Lok Sabha Elections 2024: ಸದಾನಂದಗೌಡ ಬಳಿಕ ಮತ್ತೊಬ್ಬ ಬಿಜೆಪಿ ಸಂಸದರಿಂದ ಅಸಮಾಧಾನ
ಕೊಪ್ಪಳ,ಜೂನ್ 08: 2024 ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪುವ ಭೀತಿ ಶುರುವಾಗಿದದೆ. ಈಗಾಗಲೇ ಹಾಲಿ 13 ಜನ ಸಂಸದರಿಗೆ ಟಿಕೆಟ್ ಇಲ್ಲ ಎಂಬ ಸುದ್ದಿ ಮಾಧ್ಯಮಗಳಲ್ಲಿ ವರದಿಯಾದ ಹಿನ್ನಲೆ ಹಾಕಿ ಸಂಸದರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಡಿ ವಿ ಸದಾನಂದ ಗೌಡ ಟಿಕೆಟ್ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದು, ಇದೀಗ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ತಕ್ಷಣವೇ ಮಧ್ಯಪ್ರವೇಶ ಮಾಡಿ, ಈ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದು ಸಂಸದ ಸಂಗಣ್ಣ ಕರಡಿ ಆಗ್ರಹಿಸಿದ್ದರು.

ಹೌದು, ಈ ಕುರಿತು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈಗಲೂ ಲೋಕಸಭಾ ಚುನಾವಣೆಗೆ ವರ್ಷ ಇರುವಾಗಲೇ 13 ಸಂಸದರಿಗೆ ಟಿಕೆಟ್ ಕೈ ತಪ್ಪುತ್ತದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುರಿತು ಪಕ್ಷದ ಹೈಕಮಾಂಡ್ ಸ್ಪಷ್ಟನೆ ನೀಡಬೇಕು.
ಇಂತಹ ಗೊಂದಲಗಳಿಂದ ಸಮಸ್ಯೆಯಾಗುತ್ತದೆ. ಹೀಗಾಗಿ, ಲೋಕಸಭಾ ಚುನಾವಣೆಯಲ್ಲಿ ಯಾರಿಗಾದರೂ ಟಿಕೆಟ್ ಕೊಡಿ. ಆದರೆ, 6 ತಿಂಗಳ ಮೊದಲೇ ಘೋಷಣೆ ಮಾಡಿ. ಇದರಿಂದ ಚುನಾವಣೆಗೆ ತಯಾರಿಯನ್ನಾದರೂ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದರು.
ಇನ್ನೂ ನಾನು ನನಗೆ ಟಿಕೆಟ್ ಕೊಡಿ ಎಂದು ಕೇಳುವುದಿಲ್ಲ. ಆದರೆ, ಬೇಗನೇ ತೀರ್ಮಾನ ಮಾಡಬೇಕು ಮತ್ತು ಊಹಾಪೋಹಗಳಿಗೆ ತೆರೆ ಎಳೆಯಬೇಕು ಎಂದು ಆಗ್ರಹಿಸಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಪ್ರಮುಖ ಕಾರಣವೇ ಟಿಕೆಟ್ ಹಂಚಿಕೆಯಲ್ಲಾದ ಗೊಂದಲಗಳು ಹೀಗಾಗಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಾದರೂ 6 ತಿಂಗಳ ಮೊದಲೇ ಟಿಕೆಟ್ ಘೋಷಣೆ ಮಾಡಿ ಎಂದು ಆಗ್ರಹಿಸಿದ್ದರು.
ವಿಧಾನಸಭಾ ಚುನಾವಣೆಯಲ್ಲಿ ಸೋಲಲು ಹಲವು ಕಾರಣಗಳಿವೆ. ಯಡಿಯೂರಪ್ಪ ಅವರನ್ನು ಅವಮಾನಿಸಿದ್ದು, ಲಕ್ಷ್ಮಣ ಸವದಿಗೆ ಟಿಕೆಟ್ ತಪ್ಪಿಸಿದ್ದು, ಜಗದೀಶ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಣೆ ಮಾಡಿದ್ದು, ಈಶ್ವರಪ್ಪ ಅವರನ್ನು ಅವಮಾನಿಸಿದ್ದು ಸೋಲಿಗೆ ಇತರ ಕಾರಣಗಳು ಎಂದು ಹಲವರು ತಮ್ಮ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಪ್ರಮುಖ ಕಾರಣವೇ ಟಿಕೆಟ್ ಹಂಚಿಕೆಯಲ್ಲಾದ ಗೊಂದಲ. ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಸೇರಿದಂತೆ ವಿವಿಧ ಕ್ಷೇತ್ರಗಳ ಟಿಕೆಟ್ ಹಂಚಿಕೆ ಕುರಿತು ಸಂಸದನಾದ ನನಗೇ ಏನೂ ಗೊತ್ತಿರಲಿಲ್ಲ. ನನ್ನ ಸೊಸೆಗೆ ಟಿಕೆಟ್ ಘೋಷಣೆ ಮಾಡಿದ ಮೇಲೆಯೇ ನನಗೂ ಗೊತ್ತಾಗಿದೆ.
ಕ್ಷೇತ್ರದಲ್ಲಿ ಹಲವಾರು ಕಾರ್ಯಕರ್ತರು ಪಕ್ಷ ಸಂಘಟನೆ ಮಾಡಿದವರಿದ್ದರು. ಮಹಾಂತೇಶ ಮೈನಳ್ಳಿ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದರೂ ನಾನು ಗೆಲ್ಲಿಸಿಕೊಂಡು ಬರುತ್ತಿದ್ದೆ. ಆದರೆ, ಕೊನೆ ಗಳಿಗೆಯಲ್ಲಿ ತೀರ್ಮಾನ ಮಾಡಿದ್ದರಿಂದ ತೀವ್ರ ಸಮಸ್ಯೆಯಾಯಿತು ಎಂದರು.












Click it and Unblock the Notifications