KEA UGNEET-25: ವಿವಿಧ ಕೋರ್ಸ್‌ಗಳ 3ನೇ ಸುತ್ತಿನ ಸೀಟು ಹಂಚಿಕೆ ಆರಂಭ: ಸೆ.8 ಕೊನೆಯ ದಿನ
ಬೆಂಗಳೂರು, ಸೆಪ್ಟಂಬರ್ 06: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಯುಜಿ ಸಿಇಟಿ ಅಥವಾ ಯುಜಿ ನೀಟ್ 2025 (UGNEET-25) ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಸೀಟು ಹಂಚಿಕೆ ಎರಡನೇ ಸುತ್ತಿನ ಮುಂದಿನ ಭಾಗ ಮತ್ತು ಎಂಜಿನಿಯರಿಂಗ್ ಇತ್ಯಾದಿ ಯುಜಿಸಿಇಟಿ ಕೋರ್ಸ್‌ಗಳ 3ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಶನಿವಾರದಿಂದ ಆರಂಭಿಸಿದೆ. ಯಾರೆಲ್ಲ ಭಾಗವಹಿಸುತ್ತೀರಿ ಅವರೆಲ್ಲ ಇಲ್ಲಿನ ಪ್ರಮುಖ ದಿನಾಂಕ, ಸೂಚನೆ ಗಮನಿಸಬೇಕು.
3ನೇ ಸುತ್ತಿನ ಸೀಟು ಹಂಚಿಕೆ ಆರಂಭವಾಗಿದೆ. ಅಭ್ಯರ್ಥಿಗಳಿಗೆ ಕಾಷನ್ ಡೆಪಾಸಿಟ್ (ಎಚ್ಚರಿಕೆ ಠೇವಣಿ ಹಣ) ಪಾವತಿಸಿ, ಇಚ್ಛೆ/ಆಯ್ಕೆಗಳನ್ನು ಅದಲು/ಬದಲು ಮಾಡಿಕೊಳ್ಳಲು ಹಾಗೂ ಹೊಸದಾಗಿ ಸೇರಿಸುವುದಕ್ಕೆ ಸೆಪ್ಟಂಬರ್ 8ರವರೆಗೆ ಅವಕಾಶ ನೀಡಲಾಗಿದೆ. ಸಮಯದ ಅಭಾವ ಇರುವ ಕಾರಣ, ನಿಗದಿತ ಕಾಲ ಮಿತಿಯಲ್ಲೇ ಎಲ್ಲ ಪೋಷಕರು/ವಿದ್ಯಾರ್ಥಿಗಳು ಮುಂಗಡ ಹಣ ಪಾವತಿಸಿ, ಇಚ್ಛೆ/ಆಯ್ಕೆಗಳನ್ನು ದಾಖಲಿಸುವ/ಅದಲು-ಬದಲು ಮಾಡುವ ಕೆಲಸವನ್ನು ಮಾಡಬೇಕು ಎಂದು KEA ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಶನಿವಾರ ತಿಳಿಸಿದ್ದಾರೆ.

ಸೀಟ್ ಮ್ಯಾಟ್ರಿಕ್ಸ್‌ಗೆ ಹೊಸದಾಗಿ ಸೇರ್ಪಡೆಯಾದ ಬೆಳಗಾವಿಯ ಜೆಎನ್‌ಎಂಸಿ ಕಾಲೇಜಿನ 12 ವೈದ್ಯಕೀಯ ಸೀಟು ಹಾಗೂ ಮೈಸೂರಿನ ಫರೂಕಿಯ ದಂತ ವೈದ್ಯಕೀಯ ಕಾಲೇಜಿನ 40 ಸೀಟು ಹಾಗೂ ಬಿಜಿಎಸ್ ಗ್ಲೋಬಲ್ ದಂತ ವೈದ್ಯಕೀಯ ಕಾಲೇಜಿನ 50 ಸೀಟುಗಳನ್ನು ಆಸಕ್ತರು ತಮ್ಮ ಇಚ್ಛೆ/ಆಯ್ಕೆಗಳ ಪಟ್ಟಿಗೆ ಹೊಸದಾಗಿ ಸೇರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇನ್ನೂ ಹಾಲಿ ಇರುವ ಇಚ್ಛೆ/ಆಯ್ಕೆಗಳನ್ನು ಬದಲಿಸಿಕೊಳ್ಳುವುದಕ್ಕೂ ಅವಕಾಶ ಇದೆ.
ಎಂಟು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿಯಾಗಿ 400 ವೈದ್ಯಕೀಯ ಸೀಟುಗಳು ಸೇರ್ಪಡೆಯಾಗಿವೆ. ಅವುಗಳನ್ನು ಕೂಡ ಈ ಸುತ್ತಿಗೆ ಪರಿಗಣಿಸಲಾಗುತ್ತದೆ. ಅಲ್ಲದೆ, ಈ ಸರ್ಕಾರಿ ಕಾಲೇಜುಗಳಲ್ಲಿ 25 ಲಕ್ಷ ರೂಪಾಯಿಗೆ ಎನ್‌ಆರ್‌ಐ ಸೀಟುಗಳನ್ನು ಸರ್ಕಾರ ಕೊಟ್ಟಿದೆ. ಅರ್ಹ ಎನ್‌ಆರ್‌ಐ ಅಭ್ಯರ್ಥಿಗಳು ಹೊಸದಾಗಿ ಸದರಿ ಕಾಲೇಜುಗಳ ಸೀಟುಗಳಿಗೆ ಇಚ್ಛೆ/ಆಯ್ಕೆಗಳನ್ನು ನಮೂದಿಸಬಹುದು. ಎನ್‌ಆರ್‌ಐ ಅಲ್ಲದ ಅಭ್ಯರ್ಥಿಗಳು ಕೂಡ ಈ ಕಾಲೇಜುಗಳಲ್ಲಿ ʼಕ್ಯೂʼ ಸೀಟುಗಳಿಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಬಹುದು. ಭರ್ತಿಯಾಗದೆ ಉಳಿಯುವ ಎನ್‌ಆರ್‌ಐ ಸೀಟುಗಳನ್ನು "ಕ್ಯೂʼ ಸೀಟುಗಳನ್ನಾಗಿ ಪರಿವರ್ತಿಸಿ, ಹಂಚಿಕೆ ಮಾಡಲಾಗುವುದು.
