ಕೇಂದ್ರದಿಂದ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ; ರಾಜ್ಯ ಕೇಳಿದ್ದೆಷ್ಟು, ಬಂದಿದ್ದೆಷ್ಟು?
ಬೆಂಗಳೂರು, ಏಪ್ರಿಲ್ 27: ಕಳೆದ ವರ್ಷ ಮುಂಗಾರು ವಿಫಲವಾಗಿ ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಬರದಿಂದ ರಾಜ್ಯದ ಜನತೆ ರೋಸಿ ಹೋಗಿದ್ರು. ಹೀಗಾಗಿ ಬರ ಪರಿಹಾರ ವಿಚಾರದಲ್ಲಿ ಕರ್ನಾಟಕ ಸರ್ಕಾರ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ.
ಹೌದು, ಕರ್ನಾಟಕ ಸರ್ಕಾರ ಬರ ಪರಿಹಾರದ ವಿಚಾರವಾಗಿ ಸಾಕಷ್ಟು ಬಾರೀ ಕೇಂದ್ರದ ಕದ ತಟ್ಟಿತ್ತು. ಇದೀಗ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ಬಳಿಕ ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂಪಾಯಿ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ.

ರಾಜ್ಯದಲ್ಲಿ ಭೀಕರ ಬರಗಾಲ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ 18,174 ಕೋಟಿ ಬರ ಪರಿಹಾರಕ್ಕಾಗಿ ಕೇಂದ್ರದ ಮುಂದೆ ಬೇಡಿಕೆ ಇಟ್ಟಿತ್ತು. ಇದಾದ ಬಳಿಕ ಕೇಂದ್ರದ ತಂಡವೂ ಬಂದು ಬರ ಅಧ್ಯಯನ ನಡೆಸಿ ತೆರಳಿತ್ತು. ಆದರೆ, ಪರಿಹಾರ ಮಾತ್ರ ಬಿಡುಗಡೆಯಾಗಿದ್ದಿಲ್ಲ. ಹೀಗಾಗಿ ಬರ ಪರಿಹಾರ ನೀಡಲು ಕೇಂದ್ರ ಸರ್ಕಾರ ವಿಳಂಬ ಧೋರಣೆ ಅನುಸರಿಸಿದ್ದರಿಂದ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಸುಪ್ರೀಂಕೋರ್ಟ್ನಲ್ಲಿ ಸೋಮವಾರದೊಳಗೆ ಒಪ್ಪಿಕೊಂಡಿತ್ತು. ಅದರಂತೆ ಇದೀಗ ಕೇಂದ್ರ ಸರ್ಕರ ಬರ ಪರಿಹಾರ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ 3,454 ಕೋಟಿ ಬರ ಪರಿಹಾರ ಘೋಷಣೆ ಮಾಡಿದೆ. ಇದೇ ವೇಳೆ ತಮಿಳುನಾಡಿಗೆ 275 ಕೋಟಿ ನೆರೆ ಪರಿಹಾರ ಘೋಷಣೆ ಮಾಡಿದೆ.
ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿ ಕೇಂದ್ರದ ಕ್ರಮವನ್ನು ಸ್ವಾಗತಿಸಿರುವ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ತೀವ್ರ ಬರ ಇದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿ ತಡವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಅನುಮತಿ ಪಡೆದು ಸಂಕಷ್ಡ ಕಾಲದಲ್ಲೂ ಕರ್ನಾಟಕದ ಜನರ ಪರವಾಗಿ ತೀರ್ಮಾನ ತೆಗೆದುಕೊಂಡಿರುವುದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಕಳಕಳಿ ತೋರಿಸುತ್ತದೆ. ರಾಜ್ಯ ಸರ್ಕಾರ ನಿರಂತರವಾಗಿ ಈ ಬಗ್ಗೆ ಅಪಪ್ರಚಾರ ಮಾಡದೇ ಆರು ತಿಗಳ ಹಿಂದೆಯೇ ರೈತರಿಗೆ ಪರಿಹಾರ ಒದಗಿಸಿದ್ದರೆ ರೈತರ ಬದುಕು ಸ್ವಲ್ಪನಾದರು ಸುಧಾರಿಸುತ್ತಿತ್ತು. ಆದರೆ, ಅದನ್ನು ರಾಜ್ಯ ಸರ್ಕಾರ ಮಾಡದಿರುವುದು ವಿಷಾದನೀಯ. ಈ ಸಂಕಷ್ಟದ ಕಾಲದಲ್ಲಿ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡುವ ತೀರ್ಮಾನ ತೆಗೆದುಕೊಂಡಿವುದು ಅತ್ಯಂತ ಸ್ವಾಗತಾರ್ಹ ಎಂದಿದ್ದಾರೆ.












Click it and Unblock the Notifications