ವಿಜಯಪುರ : ಆಟೋದಲ್ಲಿ ಪಾಕ್ ಧ್ವಜ, ಓವೈಸಿ ಚಿತ್ರ!
ವಿಜಯಪುರ,ಅಕ್ಟೋಬರ್ 17: ಇಲ್ಲಿನ ಸ್ಥಳೀಯ ಆಟೋರಿಕ್ಷಾವೊಂದರಲ್ಲಿ ಪಾಕಿಸ್ತಾನ ಧ್ವಜ ಹಾರಾಟ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಭಾವಚಿತ್ರವಿರುವುದು ಕಂಡು ಬಂದಿದೆ. ಈ ಕುರಿತಂತೆ ಪೊಲೀಸರಿಗೆ ದೂರು ನೀಡಲಾಗಿದೆ.
ಪಾಕಿಸ್ತಾನ ಧ್ವಜದ ಭಿತ್ತಿ ಪತ್ರ ಅಂಟಿಸಿಕೊಂಡು ಅಲೆದಾಡುತ್ತಿದ್ದ ಆಟೋ ಚಾಲಕನ ಮೇಲೆ ವಿಜಯಪುರದ ಗಾಂಧಿಚೌಕ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

KA28 C 6292 ಸಂಖ್ಯೆಯ ಆಟೋ ಮೇಲೆ ಭಿತ್ತಿ ಪತ್ರವೊಂದು ಲಗತ್ತಿಸಲಾಗಿದ್ದು, ಅದರ
ಮಧ್ಯೆ ಭಾಗದಲ್ಲಿ ಎಂಐಎಂ ಪಕ್ಷದ ಸಂಸ್ಥಾಪಕ ಓವೈಸಿ ಭಾವ ಚಿತ್ರ ಇದೆ, ಇನ್ನು ಎರಡು ಬದಿಯಲ್ಲಿ ಪಾಕಿಸ್ತಾನದ ಧ್ವಜದ ಚಿತ್ರವಿದೆ ಎಂದು ಶ್ರೀರಾಮ ಸೇನೆ ಸಂಚಾಲಕ ನೀಲಕಂಠ ಕೆಂದಗಲ್ ದೂರಿನಲ್ಲಿ ಹೇಳಿದ್ದಾರೆ.

ಡಮರುಗ ಹೆಸರಿನ ಫೇಸ್‌ಬುಕ್‌ನಲ್ಲಿ ವೈರಲ್ ಆಗಿತ್ತು. ಇದನ್ನು ಗುರುತಿಸಿದ ಹಿಂದೂ ಸಂಘಟನೆ ಸಂಚಾಲಕ ನೀಲಕಂಠ ಅವರು ಸೆಕ್ಷನ್ 124 A ಮತ್ತು 505(2) ಅಡಿಯಲ್ಲಿ ದೂರು ದಾಖಲಿಸಿದ್ದಾರೆ.
ಆಟೋ ಚಾಲಕನ ಮೇಲೆ ದೇಶ ದ್ರೋಹದ ಕಲಂ ಹಾಕಿ ಬಂಧಿಸಬೇಕೆಂದು ಹಿಂದೂಪರ ಸಂಘಟನೆಗಳು ಒತ್ತಾಯಿಸಿವೆ. ಅಲ್ಲದೆ, ಒಂದು ವೇಳೆ ಪೋಲಿಸರು ಹಿಂದೇಟು ಹಾಕಿದ್ದಲ್ಲಿ ಹಿಂದೂ ಪರ ಸಂಘಟನೆಗಳಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿವೆ.












Click it and Unblock the Notifications