'ಕೆಂಪೇಗೌಡರು ಕಟ್ಟಿದ ನಗರ ಒಡೆಯಬೇಡಿ'
ಬೆಂಗಳೂರು, ಏ. 23 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯನ್ನು ವಿಭಜಿಸಬೇಕು ಎಂದು ಹಠ ಹಿಡಿದಿರುವ ಸರ್ಕಾರಕ್ಕೆ ವಿಧಾನಪರಿಷತ್ತಿನಲ್ಲಿ ಅಗ್ನಿಪರೀಕ್ಷೆ ಎದುರಾಗಿದೆ. ವಿಧಾನಸಭೆಯಲ್ಲಿ ವಿಧೇಯಕಕ್ಕೆ ಅಂಗೀಕಾರ ಪಡೆದುಕೊಂಡಿರುವ ಸರ್ಕಾರ ಪರಿಷತ್ ಒಪ್ಪಿಗೆ ಪಡೆಯಲು ಪ್ರಯತ್ನ ನಡೆಸುತ್ತಿದೆ.
ಸೋಮವಾರ ನಡೆದ ವಿಶೇಷ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ 'ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ-2015'ವನ್ನು ಮಂಡಿಸಿ, ಅಂಗೀಕಾರ ಪಡೆಯಲಾಗಿದೆ. ಆದರೆ, ವಿಧಾನಪರಿಷತ್ತಿನಲ್ಲಿ ಚರ್ಚೆ ನಡೆಯುತ್ತಿದ್ದರಿಂದ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಗಿತ್ತು. ಇಂದು ವಿಧೇಯಕದ ಮೇಲಿನ ಚರ್ಚೆ ಮುಂದುವರೆದಿದೆ. [ಸೋಮವಾರದ ಕಲಾಪದಲ್ಲಿ ಏನೇನಾಯ್ತು?]

* ವಿಧೇಯಕದ ಕುರಿತು ಚರ್ಚೆ ಮುಂದುವರೆದ ಕಾರಣ ಪರಿಷತ್ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.
* ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಜೆಡಿಎಸ್‌ನ ಬಸವರಾಜ ಹೊರಟ್ಟಿ ಅವರು ವಿಧೇಯಕವನ್ನು ಪರಿಶೀಲನಾ ಸಮಿತಿಗೆ ಒಪ್ಪಿಸಬೇಕೆಂದು ಮನವಿ ಮಾಡಿದರು. [ಪಾಲಿಕೆ ವಿಭಜನೆ ಹೇಗೆ?, ಇಲ್ಲಿದೆ ಮಾಹಿತಿ]
* ವಿಧೇಯಕಕ್ಕೆ ವಿಧಾನಪರಿಷತ್ತಿನ ಅನುಮೋದನೆ ಪಡೆಯಲು ಪ್ರಯತ್ನ ನಡೆಸಿರುವ ಸರ್ಕಾರ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಮನವೊಲಿಸಲು ಮುಂದಾಯಿತು. ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳೊಂದಿಗೆ ಸಭೆ ನಡೆಸಿದರು, ಸಭೆ ವಿಫಲವಾಯಿತು.
* ವಿಧೇಯಕದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿ.ಸೋಮಣ್ಣ ಅವರು 'ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ವಿಭಜನೆ ಮಾಡುವ ನಿರ್ಧಾರ ಕೈಬಿಡಿ, ಬೆಂಗಳೂರನ್ನು ಬೆಂಗಳೂರು ಆಗಿಯೇ ಉಳಿಸಿರಿ' ಎಂದು ಸರ್ಕಾರವನ್ನು ಒತ್ತಾಯಿಸಿದರು.
