ತುಮಕೂರು-ಶಿವಮೊಗ್ಗ ಹೆದ್ದಾರಿ ಅಗಲೀಕರಣ 2016ರಲ್ಲಿ
ಬೆಂಗಳೂರು, ಮಾ. 24 : ತುಮಕೂರು-ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿ 206ರನ್ನು ನಾಲ್ಕು ಪಥದ ರಸ್ತೆಯಾಗಿ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು 2016ರಲ್ಲಿ ಆರಂಭಿಸಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಮಂಗಳವಾರ ವಿಧಾನಪರಿಷತ್ ಕಲಾಪದಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವರು, 2016ರಲ್ಲಿ ಕಾಮಗಾರಿ ಆರಂಭಿಸಿ 2018ಕ್ಕೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ, ಈ ಸಂಬಂಧ ಕೇಂದ್ರ ಭೂ ಸಾರಿಗೆ ಮಂತ್ರಾಲಯಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವರು ಹೇಳಿದರು. [ಬಿಡದಿಯಿಂದ ಮಂಡ್ಯದವರೆಗೆ ಬೈಪಾಸ್ : ಕೇಂದ್ರ ಒಪ್ಪಿಗೆ]

350 ಕೋಟಿ ವೆಚ್ಚ : ಈ ನಾಲ್ಕು ಪಥದ ರಸ್ತೆ ಕಾಮಗಾರಿಯನ್ನು 350 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುತ್ತದೆ. ವಿಶ್ವ ಬ್ಯಾಂಕ್ ಈ ಯೋಜನೆಗೆ ನೆರವು ನೀಡಲಿದೆ. ನಾಲ್ಕು ಪಥದ ರಸ್ತೆ ಪರಿವರ್ತನೆ ಸಂದರ್ಭದಲ್ಲಿ ಗುಬ್ಬಿ, ತಿಪಟೂರು, ಅರಸೀಕೆರೆ, ಕಡೂರು, ಬೀರೂರು, ತರೀಕೆರೆಗಳಲ್ಲಿ ಬೈಪಾಸ್ ನಿರ್ಮಾಣ ಮಾಡಲಾಗುತ್ತದೆ ಎಂದು ತಿಳಿಸಿದರು. [ಬೆಂಗಳೂರು-ಮೈಸೂರು ಆರು ಪಥದ ರಸ್ತೆ ವಿಳಂಬ?]
ಸುಮಾರು 370 ಕಿ.ಮೀ. ಉದ್ದದ ರಸ್ತೆಯನ್ನು ನಾಲ್ಕು ವಿಭಾಗಗಳಾಗಿ ಮಾಡಿಕೊಂಡು ಅಗಲೀಕರಣ ಕಾಮಗಾರಿ ಕೈಗೊಳ್ಳಲಾಗುತ್ತದೆ. ಅಗಲೀಕರಣದ ಸಂದರ್ಭದಲ್ಲಿ ಒಂದು ಮರ ಕಡಿದರೆ 10 ಸಸಿಗಳನ್ನು ನೆಡುವಂತೆ ನಿರ್ದೇಶನ ನೀಡಲಾಗಿದೆ ಎಂದರು.[ಮಂಗಳವಾರದ ಕಲಾಪದ ಮುಖ್ಯಾಂಶಗಳು]
2010ರಲ್ಲಿಯೇ ತುಮಕೂರು-ಶಿವಮೊಗ್ಗ ರಸ್ತೆಯನ್ನು ನಾಲ್ಕು ಪಥದ ರಸ್ತೆ ಮಾಡುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿತ್ತು. 2014 ರಲ್ಲಿ ಯುಪಿಎ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿತ್ತು. ಈ ಮಾರ್ಗವನ್ನು ನಾಲ್ಕು ಪಥದ ರಸ್ತೆ ಮಾಡುವುದರಿಂದ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಿ, ಆರ್ಥಿಕ ಚಟುವಟಿಕೆಗಳಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.












Click it and Unblock the Notifications