ಕಾರ ರಚನೆ : ಸದಾನಂದ ಗೌಡರು ಕೊಟ್ಟರು ಬ್ರೇಕಿಂಗ್ ನ್ಯೂಸ್
ಬೆಂಗಳೂರು, ಜನವರಿ 15 : 'ಮಾಧ್ಯಮಗಳು ಕೇಳಿದಾಗ ಬ್ರೇಕಿಂಗ್ ನ್ಯೂಸ್ ಕೊಡಲು ಆಗುವುದಿಲ್ಲ. ನಾವು ಕೊಟ್ಟಾಗ ಅದು ಬ್ರೇಕಿಂಗ್ ನ್ಯೂಸ್ ಆಗುತ್ತದೆ. 104 ಶಾಸಕರಿರುವ ಪಕ್ಷ ಸರ್ಕಾರ ರಚನೆ ಮಾಡಬಾರದೇ?' ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ಪ್ರಶ್ನಿಸಿದರು.
ಮಂಗಳವಾರ ನೆಲಮಂಗಲದಲ್ಲಿ ಮಾತನಾಡಿದ ಡಿ.ವಿ.ಸದಾನಂದ ಗೌಡ ಅವರು, 'ನಮಗೆ ಯಾವುದೇ ಖಾಯಿಲೆ ಇಲ್ಲ. ಆದ್ದರಿಂದ, ಆಪರೇಷನ್ ಅಗತ್ಯವಿಲ್ಲ. ಖಾಯಿಲೆ ಇರುವುದು ಕಾಂಗ್ರೆಸ್-ಜೆಡಿಎಸ್‌ಗೆ ಅವರಿಗೆ ಆಪರೇಷನ್ ಅಗತ್ಯವಿದೆ' ಎಂದರು.
'37 ಸೀಟುಗಳನ್ನು ಹೊಂದಿರುವ ಅವರು ಸರ್ಕಾರ ಮಾಡುವುದಾದದರೆ 104 ಸ್ಥಾನಗಳನ್ನು ಹೊಂದಿರುವ ನಾವು ಏಕೆ ಸರ್ಕಾರ ಮಾಡಬಾರದು. ನೀವು ಕೇಳಿದಾಗ ಬ್ರೇಕಿಂಗ್ ನ್ಯೂಸ್ ಕೊಡಲು ಆಗುವುದಿಲ್ಲ, ನಾವು ಕೊಟ್ಟಾಗ ಅದು ಬ್ರೇಕಿಂಗ್ ನ್ಯೂಸ್ ಆಗುತ್ತದೆ' ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

'ಶಾಸಕರು ರೆಸಾರ್ಟ್‌ನಲ್ಲಿ ಏನು ಮಾಡುತ್ತಾರೆ, ಎಲ್ಲಾ ಶಾಸಕರು ಏಕೆ ಒಂದೇ ಸ್ಥಳದಲ್ಲಿ ಇದ್ದಾರೆ ಎಂಬುದೆಲ್ಲಾ ಪಕ್ಷದ ವಿಚಾರಗಳು ಅದನ್ನು ಮಾಧ್ಯಮಗಳ ಮುಂದೆ ಹೇಳಲು ಆಗುವುದಿಲ್ಲ. ಹಾಗೆ ಹೇಳಿದರೆ ಪಕ್ಷದ ತಂತ್ರಗಳು ಬಯಲಾಗುತ್ತವೆ' ಎಂದು ಸದಾನಂದ ಗೌಡರು ಹೇಳಿದರು.
'ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ. ನಾವು ಸರ್ಕಾರವನ್ನು ಬೀಳಿಸುವುದಿಲ್ಲ. ಅವರ ಪಕ್ಷದ ನಾಯಕರಿಂದಾಗಿಯೇ ಸರ್ಕಾರ ಪತನಗೊಂಡರೆ ನಾವು ಮುಂದಿನ ಕಾರ್ಯತಂತ್ರದ ಕುರಿತು ಆಲೋಚನೆ ನಡೆಸುತ್ತೇವೆ' ಎಂದು ಸದಾನಂದ ಗೌಡರು ಸ್ಪಷ್ಟಪಡಿಸಿದರು.












Click it and Unblock the Notifications