ಉಡುಪಿ : ಓಮ್ನಿ ವ್ಯಾನಿಗೆ ಬಸ್ ಡಿಕ್ಕಿ, ಒಂದು ಸಾವು
ಉಡುಪಿ, ಜೂ. 20 : ಖಾಸಗಿ ಬಸ್ ಮತ್ತು ಮಾರುತಿ ಓಮ್ನಿ ವ್ಯಾನಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕಾರು ಚಾಲಕ ಮೃತಪಟ್ಟ ಘಟನೆ ಮಾಬುಕಳ ಚೇತನಾ ಪ್ರೌಢಶಾಲೆಯ ಸಮೀಪ ನಡೆದಿದೆ. ಖಾಸಗಿ ಬಸ್ ಕುಂದಾಪುರದಿಂದ ಉಡುಪಿಗೆ ಬರುತ್ತಿತ್ತು ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ವ್ಯಾನಿನ ಚಾಲಕ ಸಾಲಿಗ್ರಾಮದ ನಿವಾಸಿ ಭರತ್ ನಾಯರಿ (22) ಎಂದು ಗುರುತಿಸಲಾಗಿದೆ. ಸ್ವಂತ ಟೂರಿಸ್ಟ್ ನಡೆಸುತ್ತಿದ್ದ ಇವರು ಬುಧವಾರ ವ್ಯಾನಿನಲ್ಲಿ ಬ್ರಹ್ಮಾವರದಿಂದ ಸಾಲಿಗ್ರಾಮ ಕಡೆ ಬರುತ್ತಿರುವಾಗ ಎದುರಿನಿಂದ ಬಂದ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ.

ಬಸ್ ಓಮ್ನಿ ವ್ಯಾನಿಗೆ ಗುದ್ದಿದ ರಭಸಕ್ಕೆ ವ್ಯಾನಿನ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಚಾಲಕ ಭರತ್ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಸ್ಥಳೀಯರು ಆತನನ್ನು ಕೂಡಲೇ ರಕ್ಷಿಸಿ, ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. [ಉಡುಪಿ ಅಷ್ಟ ಮಠಗಳ ಪೀಠಾಧಿಪತಿಗಳು ಯಾರು?]
ಇದ್ದ ಒಬ್ಬ ಮಗ ಮೃತಪಟ್ಟ : ಅಪಘಾತದಲ್ಲಿ ಮೃತಪಟ್ಟ ಭರತ್ ಕುಟುಂಬಕ್ಕೆ ಆಧಾರವಾಗಿದ್ದ. ಇವರ ತಂದೆ ಆನಂದ ನಾಯರಿ ಲಾರಿ ಚಾಲಕರಾಗಿದ್ದರು. ಆನಂದ ಅವರ ಮೂವರು ಮಕ್ಕಳಲ್ಲಿ ಭರತ್ ಒಬ್ಬರೇ ಗಂಡು ಮಗನಾಗಿದ್ದರು. ಕೋಟ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications