Tungabhadra Dam: ತುಂಗಭದ್ರಾ ಡ್ಯಾಂ 33 ಗೇಟ್ ಅಳವಡಿಕೆಗೆ ಮುಹೂರ್ತ ಫಿಕ್ಸ್: ಕಾಮಗಾರಿಗೆ ಡೆಡ್‌ಲೈನ್
Tungabhadra Dam Updates: ಉತ್ತರ ಕರ್ನಾಟಕದ ತುಂಗಭದ್ರಾ ಜಲಾಶಯವು ನಮ್ಮ ಭಾಗದ ಲಕ್ಷಾಂತರ ರೈತರ ಜೀವನಾಡಿಯಾಗಿದೆ. ಪ್ರಸ್ತುತ ಹಳೆಯದಾಗಿರುವ ಜಲಾಶಯದ ಎಲ್ಲಾ 33 ಕ್ರಸ್ಟ್ ಗೇಟ್ ಗಳನ್ನು ಬದಲಾಯಿಸಲು 52 ಕೋಟಿ ರೂಪಾಯಿ ವೆಚ್ಚದಲ್ಲಿ ಈಗಾಗಲೇ ಟೆಂಡರ್ ಕರೆಯಲಾಗಿದೆ. ಕಾಮಗಾರಿ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಸಂಬಂಧ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಶನಿವಾರ ಮುನಿರಾಬಾದ್ ನಲ್ಲಿ ತುಂಗಭದ್ರಾ ಜಲಾಶಯದ ನೂತನ ಕ್ರಸ್ಟಗೇಟ್ ಅಳವಡಿಸುವ ಕುರಿತು ಕೆ.ಎನ್.ಎನ್.ಎಲ್ ಅಧಿಕಾರಿಗಳು ಹಾಗೂ ತುಂಗಭದ್ರಾ ಮಂಡಳಿಯ ಅಧಿಕಾರಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಸಚಿವರು ಅವರು ಮಾತನಾಡಿದರು.

ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ಡಿಸೆಂಬರ್ 20 ರಿಂದ ಆರಂಭಿಸುವಂತೆ ತಿಳಿಸಿದ್ದಾರೆ. ನಿಗದಿತ ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸಬೇಕು. ಈಗಾಗಲೇ ಟೆಂಡರ್ ಕರೆಯಲಾಗಿದೆ. ಅದರಂತೆ ಪ್ರಸ್ತುತ ಕ್ರಸ್ಟ್ ಗೇಟ್ ಗಳ ಡಿಸ್ ಮೆಟಲಿಂಗ್ ಮತ್ತು ಇತರೆ ಕೆಲ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳಬೇಕು. ಇದಕ್ಕಾಗಿ ಗುತ್ತಿಗೆದಾರರು ಎರಡು ತಂಡಗಳನ್ನು ರಚಿಸಿ ಶೀಘ್ರವೇ ಕೆಲಸ ಮಾಡಿಸಬೇಕು. ಅಧಿಕಾರಿಗಳು ಕ್ರಮ ಕೈಗೊಂಡು ನಿಗದಿತ ಕಾಲಮಿತಿಯಲ್ಲಿ ಕೆಲಸ ಮುಗಿಸಬೇಕೆಂದು ನಿರ್ದೇಶಿಸಿದರು.
ಗೇಟ್ ಅಳವಡಿಕೆ ಕಾರ್ಯ ಗಡುವು ಯಾವಾಗ?
ಮುಂಗಾರು ಬೆಳೆಗಳಿಗೆ ನೀರು ಒದಗಿಸಲು ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ಕೂಡ ನಮ್ಮ ಕರ್ತವ್ಯ. ತುಂಗಭದ್ರಾ ಜಲಾಶಯದ ನೂತನ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ 2026 ಮೇ ಒಳಗೆ ಮುಗಿಯಲೇಬೇಕು. ಅಧಿಕಾರಿಗಳು ತೀವ್ರ ನಿಗಾವಹಿಸಬೇಕು. ನೂತನ ಕ್ರಸ್ಟ್ ಗೇಟ್ ಅಳವಡಿಸುವ ಕಾರ್ಯ ನಡೆಯುವ ಸ್ಥಳಕ್ಕೆ ಯಾರನ್ನು ಬಿಡಬಾರದು. ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಿ ಎಂದರು.
