ಕಾರವಾರದಲ್ಲಿ ಆರ್ಭಟಿಸಿದ ಮಳೆ: ಜನಜೀವನ ಅಸ್ತವ್ಯಸ್ತ

By: ಕಾರವಾರ ಪ್ರತಿನಿಧಿ
Subscribe to Oneindia Kannada

ಕಾರವಾರ, ಜುಲೈ 20: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ಬಹುತೇಕ ರಸ್ತೆಗಳಲ್ಲಿ ಸಂಚಾರ ದುಸ್ತರವಾಗಿದೆ. ಅಲ್ಲಲ್ಲಿ ಸೃಷ್ಟಿಯಾಗಿರುವ ಹೊಂಡಗಳು ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿವೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಭಾರಿ ಗಾಳಿ ಮಳೆಗೆ ಯಲ್ಲಾಪುರ ತಾಲ್ಲೂಕಿನ ಸಾವಗದ್ದೆ ಸಮೀಪದ ಶೇಡಿಗಾಳಿ ಬಳಿ ಕೈಗಾ ಗ್ರಿಡ್ ಲೈನ್ ತಂತಿ ಕಡಿದು ಬಿದ್ದಿತು. ಕೈಗಾದಿಂದ ದಾವಣಗೆರೆಗೆ ವಿದ್ಯುತ್ ಪೂರೈಸುವ ಲೈನ್ ಇದಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ. ಕುಮಟಾ ತಾಲ್ಲೂಕಿನ ಅಘನಾಶಿನಿ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ. ಕಾರವಾರದ ಕೆಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನರು ತೊಂದರೆ ಉಂಟಾಗಿದೆ. ಜೊಯಿಡಾ ಚಾಪೋಲಿ ಬಳಿಯ ರಾಮನಗರ ರಸ್ತೆಯಲ್ಲಿಯೂ ಕೂಡ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಜತೆಗೆ ಮಳೆಯಿಂದಾಗಿ ಸಮೀಪದ ಪಾಂಡ್ರಿ ನದಿ ಉಕ್ಕಿ ಹರಿಯುತ್ತಿದೆ.

ರಸ್ತೆರಸ್ತೆಯಲ್ಲೂ ನೀರೋನೀರು, ಕಣ್ತುಂಬಿಕೊಳ್ಳಿ ಮಳೆಯ ದರ್ಬಾರು

The heay rain has caused heavy damage in Karwar district

ನದಿಯಂಚಿನ ಚಾಂದೆವಾಡಿ ಗ್ರಾಮದ ಸೇತುವೆ ನೀರಿನಲ್ಲಿ ಮುಳುಗಿದ್ದು, ಶಾಲಾ ಮಕ್ಕಳು ನದಿ ದಾಟುವುದು ಕಷ್ಟಸಾಧ್ಯವಾಗಿದೆ. ಅಸು ಗ್ರಾಮ ಪಂಚಾಯ್ತಿಯ ಸದಸ್ಯ ರಮೇಶ ಗಾವಡ ಅವರು ದಾಂಡೇಲಿಯಿಂದ ರ್ಯಾಫ್ಟ್ ತರಿಸಿದ್ದು, ಮಕ್ಕಳು ಶಾಲೆಗೆ ಹೋಗಲು ಅನುವು ಮಾಡಿಕೊಟ್ಟಿದ್ದಾರೆ. ಶಿರಸಿಯಲ್ಲಿ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದು 24 ಕಂಬಗಳು ನೆಲಕ್ಕುರುಳಿ ಹೆಸ್ಕಾಂಗೆ ಅಂದಾಜು 3 ಲಕ್ಷ ಹಾನಿ ಸಂಭವಿಸಿದೆ. ಬೀಳೂರು, ಹುಡೇಲ ಕೊಪ್ಪ, ಹಳ್ಳಿಕೊಪ್ಪದಲ್ಲಿ ತಲಾ ಎರಡು, ಸೋಂದಾದಲ್ಲಿ ಆರು, ಭಾಶಿಯಲ್ಲಿ ಮೂರು, ಕುಪ್ಪಳ್ಳಿಯಲ್ಲಿ ಒಂದು ಕಂಬಮುರಿದಿದೆ.

