ಮಧ್ಯಮ ವರ್ಗಕ್ಕೆ ಪೆಟ್ಟು, ಇದು ಹಳೇ ವೈನು ಹೊಸ ಬಾಟ್ಲು!
ಬೆಂಗಳೂರು, ಮಾರ್ಚ್ 02 : ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮಂಡನೆ ಮಾಡಿದ 2016-17 ಸಾಲಿನ ಬಜೆಟ್ ಜನಸಾಮನ್ಯರಲ್ಲಿ ಭಾರೀ ನಿರಾಸೆ ಮೂಡಿಸಿದೆ ಎಂದು ಆಮ್ ಆದ್ಮಿ ಪಕ್ಷ ಪ್ರತಿಕ್ರಿಯೆ ನೀಡಿದೆ. ಬಜೆಟ್ ಮೂಲಕ ಜೇಟ್ಲಿ ಮಧ್ಯಮ ವರ್ಗಕ್ಕೆ ಪೆಟ್ಟು ಕೊಟ್ಟಿದ್ದಾರೆ ಎಂದು ಪಕ್ಷ ಆರೋಪಿಸಿದೆ.
ಆಮ್ ಆದ್ಮಿ ಪಕ್ಷ ಕರ್ನಾಟಕದ ರಾಜ್ಯ ಸಹ ಸಂಚಾಲಕ ಮತ್ತು ಮಾಧ್ಯಮ ಉಸ್ತುವಾರಿ ಶಿವಕುಮಾರ್ ಚೆಂಗಲರಾಯ ಅವರು ಬಜೆಟ್ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಆದಾಯ ತೆರಿಗೆ ಮಿತಿಯಲ್ಲಿ ಸತತ 2 ವರ್ಷಗಳ ಕಾಲ ಯಾವುದೇ ಬದಲಾವಣೆ ಮಾಡದೆ, ಇನ್ನಷ್ಟು ಸೆಸ್‍ಗಳನ್ನು ಜಾರಿ ಮಾಡುವ ಮೂಲಕ ಜನಸಾಮಾನ್ಯರ ಮೇಲೆ ಬರೆ ಎಳೆಯಲಾಗಿದೆ ಎಂದು ಅವರು ದೂರಿದ್ದಾರೆ. [ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]
ಹಣದುಬ್ಬರ ಇಳಿಸುವ ಯಾವುದೇ ಕಾರ್ಯಕ್ಕೆ ಕೈ ಹಾಕಿಲ್ಲ ಹಾಗೂ ರಫ್ತು ಉತ್ತೇಜನಕ್ಕೂ ಆದ್ಯತೆ ನೀಡಲಾಗಿಲ್ಲ. ತೆರಿಗೆ ಸಂಗ್ರಹಣೆಯಲ್ಲಿ ಸರ್ಕಾರ ಹಿಂದೆ ಬಿದ್ದಿದೆ ಎಂದು ಸ್ವತಃ ಸಚಿವರೇ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಅತ್ಯಂತ ಕಡಿಮೆ ಮಟ್ಟದಲ್ಲಿದ್ದರೂ, ಮಿನಿರಲ್ ವಾಟರ್‌ಗಿಂತ ಅಗ್ಗದ ದರದಲ್ಲಿ ಲಭ್ಯವಿದ್ದರೂ ಅದರ ಲಾಭವನ್ನು ಜನರಿಗೆ ತಲುಪಿಸಿಲ್ಲ. [ಫನ್ನಿ ಟ್ವೀಟ್ಸ್ : ಬೀಡಿ ಸೇದೋಣ, ಗುಂಡು ಹಾಕೋಣ]

ಬಜೆಟ್‍ನಲ್ಲಿ ರೈತರಿಗೆ ಯಾವುದೇ ನೇರ ನೆರವನ್ನು ನೀಡಲಾಗಿಲ್ಲ. 5 ವರ್ಷದಲ್ಲಿ ರೈತನ ಆದಾಯವನ್ನು ದ್ವಿಗುಣ ಮಾಡುವುದಾಗಿ ಹೇಳಿದ್ದಾರೆ, ಆದರೆ 5 ವರ್ಷದಲ್ಲಿ ರೈತನ ಖರ್ಚುಗಳು ದುಪ್ಪಟ್ಟಿಗಿಂತ ಹೆಚ್ಚಾಗುತ್ತದೆ. ಈಗ ರೈತನ ಸರಾಸರಿ ಆದಾಯ 3 ಸಾವಿರದಷ್ಟದ್ದು 5 ವರ್ಷದ ನಂತರ ಸರಾಸರಿ ಆದಾಯವನ್ನು 6 ಸಾವಿರ ಮಾಡಿದರೆ ಅದ ಯಾವ ನ್ಯಾಯ? ಎಂದು ವಿತ್ತ ಸಚಿವರು ತಿಳಿಸಬೇಕಿದೆ. [ಅರುಣ್ ಜೇಟ್ಲಿ ಬಜೆಟ್ : ಯಾವ ಪತ್ರಿಕೆ ಶೀರ್ಷಿಕೆ ಚೆನ್ನಾಗಿದೆ?]