ಯುಜಿಸಿಇಟಿ: ಕಾಷನ್ ಡೆಪಾಸಿಟ್
ಯುಜಿಸಿಇಟಿ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ 3ನೇ ಸುತ್ತಿನಲ್ಲಿ ಭಾಗವಹಿಸಲು ಆಸಕ್ತಿ ಇರುವ ಎಲ್ಲ ವರ್ಗದ ಅರ್ಹ ಅಭ್ಯರ್ಥಿಗಳು 10 ಸಾವಿರ ರೂಪಾಯಿ ಕಾಷನ್ ಡೆಪಾಸಿಟ್ ಪಾವತಿಸಬೇಕು. ಬಳಿಕ ಇಚ್ಛೆ/ಆಯ್ಕೆಗಳನ್ನು ಅದಲು/ಬದಲು ಮಾಡಿಕೊಳ್ಳುವುದಲ್ಲದೆ, ಹೊಸದಾಗಿಯೂ ಕೋರ್ಸ್‌ಗಳನ್ನು ದಾಖಲಿಸಲು ಅವಕಾಶ ಒದಗಿಸಲಾಗುವುದು.

ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಯಾವುದೇ ಸೀಟು ಹಂಚಿಕೆಯಾಗದವರು, 2ನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಯಾವುದೇ ಛಾಯ್ಸ್ ನೀಡದಿರುವ, 2ನೇ ಸುತ್ತಿನಲ್ಲಿ ಛಾಯ್ಸ್-1 ಅಥವಾ ಛಾಯ್ಸ್-2 ಆಯ್ಕೆ ಮಾಡಿ ಶುಲ್ಕ ಪಾವತಿ ಮಾಡದಿರುವ ಹಾಗೂ ಛಾಯ್ಸ್-3 ದಾಖಲಿಸಿ, ಕಾಷನ್ ಹಣ ಪಾವತಿಸದೇ ಇರುವ ಅಭ್ಯರ್ಥಿಗಳಿಗೆ 3ನೇ ಸುತ್ತಿನಲ್ಲಿ ಕಾಷನ್ ಡೆಪಾಸಿಟ್ ಪಾವತಿಸಿ, ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ ಎಂದರು.
ಸೀಟು ರದ್ದಿತಿಗೆ ಅಂದೆ (ಸೆ.8) ಕೊನೆ ದಿನ
ಅಭ್ಯರ್ಥಿಗಳು ತಮಗೆ ಹಂಚಿಕೆಯಾಗಿರುವ ಕಾಲೇಜುಗಳಿಗೆ ಸೇರಿಕೊಳ್ಳಬೇಕು. ತದನಂತರ ಆ ಕಾಲೇಜು/ಸೀಟು ಬೇಡ ಎನ್ನುವವರೂ ಸೆ.8ರೊಳಗೆ ಕೆಇಎಗೆ ಖುದ್ದು ಬಂದು ಸೀಟು ರದ್ದುಪಡಿಸಿಕೊಳ್ಳಬೇಕು. ಹಾಗೆ ಮಾಡುವುದರಿಂದ ಸದರಿ ಸೀಟುಗಳನ್ನು ನಂತರದ ಸುತ್ತಿನಲ್ಲಿ ಇತರರಿಗೆ ಹಂಚಿಕೆ ಮಾಡಲು ಅನುಕೂಲವಾಗುತ್ತದೆ.
ಮೂರನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದ ನಂತರ ಕಾಲೇಜಿಗೆ ಸೇರುವುದು ಕಡ್ಡಾಯವಾಗಿರುತ್ತದೆ. ಹೀಗಾಗಿ ಅಭ್ಯರ್ಥಿಗಳು ಎಚ್ಚರವಹಿಸಿ, ಕೋರ್ಸ್/ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ಈ ಸುತ್ತಿನಲ್ಲಿ ಹಂಚಿಕೆಯಾದ ಕಾಲೇಜಿಗೆ ಪ್ರವೇಶ ಪಡೆಯದೇ ಇದ್ದಲ್ಲಿ ಪೂರ್ಣ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಅಲ್ಲದೆ, ಕಾನೂನು ಕ್ರಮ ಕೂಡ ಜರುಗಿಸಲಾಗುತ್ತದೆ.
ಸರ್ಕಾರಿ ಕಾಲೇಜುಗಳಲ್ಲಿನ ಕೆಲವು ಕೋರ್ಸ್‌ಗಳಿಗೆ ಶುಲ್ಕ ರಿಯಾಯಿತಿ ಕೂಡ ಇದ್ದು, ಅಭ್ಯರ್ಥಿಗಳು ಇಚ್ಛೆ/ಆಯ್ಕೆಗಳನ್ನು ದಾಖಲಿಸುವ ಸಂದರ್ಭದಲ್ಲಿ ಈ ಕುರಿತು ಯೋಚಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications