Vande Mataram: ವಂದೇ ಮಾತರಂಗೆ 2 ಚರಣಕ್ಕೆ ಬ್ರೇಕ್‌; ಪರಿಷತ್‌ನಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ಭಾರೀ ಜಟಾಪಟಿ

ಬೆಂಗಳೂರು: ವಿಧಾನ ಪರಿಷತ್‌ ಕಲಾಪದ ಆರಂಭದಲ್ಲೇ ವಂದೇ ಮಾತರಂ ಗೀತೆ ವಿಚಾರ ಆಡಳಿತ ಪಕ್ಷ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷ ಬಿಜೆಪಿ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಧಾರವನ್ನು ಸಚಿವ ಯತೀಂದ್ರ ಸಿದ್ದರಾಮಯ್ಯ ಸಮರ್ಥಿಸಿಕೊಂಡರೆ, ಬಿಜೆಪಿ ಸದಸ್ಯರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕಲಾಪ ಆರಂಭವಾಗುತ್ತಿದ್ದಂತೆ ವಂದೇ ಮಾತರಂ ಗೀತೆಯನ್ನು ಪ್ರಸ್ತುತಪಡಿಸಲಾಯಿತು. ಈ ವೇಳೆ ಕಾಂಗ್ರೆಸ್‌ ಸದಸ್ಯರು ಎರಡು ಚರಣಗಳ ಬಳಿಕ ಗೀತೆಯನ್ನು ಸ್ಥಗಿತಗೊಳಿಸಿದರು. ಆದರೆ ಬಿಜೆಪಿ ಸದಸ್ಯರು ಗೀತೆಯನ್ನು ಪೂರ್ಣವಾಗಿ ಹಾಡಲು ಮುಂದಾದರು. ಇದಾದ ಬಳಿಕ ಸಭಾಪತಿ ಸಂವಿಧಾನದ ಪೀಠಿಕೆಯನ್ನು ಓದಿದರು. ವಂದೇ ಮಾತರಂ ಗೀತೆಯನ್ನು ಪೂರ್ಣಗೊಳಿಸಿದ ಬಳಿಕ ಬಿಜೆಪಿ ಸದಸ್ಯರೂ ಸಂವಿಧಾನದ ಪೀಠಿಕೆಯನ್ನು ಓದಿದರು.

Vande Mataram Row in Karnataka Legislative Council BJP members Objects to Limiting Song to Two Stanzas

ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡ ಯತೀಂದ್ರ

ವಂದೇ ಮಾತರಂ ಗೀತೆಯನ್ನು ಎರಡು ಚರಣಗಳಿಗೆ ಸೀಮಿತಗೊಳಿಸಿರುವುದನ್ನು ಸಚಿವ ಯತೀಂದ್ರ ಸಿದ್ದರಾಮಯ್ಯ ಸಮರ್ಥಿಸಿಕೊಂಡರು. ನಮ್ಮ ಸರ್ಕಾರದ ಕಾರ್ಯಕ್ರಮಗಳಲ್ಲಿ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಹಾಡಬೇಕು ಎಂದು ತೀರ್ಮಾನಿಸಲಾಗಿದೆ. ಪ್ರಧಾನಿ ಹಾಗೂ ರಾಷ್ಟ್ರಪತಿಗಳ ಕಾರ್ಯಕ್ರಮಗಳಲ್ಲಿ ಮಾತ್ರ ಪೂರ್ಣ ಗೀತೆಯನ್ನು ಹಾಡಲಾಗುತ್ತದೆ. ನಮ್ಮ ಕಾರ್ಯಕ್ರಮಗಳಲ್ಲಿ ಎರಡು ಚರಣಗಳನ್ನು ಮಾತ್ರ ಹಾಡಲಾಗುತ್ತದೆ ಎಂದು ಹೇಳಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

'ಇದು ಸರಿಯಲ್ಲ' ಎಂದ ರವಿಕುಮಾರ್

ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ಸದನದಲ್ಲಿ ಈ ಹಿಂದೆ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಲಾಗುತ್ತಿತ್ತು. ಈಗ ಎರಡು ಚರಣಗಳಿಗೆ ಮಾತ್ರ ಸೀಮಿತಗೊಳಿಸಿರುವುದು ಏಕೆ ಎಂದು ಪ್ರಶ್ನಿಸಿದರು. ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ಮತ್ತಷ್ಟು ತೀವ್ರಗೊಂಡಿತು.

ಬಿ.ಕೆ. ಹರಿಪ್ರಸಾದ್ ಮಧ್ಯಪ್ರವೇಶ

ಈ ವೇಳೆ ಬಿ.ಕೆ. ಹರಿಪ್ರಸಾದ್ ಮಧ್ಯಪ್ರವೇಶಿಸಿ, ಈ ಸದನದಲ್ಲಿ ಎರಡು ಚರಣಗಳನ್ನು ಹಾಡಲಾಗುತ್ತಿತ್ತು. ಬಿಜೆಪಿ ಸದಸ್ಯರು ಸಭಾಪತಿ ಬಂದಾಗ ಪೂರ್ಣ ಗೀತೆ ಹಾಡಲು ಆರಂಭಿಸಿದ್ದಾರೆ. ಈ ಬಗ್ಗೆ ಸದನದಲ್ಲಿ ಚರ್ಚೆಯಾಗಲಿ. ಯಾಕೆ ಎರಡು ಚರಣ ಹಾಡಬೇಕು ಎಂಬುದರ ಬಗ್ಗೆಯೂ ಚರ್ಚೆಯಾಗಲಿ ಎಂದು ಹೇಳಿದರು.

