ರಾಜ್ಯ ರಾಜಕೀಯಕ್ಕೆ ಕುಮಾರಸ್ವಾಮಿ ಎಂಟ್ರಿಗೆ ಮುಹೂರ್ತ ಫಿಕ್ಸ್; ಕ್ಷೇತ್ರವೂ ಫೈನಲ್, ಎಚ್ಡಿಕೆ ಅಖಾಡ ಯಾವುದು?
ಬೆಂಗಳೂರು: 2028ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಎರಡು ವರ್ಷ ಇರುವಾಗಲೇ ಕರ್ನಾಟಕ ರಾಜಕೀಯದಲ್ಲಿ ಚುನಾವಣಾ ಕಣ ರಂಗೇರಿದೆ. 2028 ರ ಚುನಾವಣೆಗೆ ಈಗಲೇ ಚುನಾವಣಾ ಕಾವು ಹೆಚ್ಚಾಗಲು ಕಾರಣ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರ ಆ ಮಾತು. ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಎಚ್.ಡಿ. ಕುಮಾರಸ್ವಾಮಿ ಅಂದ್ರೆ ಅದೊಂದು ಸಂಚಲನ.
ಈ ಹಿಂದೆ 2023 ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂಬ ಕನಸನ್ನ ಹೆಚ್ ಡಿ ಕುಮಾರಸ್ವಾಮಿ ಕಂಡಿದ್ದರು. ಆದರೆ, ರಾಜ್ಯದ ಜನರ ಲೆಕ್ಕಾಚಾರವೇ ಬೇರೆಯಾಗಿತ್ತು. 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದ ಮೂಲಕ ರಾಜ್ಯದಲ್ಲಿ ಸರ್ಕಾರ ರಚಿಸಿದೆ. ಇದೀಗ ಮುಂಬರುವ ಚುನಾವಣೆಯಲ್ಲಿ ಕಣಕ್ಕಿಳಿಯುವ ಮೂಲಕ ಮತ್ತೆ ಮುಖ್ಯಮಂತ್ರಿಯಾಗಲು ದಳಪತಿಗಳು ಭರ್ಜರಿ ತಯಾರಿ ನಡೆಸಿದ್ದಾರೆ.

ಸದ್ಯ ದೆಹಲಿ ರಾಜಕಾರಣದಲ್ಲಿ ಸಕ್ರಿಯರಾಗಿದ್ದೇ ರಾಜ್ಯ ರಾಜಕಾರಣದ ಬಗ್ಗೆಯೂ ಕಣ್ಣಾಡಿಸುತ್ತಿರುವ ಹೆಚ್ ಡಿ ಕುಮಾರಸ್ವಾಮಿಯವರು ಸಂಕ್ರಾಂತಿ ಹಬ್ಬದಂದೇ ಸೂರ್ಯ ಪಥಬದಲಿಸುವಂತೆ ಕುಮಾರಸ್ವಾಮಿ ಈಗ ಪಥಬದಲಿಸುವ ಸುಳಿವು ಕೊಟ್ಟಿದ್ದಾರೆ. ಮತ್ತೆ ರಾಜ್ಯ ರಾಜಕಾರಣಕ್ಕೆ ರೀ-ಎಂಟ್ರಿ' ಕೊಡುವ ಸ್ಪಷ್ಟ ಮುನ್ಸೂಚನೆ ನೀಡಿದ್ದಾರೆ. ನಾನು ಎಲ್ಲೇ ಹೋದರು ಸುಮ್ಮನೆ ಕೂರಲ್ಲ, ರಾಜ್ಯದ ಜನ ತೀರ್ಮಾನ ಮಾಡಿದರೆ ಮತ್ತೆ ಇಲ್ಲೇ ಇರುತ್ತೇನೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಇತ್ತ ಕಾಂಗ್ರೆಸ್ ಅಧಿಕಾರಕೆ ಬಂದ ದಿನದಿಂದ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ನಡುವಿನ ಜಟಾಪಟಿಗೆ ಬ್ರೇಕ್ ಬಿದ್ದಿಲ್ಲ. ಕಾಂಗ್ರೆಸ್‌ನಲ್ಲಿ ಕುರ್ಚಿ ಕದನ ಹೊತ್ತಿಕೊಂಡಿರುವ ಈ ಹೊತ್ತಲ್ಲಿ ಕುಮಾರಸ್ವಾಮಿ ಆಡಿದ ಮಾತು ಭಾರೀ ಸಂಚಲನ ಮೂಡಿಸಿದೆ. ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನ ಉಳಿಸಿಕೊಳ್ಳುವುದು ದಳಪತಿಗಳಿಗೆ ಅನಿವಾರ್ಯವಾಗಿದೆ. ಇತ್ತ ಮಗ ನಿಖಿಲ್ ಕುಮಾರಸ್ವಾಮಿಗೆ ಜೆಡಿಎಸ್ ಸಾರಥ್ಯ ವಹಿಸಬೇಕು ಎಂದು ಅಂದುಕೊಂಡರು ಕೂಡ ಸೂಕ್ತ ಘಳಿಗೆ ಕೂಡಿ ಬರ್ತಿಲ್ಲ. ಅಲ್ಲದೇ ಹಿರಿಯ ನಾಯಕರು ನಿಖಿಲ್‌ಗೆ ಅಡ್ಡಲಾಗಿ ನಿಂತಿದ್ದಾರೆ, ಹೀಗಾಗಿ ಮತ್ತೆ ರಾಜ್ಯಕ್ಕೆ ಮರಳುವ ಅನಿವಾರ್ಯತೆ ಕುಮಾರಸ್ವಾಮಿಗೂ ಬಂದೊದಗಿದೆ.
ಕುಮಾರಸ್ವಾಮಿ ಹೇಳಿದ್ದೇನು?
ರಾಜಕೀಯದಿಂದ ದೂರ ಸರಿಯುವ ಸೂಚನೆ ನೀಡಿದ್ದ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ, ಮತ್ತೆ ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ಮುಂದುವರಿಯುವ ಸ್ಪಷ್ಟ ಸಂದೇಶ ನೀಡಿದ್ದಾರೆ. ಅದರಲ್ಲೂ ರಾಮನಗರವೇ ನನ್ನ ಅಂತಿಮ ರಾಜಕೀಯ ನೆಲೆ ಎಂದು ಘೋಷಿಸುವ ಮೂಲಕ ಮುಂದಿನ ಚುನಾವಣಾ ರಾಜಕೀಯಕ್ಕೆ ಸ್ಪಷ್ಟ ದಿಕ್ಕು ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ಅನಿವಾರ್ಯವಾಗಿ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಮಂಡ್ಯಕ್ಕೆ ಹೋಗಬೇಕಾಯಿತು. ಆದರೆ ನನಗೆ ರಾಜಕೀಯ ಜನ್ಮ ನೀಡಿದ್ದು ರಾಮನಗರ. ಇದೇ ನನ್ನ ಅಂತಿಮ ಆಯ್ಕೆ. ಇಲ್ಲಿಯೇ ನನ್ನ ಉಳಿದ ರಾಜಕೀಯ ಜೀವನ ಕಳೆಯುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇನ್ನೂ ಕಳೆದ ವಿಧಾನಸಭೆ ಚುನಾವಣೆ ನಂತರ ರಾಮನಗರ ಕ್ಷೇತ್ರದಿಂದ ದೂರವೇ ಉಳಿದಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ರಾಜಕಾರಣದ ತಮ್ಮ ಎರಡೇ ಇನ್ನಿಂಗ್ಸ್‌ಅನ್ನು ರಾಮನಗರದಿಂದಲೇ ಆರಂಭಿಸಲು ಸಿದ್ದತೆ ನಡೆಸಿದ್ದಾರೆ. ಯುಗಾದಿ ನಂತರ ರಾಜ್ಯ ರಾಜಕಾರಣಕ್ಕೆ ಅಧಿಕೃತವಾಗಿ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡಲಿದ್ದಾರೆ ಎಂದು ಜೆಡಿಎಸ್ ಪಡಸಾಲೆಯಲ್ಲಿ ವ್ಯಾಪಕ ಚರ್ಚೆ ಆಗುತ್ತಿದ್ದು, ಎಚ್.ಡಿ.