ಇಂಜಿನಿಯರಿಂಗ್‌ಗೆ ಕುಸಿದ ಬೇಡಿಕೆ: ಸರ್ಕಾರಿ, ಖಾಸಗಿ ಕಾಲೇಜುಗಳಲ್ಲಿ ಸಾವಿರಾರು ಸೀಟು ಖಾಲಿ
ಬೆಂಗಳೂರು, ಅಕ್ಟೋಬರ್ 13: ಲಕ್ಷ ಲಕ್ಷ ರೂಪಾಯಿ ನೀಡಿದರೂ ಸಹ ಕರ್ನಾಟಕದಲ್ಲಿ ಇಂಜಿನಿಯರಿಂಗ್ ಸೀಟುಗಳು ಸಿಗುತ್ತಿರಲಿಲ್ಲ. ಆದರೆ ಈಗ ರಾಜ್ಯದಲ್ಲಿ ಇಂಜಿನಿಯರಿಂಗ್‌ಗೆ ಬೇಡಿಕೆ ಕುಸಿದಿದೆ. ಸರ್ಕಾರಿ ಮಾತ್ರವಲ್ಲ ಖಾಸಗಿ ಕಾಲೇಜುಗಳಲ್ಲಿಯೂ ಸಹ ಸಾವಿರಾರು ಸೀಟುಗಳು ಹಂಚಿಕೆಯಾಗದೇ ಉಳಿದಿವೆ. ಸಿವಿಲ್, ಎಲೆಕ್ಟ್ರಾನಿಕ್ಸ್ ಮತ್ತು ಮೆಕಾನಿಕಲ್ ವಿಭಾಗದ ಸೀಟುಗಳು ಅತಿ ಹೆಚ್ಚು ಖಾಲಿ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ವರ್ಷದಲ್ಲಿ ಸರ್ಕಾರಿ ಮತ್ತು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟು ಹಂಚಿಕೆ ಮುಕ್ತಾಯವಾಗಿದೆ. ಖಾಸಗಿ ಕಾಲೇಜುಗಳ ಶೇ 30, ಸರ್ಕಾರಿ ಕಾಲೇಜುಗಳ ಶೇ 25ರಷ್ಟು ಸೀಟುಗಳು ಹಂಚಿಕೆಯಾಗದೇ ಹಾಗೆ ಉಳಿದಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ಕಾಮೆಡ್-ಕೆ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ.

ಕಂಪ್ಯೂಟರ್ ಸೈನ್ಸ್ ವಿಷಯದ ಸೀಟುಗಳಿಗೆ ಕರ್ನಾಟಕದಲ್ಲಿ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಪ್ರಸಕ್ತ ವರ್ಷ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಹಂಚಿಕೆಯಾಗದೇ ಉಳಿದ ಸೀಟುಗಳಲ್ಲಿ ಸಿವಿಲ್, ಎಲೆಕ್ಟ್ರಾನಿಕ್ಸ್ ಹಾಗೂ ಮೆಕಾನಿಕಲ್ ವಿಭಾಗ ಮೊದಲ ಮೂರು ಸ್ಥಾನದಲ್ಲಿದೆ. ಕಂಪ್ಯೂಟರ್ ಸೈನ್ಸ್ ಮತ್ತು ಎಲೆಕ್ಟ್ರಿಕಲ್ ವಿಭಾಗದ ಸೀಟುಗಳಿಗೆ ಬೇಡಿಕೆ ಹೆಚ್ಚಾಗಿದೆ.
ಎಷ್ಟು ಸೀಟುಗಳು ಬಾಕಿ ಇದೆ?: ಕರ್ನಾಟಕ ಪರೀಕ್ಷಾ ಪ್ರಾಧಿಕಾರ 2ನೇ ಸುತ್ತಿನ ಸೀಟು ಹಂಚಿಕೆ ಮತ್ತು ಕಾಮೆಡ್-ಕೆ ಮೂರನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಿದೆ. ಆದರೆ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಿದ ಪರಿಣಾಮ ಕಳೆದ ವರ್ಷಕ್ಕಿಂತ ಅಧಿಕ ಸೀಟುಗಳು ಈ ಬಾರಿ ಬಾಕಿ ಉಳಿದಿದೆ. ಅಚ್ಚರಿಯ ಸಂಗತಿ ಎಂದರೆ ಕೆಲವು ಖಾಸಗಿ ಕಾಲೇಜುಗಳ ಕಂಪ್ಯೂಟರ್ ಸೈನ್ಸ್ ವಿಭಾಗದ ಸೀಟುಗಳು ಹಂಚಿಕೆಯಾಗಿಲ್ಲ.