* ಪರಿಷತ್ತಿನಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, 'ಕರ್ನಾಟಕದ ಇತಿಹಾಸದಲ್ಲಿ ಯಾವುದೇ ವಿಧೇಯಕ ಸದನ ಪರಿಶೀಲನಾ ಸಮಿತಿಗೆ ಕಳುಹಿಸಲಾಗಿಲ್ಲ. ಆದ್ದರಿಂದ ಈ ವಿಧೇಯಕವನ್ನು ಒಪ್ಪಿಸುವುದು ಬೇಡ' ಎಂದು ಪ್ರತಿಪಕ್ಷಗಳಿಗೆ ಮನವಿ ಮಾಡಿದರು.
* 'ಬಿಬಿಎಂಪಿಯಲ್ಲಿ ಹಲವಾರು ಹಗರಣಗಳು ನಡೆದಿವೆ. ಪಾಲಿಕೆಯನ್ನು ವಿಭಜನೆ ಮಾಡುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಆಡಳಿತ ನಡೆಸಲು ಕಷ್ಟವಾಗುತ್ತದೆ. ಆದ್ದರಿಂದ ವಿಧೇಯಕವನ್ನು ಮಂಡಿಸಲಾಗಿದೆ' ಎಂದು ಸಿದ್ದರಾಮಯ್ಯ ಅವರು ಹೇಳಿದರು.
* ಒಂದು ವೇಳೆ ಗುರುವಾರದ ಕಲಾಪದಲ್ಲಿ ವಿಧೇಯಕದ ಮೇಲಿನ ಚರ್ಚೆಗಳು ಪೂರ್ಣಗೊಳ್ಳದಿದ್ದರೆ ಕಲಾಪವನ್ನು ಸೋಮವಾರಕ್ಕೆ ಮುಂದೂಡುವ ಸಾಧ್ಯತೆ ಇದೆ.
* ಮತ್ತೊಂದು ಕಡೆ ಬಿಬಿಎಂಪಿ ಚುನಾವಣೆಯನ್ನು ಮೇ 30ರೊಳಗೆ ನಡೆಸಬೇಕೆ?, ಬೇಡವೆ? ಎಂಬ ಬಗ್ಗೆ ಹೈಕೋರ್ಟ್ ಶುಕ್ರವಾರ ತೀರ್ಪು ನೀಡಲಿದೆ.
ಹಿಂದಿನ ಸುದ್ದಿ : ವಿಧಾನಪರಿಷತ್ತಿನಲ್ಲಿ ಸರ್ಕಾರಕ್ಕೆ ಸಂಖ್ಯಾ ಬಲದ ಕೊರತೆ ಇದೆ. ಆದ್ದರಿಂದ ವಿಧಾನಸಭೆಯಂತೆ ಪರಿಷತ್ತಿನಲ್ಲಿ ಸುಲಭವಾಗಿ ವಿಧೇಯಕಕ್ಕೆ ಅಂಗೀಕಾರ ಪಡೆಯುವುದು ಸಾಧ್ಯವಿಲ್ಲ. ಅಲ್ಲದೇ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ವಿಧೇಯಕವನ್ನು ಸದನ ಸಮಿತಿ ಪರಿಶೀಲನೆಗೆ ಒಪ್ಪಿಸಬೇಕು ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರಿಗೆ ಮನವಿ ಮಾಡಿವೆ.
ಪರಿಷತ್ ಬಲಾಬಲ : ವಿಧಾನಪರಿಷತ್ ಸದಸ್ಯರ ಸಂಖ್ಯೆ ಒಟ್ಟು 75. ಕಾಂಗ್ರೆಸ್ 28, ಬಿಜೆಪಿ 30, ಜೆಡಿಎಸ್ 12, ಪಕ್ಷೇತರ 4, ಸಭಾಧ್ಯಕ್ಷರು 1. ವಿಧೇಯಕವನ್ನು ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ವಿರೋಧಿಸುತ್ತಿದ್ದು, ಎರಡೂ ಪಕ್ಷಗಳು ಕೈ ಜೋಡಿಸಿದರೆ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎದುರಾಗಲಿದೆ.












Click it and Unblock the Notifications