ಹಾವೇರಿಯಲ್ಲಿ ಜೆಪಿ ನಡ್ಡಾ ವಿರುದ್ಧ ಕೇಸ್, ಹೈಕೋರ್ಟ್ ತಡೆ
ಬೆಂಗಳೂರು, ಅಕ್ಟೋಬರ್ 13; ಕರ್ನಾಟಕದ 2023ರ ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಿದ ಆರೋಪ ಸಂಬಂಧ ಹಾವೇರಿ ಜಿಲ್ಲೆಯ ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಧಾರವಾಡ ಪೀಠದಿಂದ ಆನ್‌ಲೈನ್ ಮೂಲಕ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿ, ವಿಚಾರಣೆ ಮುಂದೂಡಿದೆ.

ಅರ್ಜಿದಾರರ ವಾದವೇನು?; ಅರ್ಜಿದಾರರ ಪರ ವಕೀಲರು ಅರ್ಜಿದಾರರ ವಿರುದ್ಧ ದಾಖಲಿಸಿರುವುದು ಗಂಭೀರ ಸ್ವರೂಪವಲ್ಲದ ಪ್ರಕರಣವಾಗಿದೆ. ಇಂತಹ ಪ್ರಕರಣ ದಾಖಲಿಸುವಾಗ ದೂರುದಾರರೇ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ದೂರು ಸಲ್ಲಿಸಿ, ಎಫ್‌ಐಆರ್ ದಾಖಲಿಸಲು ಅನುಮತಿ ಪಡೆಯಬೇಕು. ಆದರೆ, ಈ ಪ್ರಕರಣದಲ್ಲಿ ಪೊಲೀಸರೇ ಮ್ಯಾಜಿಸ್ಟ್ರೇಟ್ ಮುಂದೆ ದೂರು ದಾಖಲಿಸಿ, ಅನುಮತಿ ಪಡೆದು ಎಫ್‌ಐಆರ್ ದಾಖಲಿಸಿದ್ದಾರೆ. ಇದು ಕಾನೂನು ಬಾಹಿರ ಕ್ರಮ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಅಲ್ಲದೆ, ಅರ್ಜಿದಾರರ ವಿರುದ್ಧ ಅನುಚಿತ ಪ್ರಭಾವ ಬೀರಿದ ಆರೋಪ ಮಾಡಲಾಗಿದೆ. ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗೆ ಚುನಾವಣಾ ಆಯೋಗವೇ ಅನುಮತಿ ನೀಡಿದೆ. ಮತ ಪ್ರಚಾರ ಮಾಡುವುದು ಅಭ್ಯರ್ಥಿಯ ಹಕ್ಕು ಆಗಿರುತ್ತದೆ. ಅದರಂತೆ ಪ್ರಕರಣದಲ್ಲಿ ಬಿಜೆಪಿ ಅಭ್ಯರ್ಥಿ ಪರ ಅರ್ಜಿದಾರರು ಪ್ರಚಾರ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಮತದಾರರ ಮೇಲೆ ಅನುಚಿತ ಪ್ರಭಾವ ಬೀರಿದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧ ಎಫ್‌ಐಆರ್ ರದ್ದುಪಡಿಸಬೇಕು ಎಂದು ಕೋರಿದ್ದರು.
ಪ್ರಕರಣದ ಹಿನ್ನೆಲೆ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 2023ರ ಏ.19ರಂದು ಶಿಗ್ಗಾವಿ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಜೆ. ಪಿ. ನಡ್ಡಾ, ಕರ್ನಾಟಕದ ಜನತೆ ಬಿಜೆಪಿಗೆ ಮತ ನೀಡಿ, ಪ್ರಧಾನಿ ನರೇಂದ್ರ ಮೋದಿಜಿ ಅವರ ಒಲವು ಪಡೆಯಿರಿ. ಕರ್ನಾಟಕವು ಮೋದಿಯವರ ಆಶೀರ್ವಾದ ಹೊಂದಿದೆ. ಅದರಿಂದ ವಂಚಿತವಾಗದಂತೆ ನೋಡಿಕೊಳ್ಳಿ ಎಂದು ಹೇಳಿಕೆ ನೀಡಿದ್ದರು.
ಈ ಕುರಿತು ಚುನಾವಣಾಧಿಕಾರಿಯಾಗಿದ್ದ ಲಕ್ಷ್ಮಣ್ ನಂದಿ ಅವರು ಶಿಗ್ಗಾವಿ ಪೊಲೀಸ್ ಠಾಣೆಗೆ ದೂರು ನೀಡಿ, ಜೆ. ಪಿ. ನಡ್ಡಾ ಅವರು ಮತದಾರರ ಮೇಲೆ ಅನುಚಿತ ಪ್ರಭಾವ ಬೀರುವ ಮೂಲಕ ಶಿಕ್ಷಾರ್ಹ ಅಪರಾಧ ಎಸಗಿದ್ದಾರೆ ಎಂದು ಆರೋಪಿಸಿದ್ದರು.
ದೂರು ಸ್ವೀಕರಿಸಿದ್ದ ಪೊಲೀಸರು, ನಡ್ಡಾ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 171(ಸಿ), 171(ಎಫ್) ಮತ್ತು ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 123(2) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣ ರದ್ದು ಕೋರಿ ನಡ್ಡಾ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.












Click it and Unblock the Notifications