ಕೃಷಿಗೆ ನೀಡಲಾಗಿರುವ ಹಣವನ್ನು ಬುದ್ಧಿವಂತಿಕೆಯಿಂದ ಕೃಷಿ ಕಲ್ಯಾಣ್ ಸೆಸ್ ಜಾರಿ ಮಾಡುವ ಮೂಲಕ ಮತ್ತೆ ರೈತ ಸೇರಿದಂತೆ ಜನ ಸಾಮಾನ್ಯರ ಮೇಲೆ ಹೊರಿಸಿದೆ. ಇದರಿಂದಾಗಿ ರೈತನ ಬದುಕಿನಲ್ಲಿ ಯಾವುದೇ ನಿಜವಾದ ಬದಲಾವಣೆ ಸಾಧ್ಯವಿಲ್ಲ. ರೈತ ತನ್ನ ಜೇಬಿನಿಂದ ಸರ್ಕಾರಕ್ಕೆ ದುಡ್ಡು ಕೊಟ್ಟು ನಂತರ ನೆರವಿಗೆ ಸರ್ಕಾರದ ಕಾಲಿಗೆ ಬೀಳುವಂತಾಗಿದೆ. [ರುಪಾಯಿ ಎಲ್ಲಿಂದ ಬರಲಿದೆ, ಎಲ್ಲೆಲ್ಲಿ ವಿನಿಯೋಗವಾಗಲಿದೆ?]
ಕಪ್ಪುಹಣದ ವಿರುದ್ಧ ಗುಡುಗುತ್ತಾ ಅಧಿಕಾರ ಹಿಡಿದ ನರೇಂದ್ರ ಮೋದಿಯವರು, ಕಪ್ಪುಹಣ ಗಳಿಕೆದಾರರನ್ನು ರಕ್ಷಿಸಲು ಸ್ವಯಂಪ್ರೇರಿತ ಘೋಷಣೆ ಯೋಜನೆಯನ್ನು ಜಾರಿಗೆ ತಂದಂತಿದೆ. ಈ ಮೂಲಕ ಭ್ರಷ್ಟ ಅಧಿಕಾರಿಗಳು ಹಾಗೂ ಭ್ರಷ್ಟ ರಾಜಕಾರಣಿಗಳೂ ಕೂಡ ಇನ್ನು ಮುಂದೆ ಇಟಾಸ್ಕಾದಂತಹ ಬೇನಾಮಿ ಕಂಪನಿಗಳನ್ನು ಸೃಷ್ಟಿಸುವ ಅಗತ್ಯವಿಲ್ಲದೇ ಜನರಿಂದ ಲೂಟಿ ಮಾಡಿದ ಅಕ್ರಮ ಹಣವನ್ನು ಸಕ್ರಮ ಮಾಡಿಕೊಳ್ಳಬಹುದಾಗಿದೆ.
ಹಣ ಲೂಟಿ ಮಾಡುವ ಜನರು, ಕಂದಾಯ ಕಚೇರಿಗೆ ಚೀಲದಲ್ಲಿ ಹಣ ತಂದು 45% ತೆರಿಗೆ ಕಟ್ಟಿ, ತಮ್ಮ ಕಪ್ಪುಹಣವನ್ನು ಸಕ್ರಮ ಮಾಡಿಕೊಳ್ಳಬಹುದಾಗಿದೆ. ಆ ಹಣದ ಮೂಲ ಯಾವುದು, ಅದು ರಾಷ್ಟ್ರವಾದಿಗಳ ಹಣವೇ? ಅಥವಾ ದೇಶದ್ರೋಹಿಗಳ ಹಣವೇ? ಅದು ಸಮಾಜಘಾತುರ ಹಣವೇ? ಎಂಬುದನ್ನು ಸರ್ಕಾರ ಯಾವುದೇ ಕಾರಣಕ್ಕೂ ಹುಡುಕಲು ಹೋಗುವುದಿಲ್ಲ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಇದನ್ನು ದೇಶದ ಜನತೆ ಅರಗಿಸಿಕೊಳ್ಳುವುದಾದರೂ ಹೇಗೇ?. ಇದು ಸರಿಯಾದ ಕ್ರಮವೇ? ವಿದೇಶದಲ್ಲಿರುವ ಕಪ್ಪುಹಣವನ್ನು ಹೇಗೆ ಭಾರತಕ್ಕೆ ತರಲಾಗುವುದು? ಎಂಬುದನ್ನು ವಿತ್ತ ಸಚಿವರು ಹಾಗೂ ಪ್ರಧಾನಿಗಳು ಉತ್ತರಿಸಿಲ್ಲ. ನಕಲಿ ರಾಷ್ಟ್ರವಾದಿಗಳ ಪಕ್ಷದ ಸರ್ಕಾರ, ಈ ದೇಶದ ಜನರಿಗೆ ಈ ಕೂಡಲೇ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕಿದೆ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.












Click it and Unblock the Notifications