KEA ಅಭ್ಯರ್ಥಿಗಳಿಗೆ ಗುಡ್‌ನ್ಯೂಸ್; UGNEET ಆಪ್ಷನ್ ಎಂಟ್ರಿ ದಿನಾಂಕ ವಿಸ್ತರಣೆ, VAO-ಭೂಮಾಪಕರ ಪರೀಕ್ಷೆ ಅಪ್ಡೇಟ್
ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಪದವಿ ಪೂರ್ವ 2026ಕ್ಕೆ (UGNEET-26) ಸಂಬಂಧಿಸಿದಂತೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಮೂರನೇ ಸುತ್ತಿನ ಸೀಟು ಹಂಚಿಕೆಗೆ ಆಪ್ಷನ್ಸ್ ದಾಖಲಿಸಲು ಅಕ್ಟೋಬರ್ 2ರಂದು ಬೆಳಗ್ಗೆ 10ಗಂಟೆವರೆಗೆ ದಿನಾಂಕ ವಿಸ್ತರಿಸಣೆ ಮಾಡಲಾಗಿದೆ. ಜೊತೆಗೆ ಭೂಮಾಪಕರ ಹಾಗೂ ಗ್ರಾಮ ಆಡಳಿತಾಧಿಕಾರಿ ಹಾಗೂ PGCET-26 ಗೆ ಸಂಬಂಧಿಸಿದಂತೆ ಅಪ್ಡೇಟ್ ಮಾಹಿತಿ ನೀಡಲಾಗಿದೆ.
ಎಚ್ಚರಿಕೆ ಠೇವಣಿ ಪಾವತಿಗೆ ಅಕ್ಟೋಬರ್ 1 ರವರೆಗೆ ಅವಕಾಶ ನೀಡಲಾಗಿದೆ. ಇದುವರೆಗೂ ಯಾವುದೇ ಸೀಟು ಹಂಚಿಕೆಯಾಗದಿರುವವರು, ಸೀಟು ಹಂಚಿಕೆ ನಂತರ ದಂಡ ಪಾವತಿಸಿ ರದ್ದುಪಡಿಸಿಕೊಂಡವರು, ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಚಾಯ್ಸ್-4 ಆಯ್ಕೆ ಮಾಡಿ ಹೊರ ಹೋಗಿರುವವರು, ಎರಡನೇ ಸುತ್ತಿನ ಅಂತಿಮ ಫಲಿತಾಂಶಕ್ಕೂ ಮೊದಲು ಸೀಟು ತ್ಯೆಜಿಸಿದ ಅಭ್ಯರ್ಥಿಗಳು 3ನೇ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ ಎಂದು ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ತಿಳಿಸಿದರು.

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟಿಗೆ ಈಗಾಗಲೇ ಪ್ರವೇಶ ಪಡೆದಿರುವ ಅಭ್ಯರ್ಥಿಗಳು ಅಪ್‌ಗ್ರೇಡೇಷನ್ ಮಾಡಿಕೊಳ್ಳಲು ಆಸಕ್ತಿ ಇದ್ದಲ್ಲಿ ಅವರು ಕೂಡ ಭಾಗವಹಿಸಬಹುದು. ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಯಾವುದೇ ಚಾಯ್ಸ್ ದಾಖಲಿಸದಿರುವವರು ಈ ಸುತ್ತಿನಲ್ಲಿ ಭಾಗವಹಿಸಲು ಅರ್ಹರಲ್ಲ ಎಂದು ಅವರು ಹೇಳಿದರು.
ಕೆಇಎ ನೇಮಕಾತಿ ಅಪ್ಡೇಟ್
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇಮಕಾತಿಗೆ (KeaRecruitment 2026) ಸಂಬಂಧಿಸಿದಂತೆ ಭೂಮಾಪಕರ ಹಾಗೂ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಕ್ರಮವಾಗಿ ಅಕ್ಟೋಬರ್ 2 ಮತ್ತು 4ರಂದು ಉಳಿಕೆ ಮೂಲ ವೃಂದದವರಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು KEA ಅಧಿಕೃತ ವೆಬ್‌ಸೈಟ್ ಲಿಂಕ್ ಬಿಡುಗಡೆ ಮಾಡಿದೆ.
ಈವರೆಗೆ ಭೂಮಾಪಕತರ ಹುದ್ದೆಗೆ 92,701 ಹಾಗೂ ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ 4,11,656 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು ಪರೀಕ್ಷಾ ಕೇಂದ್ರದ ಮಾಹಿತಿಯನ್ನು ವೀಕ್ಷಿಸಬೇಕು. ಆ ಪ್ರಕಾರ ಪರೀಕ್ಷೆಗೆ ಹಾಜರಾಗಲು ಸೂಚನೆ ನೀಡಲಾಗಿದೆ ಎಂದು ಎಚ್.ಪ್ರಸನ್ನ ಅವರು ತಿಳಿಸಿದ್ದಾರೆ.
ಸ್ನಾತಕೋತ್ತರ ಕೋರ್ಸ್ ಪ್ರವೇಶದ ಅಪ್ಡೇಟ್
ಸಾಮಾನ್ಯ ಪ್ರವೇಶ ಪರೀಕ್ಷೆ-ಸ್ನಾತಕೊತ್ತರ 2026ಕ್ಕೆ (PGCET-26) ಸಂಬಂಧಿಸಿದಂತೆ ಎಂಬಿಎ, ಎಂಸಿಎ, ಎಂಇ, ಎಂ.ಟೆಕ್/ಎಂ ಆರ್ಕ್ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಫಲಿತಾಂಶವನ್ನು ಈಗಾಗಲೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಕೋರ್ಸ್ ಪ್ರವೇಶದ ಶುಲ್ಕ ಪಾವತಿಗೆ ಅಕ್ಟೋಬರ್ 3 ಕೊನೆ ದಿನವಾಗಿದೆ.
ಸೀಟು ಹಂಚಿಕೆಯಾದ ಅಭ್ಯರ್ಥಿಗಳು ನೇರವಾಗಿ ಶುಲ್ಕ ಪಾವತಿಸಿ, ಅಕ್ಟೋಬರ್ 5ರೊಳಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಯಾವುದೇ ಕಾರಣಕ್ಕೆ ಕಾಲೇಜು ಪ್ರವೇಶ ತಪ್ಪಿಸಬಾರದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಣೆಯಲ್ಲಿ ತಿಳಿಸಿದೆ.


Click it and Unblock the Notifications