ಅಂಕೋಲಾ ತಾಲ್ಲೂಕಿನಲ್ಲಿ ಹರಿಯುವ ಗಂಗಾವಳಿ ನದಿ ತುಂಬಿ ತೀರದ ವಾಸಿಗಳು ಹಾಗೂ ಕೇಣಿ ಗ್ರಾಮದ ಜನರು ಆತಂಕಕ್ಕೊಳಗಾಗಿದ್ದಾರೆ. ಭಾವಿಕೇರಿ ಗ್ರಾಮದ ಚಂದ್ರಭಾಗಿ ಎಸ್. ನಾಯಕ ಎನ್ನುವವರ ಮನೆಯ ಮೇಲೆ ಅಡಿಕೆ ಮರ ಬಿದ್ದ ಪರಿಣಾಮ ಚಾವಣಿಯ ರೀಪು, ಪಕಾಸಿ, ಹೆಂಚು ಸೇರಿದಂತೆ ವಿವಿಧ ಗೃಹೋಪಯೋಗಿ ವಸ್ತುಗಳು ಹಾನಿಗೊಳಗಾಗಿವೆ. 50 ಸಾವಿರ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.

ಅವರ್ಸಾ ದಂಡೆಭಾಗ ಗ್ರಾಮದಲ್ಲಿ ಗಾಳಿಯ ರಭಸಕ್ಕೆ ಮನೆಯ ಚಾವಣಿ, ಭಾವಿಕೇರಿಯ ಕಾನಬೀರ ಕೊಪ್ಪದ ಅಂಗನವಾಡಿ ಕೇಂದ್ರ ಚಾವಣಿಯ ತಗಡು ಹಾರಿಹೋಗಿದೆ.
ಗುಡ್ಡ ಕುಸಿದ ಪರಿಣಾಮ ಸಿದ್ದಾಪುರ ತಾಲ್ಲೂಕಿನ ಹೆಗ್ಗನೂರು ಗ್ರಾಮದ ಹರ್ತೆಬೈಲಿನ ವೆಂಕಟ್ರಮಣ ಗಣಪಯ್ಯ ಹೆಗಡೆ ಅವರ ಕೊಟ್ಟಿಗೆಮನೆಗೆ ಹಾನಿ ಸಂಭವಿಸಿದ್ದು, 75 ಸಾವಿರ ನಷ್ಟ ಅಂದಾಜು ಮಾಡಲಾಗಿದೆ.

The heay rain has caused heavy damage in Karwar district
Bengaluru is Cool With The Heavy Rain | Oneindia Kannada

ಸಿದ್ದಾಪುರ ಗೋಳಿಮಕ್ಕಿ ರಸ್ತೆಯಲ್ಲಿರುವ ಮಾಣಿ ಹೊಳೆ ಸೇತುವೆಗೆ ತಗುಲುವ ರೀತಿಯಲ್ಲಿ ನೀರು ಹರಿಯತೊಡಗಿದೆ. ಕಳೆದ ಮೂರು ವರ್ಷಗಳ ಹಿಂದೆ ಶಿಥಿಲವಾಗಿದ್ದ ಮಾಣಿ ಹೊಳೆ ಸೇತುವೆಯ ಮೇಲೆ ಸಂಚಾರವನ್ನು ನಿಷೇಧಿಸಲಾಗಿದೆ. ಮಳೆಯಿಂದಾಗಿ ಶಿಥಿಲ ಸೇತುವೆ ಕೊಚ್ಚಿ ಹೋಗುವ ಅಪಾಯ ಎದುರಾಗಿದೆ. ಕುಮಟಾದ ಹರಕಡೆಯಲ್ಲಿ ಇಂದು ಬೆಳಿಗ್ಗೆ ಗುಡ್ಡ ಕುಸಿತ, ಹೆಗಡೆಯಲ್ಲಿ ರಸ್ತೆಯ ಮೇಲೆ ಮರ ಉರುಳಿ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The heay rain has caused heavy damage in Karwar district. Agriculture land was submerged creating the fear of crop damage, roads also damaged.
Please Wait while comments are loading...