ಹರಿಪ್ರಸಾದ್ ಅವರ ಹೇಳಿಕೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಇದು ಕಾಂಗ್ರೆಸ್ ಕಚೇರಿ ಅಲ್ಲ. ವಂದೇ ಮಾತರಂ ಗೀತೆಯನ್ನು ಯಾಕೆ ಪೂರ್ಣವಾಗಿ ಹಾಡುವುದಿಲ್ಲ? ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದರು.

ಯತೀಂದ್ರ ಹೇಳಿಕೆಗೆ ಬಿಜೆಪಿ ಆಕ್ರೋಶ

ಸರ್ಕಾರದ ಆದೇಶದಂತೆ ನಡೆದುಕೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಸಭಾಪತಿಗೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದಾಗ ಬಿಜೆಪಿ ಸದಸ್ಯರು ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ನಾಯಕ ಸಿ.ಟಿ. ರವಿ, ಸಭಾಪತಿಗೆ ಯಾವುದೇ ಅಧಿಕಾರವಿಲ್ಲವೇ ಎಂದು ಪ್ರಶ್ನಿಸಿದರು. ಇದೇ ವೇಳೆ ಛಲವಾದಿ ನಾರಾಯಣಸ್ವಾಮಿ ಅವರು ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸಭಾ ನಾಯಕರಿಗೆ ಸದನದ ಬಗ್ಗೆ ಗೊತ್ತೇ ಇಲ್ಲ. ಸಭಾಪತಿಗಳಿಗೆ ಏನೂ ಮಾಡಲು ಆಗುವುದಿಲ್ಲ ಎಂದರೆ ಹೇಗೆ? ಸಭಾಪತಿಗಳ ಕೈಯಲ್ಲಿ ಏನೂ ಇಲ್ಲ ಎಂದು ಸಭಾ ನಾಯಕ ಹೇಳುತ್ತಾರೆ. ನೀವು ಕಾಂಗ್ರೆಸ್‌ನ ಸಭಾಪತಿಗಳಾ? ಕಾನೂನು ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು. ಈ ವಿಚಾರದಲ್ಲಿ ಸಭಾಪತಿಗಳು ಸ್ಪಷ್ಟನೆ ನೀಡಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು. ಕಡತ ಪರಿಶೀಲಿಸಿದ ಬಳಿಕ ಈ ಬಗ್ಗೆ ಮಾತನಾಡುವುದಾಗಿ ಸಭಾಪತಿ ತಿಳಿಸಿದರು.

'ನನ್ನ ಹೇಳಿಕೆ ತಪ್ಪಾಗಿದ್ದರೆ ಸ್ಪಷ್ಟನೆ ನೀಡುತ್ತೇನೆ'

ತಮ್ಮ ಹೇಳಿಕೆ ಕುರಿತು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಲು ಮುಂದಾದರು. ಆದರೆ ಛಲವಾದಿ ನಾರಾಯಣಸ್ವಾಮಿ, ನಿಮ್ಮ ಸ್ಪಷ್ಟನೆ ಬೇಡ, ಸಭಾಪತಿಗಳು ಮಾತನಾಡಲಿ ಎಂದು ಒತ್ತಾಯಿಸಿದರು. ಇದನ್ನು "ಅವಿವೇಕದ ಪರಮಾವಧಿ" ಎಂದು ಅವರು ಟೀಕಿಸಿದರು.

ಇದೇ ವೇಳೆ ಸಿ.ಟಿ. ರವಿ ಅವರು, "ಸಭಾಪತಿ ಪೀಠ ಸಂವಿಧಾನ ಪೀಠವೋ? ಕಾಂಗ್ರೆಸ್ ಪೀಠವೋ?" ಎಂದು ಪ್ರಶ್ನಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಂದೇ ಮಾತರಂ ಗೀತೆಯ ಎರಡು ಚರಣಗಳ ಪ್ರಸ್ತುತಿ, ಪೂರ್ಣ ಗೀತೆ ಹಾಡುವ ವಿಚಾರ ಹಾಗೂ ಸಭಾಪತಿಯ ಅಧಿಕಾರದ ಕುರಿತು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ನಡೆದ ವಾಗ್ವಾದದಿಂದ ವಿಧಾನ ಪರಿಷತ್‌ ಕಲಾಪ ಕೆಲಕಾಲ ಗದ್ದಲದ ವಾತಾವರಣಕ್ಕೆ ಸಾಕ್ಷಿಯಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+