ಕುಮಾರಸ್ವಾಮಿ ರಾಮನಗರದಿಂದಲೇ ಕಣಕ್ಕೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಸಚಿವರಾಗಿರುವ ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ನಿರಂತರವಾಗಿ ಪ್ರಹಾರಕ್ಕೆ ಇಳಿದಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿಯನ್ನ ನಡೆಸಿದ್ದಾರೆ. ಇನ್ನೂ 2028ಕ್ಕೆ ರಾಜ್ಯದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ತರಲೇಬೇಕು ಎನ್ನುವ ಗುರಿಯನ್ನೂ ಸಹ ಕೇಂದ್ರ ನಾಯಕರು ನೀಡಿದ್ದಾರೆ ಎಂಬ ಮಾತುಗಳು ಜೆಡಿಎಸ್ ಪಾಳಯದಲ್ಲಿ ಚರ್ಚೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧದ ಹೋರಾಟಕ್ಕೆ ಅಧಿಕೃತವಾಗಿ ಯುಗಾದಿ ನಂತರ ಕುಮಾರಸ್ವಾಮಿ ರಾಜ್ಯ ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸ್ಪರ್ಧೆಗೆ ರಾಮನಗರ ಆಯ್ಕೆ ಮಾಡಿಕೊಂಡಿದ್ಯಾಕೆ?
ಬಹುತೇಕವಾಗಿ 2028 ರ ವಿಧಾನಸಭಾ ಚುನಾವಣೆಗೆ ರಾಮನಗರದಿಂದ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ರಾಮನಗರದ ಎಚ್.ಡಿ.ದೇವೇಗೌಡರ ಕುಟುಂಬದ ಪಾಲಿಗೆ ಸುರಕ್ಷಿತ ಕ್ಷೇತ್ರ. 1994ರಿಂದಲೂ ಕ್ಷೇತ್ರ ದೇವೇಗೌಡರ ಕುಟುಂಬವನ್ನು ಕಾಪಾಡಿಕೊಂಡು ಬರುತ್ತಲೇ ಇತ್ತು. ಇತ್ತ ಹೆಚ್ ಡಿ ಕುಮಾರಸ್ವಾಮಿ ಹಾಗೂ ಅನಿತಾ ಅವರ ಕೆಲವು ತಪ್ಪು ನಿರ್ಧಾರಗಳಿಂದಾಗಿ 2023ರ ವಿಧಾನಸಭೆ ಚುನಾವಣೆಯಲ್ಲಿ ನಿಖಿಲ್ ಸೋಲೊಪ್ಪಿಕೊಳ್ಳುವಂತೆ ಮಾಡಿತು.
ಮೊದಲಿನಿಂದಲೂ ರಾಮನಗರ ವಿಧಾನಸಭಾ ಕ್ಷೇತ್ರ ಜೆಡಿಎಸ್ ಭದ್ರಕೋಟೆಯಾಗಿತ್ತು. ಆದರೆ, ದಿನ ಕಳೆದಂತೆ ಈ ಕ್ಷೇತ್ರದಲ್ಲಿ ಜೆಡಿಎಸ್ ತನ್ನ ಪ್ರಬಲ್ಯವನ್ನ ಕಳೆದುಕೊಂಡರು. ಇದರ ಹೊರತಾಗಿಯೂ ಬಲಿಷ್ಠವಾದ ಕಾರ್ಯಕರ್ತರ ಪಡೆ ಜೆಡಿಎಸ್‌ಗೆ ಶ್ರೀರಕ್ಷೆ ಆಗಿರುವ ಹಿನ್ನೆಲೆಯಲ್ಲಿ ರಾಮನಗರವೇ ಇಂದಿಗೂ ದೇವೇಗೌಡರ ಕುಟುಂಬಕ್ಕೆ ಸುರಕ್ಷಿತ ಕ್ಷೇತ್ರವಾಗಿದೆ. ಇಲ್ಲಿ ಸ್ಪರ್ಧೆ ಮಾಡಿದರೆ ತಮ್ಮ ಗೆಲುವು ಸಲೀಲು ಎನ್ನುವ ಲೆಕ್ಕಾಚಾರವನ್ನ ದಳಪತಿಗಳಿ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.












Click it and Unblock the Notifications