ಕುಡಿಯುವ ನೀರಿಗೆ ಸಮಸ್ಯೆ ಆಗಬಾರದು!
ಈ ಭಾಗದ ರೈತರು ಎರಡನೇ ಬೆಳೆಗೆ ಬೇಕಾದ ನೀರನ್ನು ಪಡೆಯದೇ ತ್ಯಾಗ ಮಾಡಿದ್ದಾರೆ. ಇದನ್ನು ನಾವೆಲ್ಲರೂ ಅರಿತುಕೊಂಡ ಕೆಲಸ ಮಾಡಬೇಕು. ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಸೇರಿ ಎಲ್ಲಾ 33 ಕ್ರಸ್ಟ್ ಗೇಟ್ ಗಳನ್ನು ಬದಲಾಯಿಸುವುದಾಗಿ ರೈತರಿಗೆ ಮಾತು ನೀಡಿದ್ದೇವೆ. 2026ರ ಮುಂಗಾರು ವೇಳೆ ಜೂನ್ ಮಾಹೆಯಲ್ಲಿ ಜಲಾಶಯದಲ್ಲಿ ನೀರು ಸಂಗ್ರಹವಾಗುತ್ತದೆ.
ಜಲಾಶಯದಿಂದ 23 TMC ನೀರು ಬಳಕೆ
ತುಂಗಭದ್ರಾ ಜಲಾಶಯದ ಒಟ್ಟಾರೆ 23 ಟಿ.ಎಂ.ಸಿಯಷ್ಟು ನೀರನ್ನು ಬಳಕೆ ಮಾಡಲಾಗಿದೆ. ಸದ್ಯ ಜಲಾಶಯದ ಮಟ್ಟವು 1621.72 ಅಡಿ ಇದೆ. ಕ್ರಸ್ಟ್ ಗೇಟ್ ಗಳನ್ನು ಆಳವಡಿಸಲು 1613 ಅಡಿ ಇರಬೇಕು. ಉಳಿದ ಹೆಚ್ಚುವರಿ 9 ಅಡಿಯಷ್ಟು ನೀರನ್ನು ಬಳಸಿಕೊಂಡು ನಂತರ ಕ್ರಸ್ಟ್ ಗೇಟ್ ಆಳವಡಿಸುವ ಕಾರ್ಯ ಕೈಗೊಳ್ಳಲಾಗುವುದು ನೀರಾವರಿ ನಿಗಮದ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.
ಗುಜರಾತಿನ ಅಹಮದಾಬಾದ್ ಹಾರ್ಡ್ ವೇರ್ ಟೂಲ್ಸ್ ಮತ್ತು ಮಷಿನರಿ ಪ್ರೆಜೆಕ್ಟ್ ಕಂಪನಿಯ ಪ್ರತಿನಿಧಿಗಳು ಮಾತನಾಡಿ, ತಮ್ಮ ಸಂಸ್ಥೆಯಿಂದ ಪಶ್ಚಿಮ ಬಂಗಾಳದ ಪರಾಕ್ ಬ್ಯಾರೇಜ್ ಜಲಾಶಯದಲ್ಲಿ 124 ಗೇಟ್ ಗಳನ್ನು ಅಳವಡಿಸಿದೆ. ಇವುಗಳು ತುಂಗಭದ್ರಾ ಜಲಾಶಯದ ಗೇಟ್ ಗಳ ಗಾತ್ರದ್ದೆ ಆಗಿವೆ. ಇದಲ್ಲದೆ ಕೆ.ಆರ್.ಎಸ್. ಜಲಾಶಯ ಮತ್ತು ನಾರಾಯಣಪುರ ಡ್ಯಾಮಿನ ಗೇಟ್ ಗಳ ಅಳವಡಿಸುವ ಕಾರ್ಯಕ್ರಮ ಯಶಸ್ವಿಯಾಗಿ ಹಮ್ಮಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.












Click it and Unblock the Notifications