2024ರಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಸೈನ್ಸ್‌ನ 18,974 ಸೀಟು ಲಭ್ಯವಿತ್ತು. ಇವುಗಳಲ್ಲಿ 18,157 ಹಂಚಿಕೆಯಾಗಿದೆ. 637 ಸೀಟುಗಳು ಬಾಕಿ ಇದೆ. ಸಿವಿಲ್‌ನಲ್ಲಿ 5,723 ಸೀಟು ಲಭ್ಯವಿತ್ತು. 2,883 ಸೀಟು ಹಂಚಿಕೆಯಾಗಿದೆ. 2840 ಸೀಟುಗಳು ಬಾಕಿ ಇದೆ.
ಮೆಕಾನಿಕಲ್ ವಿಭಾಗದಲ್ಲಿ 5,977 ಸೀಟು ಲಭ್ಯವಿತ್ತು. 2,783 ಸೀಟುಗಳು ಹಂಚಿಕೆಯಾಗಿದೆ. 3,194 ಸೀಟುಗಳು ಬಾಕಿ ಇದೆ. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ 11,361 ಸೀಟುಗಳು ಲಭ್ಯವಿತ್ತು. 9,841 ಸೀಟು ಹಂಚಿಕೆಯಾಗಿದೆ. ಬಾಕಿ ಉಳಿದಿರುವ ಸೀಟು 1,520.
ಇನ್ನು ಕಾಮೆಡ್-ಕೆ ಮಾಹಿತಿ ಪ್ರಕಾರ 2022ರಲ್ಲಿ ಬಾಕಿ ಉಳಿದಿದ್ದ ಸೀಟು 22,837. 2023ರಲ್ಲಿ 14,354 ಸೀಟುಗಳು ಬಾಕಿ ಇದೆ. ಸೀಟುಗಳು ಬಾಕಿ ಇರುವ ಕುರಿತು ಮಾತನಾಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ, "ಕಂಪ್ಯೂಟರ್ ಸೈನ್ಸ್‌ಗೆ ಅಧಿಕ ಬೇಡಿಕೆ ಇದೆ. ಸಿವಿಲ್, ಮೆಕಾನಿಕಲ್, ಎಲೆಕ್ಟ್ರಾನಿಕ್ಸ್ ವಿಷಯಗಳಿಗೆ ಬೇಡಿಕೆ ಕುಸಿಯುತ್ತಿದೆ. ಮುಂದಿನ ವರ್ಷ ಇನ್ನಷ್ಟು ಬೇಡಿಕೆ ಕುಸಿಯಬಹುದು" ಎಂದು ಹೇಳಿದರು.
ಶುಲ್ಕ ಸೇರಿದಂತೆ ವಿವಿಧ ಕಾರಣಕ್ಕೆ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳು ಬಾಕಿ ಉಳಿದಿರಬಹುದು. ಆದರೆ ಸರ್ಕಾರಿ ಕಾಲೇಜುಗಳಲ್ಲಿಯೂ 13,653 ಸೀಟುಗಳು ಬಾಕಿ ಉಳಿದಿರುವುದು ಏಕೆ? ಎಂಬುದು ಪ್ರಶ್ನೆಯಾಗಿದೆ. ಬೆಂಗಳೂರು ನಗರದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸೀಟುಗಳು ಬಾಕಿ ಉಳಿಯುತ್ತಿರಲಿಲ್ಲ. ಇದೇ ಮೊದಲ ಬಾರಿಗೆ ನಗರದಲ್ಲಿಯೂ ಸೀಟುಗಳು ಖಾಲಿ ಇವೆ ಎಂದು ಕಾಮೆಡ್-ಕೆ ಅಧಿಕಾರಿಯೊಬ್ಬರು ಹೇಳಿದ್ದಾರೆ.












Click it and Unblock the Notifications