ನೆರೆ ರಾಜ್ಯಗಳ ಚುನಾವಣೆ ಫಲಿತಾಂಶ ಎಎಪಿಗೆ ಗೆಲುವಿನ ಸಂದೇಶ: ಪೃಥ್ವಿ ರೆಡ್ಡಿ
ಬೆಂಗಳೂರು, ಡಿಸೆಂಬರ್ 09: ಕೇವಲ ಹತ್ತು ವರ್ಷಗಳಲ್ಲಿ ಆಮ್ ಆದ್ಮಿ ಪಾರ್ಟಿ ದೇಶದ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಲು ಕರ್ನಾಟಕ ಜನತೆ ಚುನಾವಣೆಗಾಗಿ ಕಾಯುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದರು.
ಬೆಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಮ್ ಆದ್ಮಿ ಪಾರ್ಟಿಗೆ ರಾಷ್ಟ್ರೀಯ ಸ್ಥಾನಮಾನ ಸಿಗುತ್ತಿರುವ ಬಗ್ಗೆ ವಿವರಿಸಿದರು. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಚುನಾವಣೆ, ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಗಳ ಫಲಿತಾಂಶವು ಮೂರು ಸಂದೇಶ ನೀಡಿದೆ.
ಬಿಜೆಪಿಯನ್ನು ಸೋಲಿಸಲು ಆಮ್ ಆದ್ಮಿ ಪಾರ್ಟಿಗೆ ಸಾಧ್ಯವಿದೆ. ಕೇವಲ ಗುಜರಾತ್‌ನಲ್ಲಿ ಮಾತ್ರ ಪ್ರಧಾನಿ ಮೋದಿಯವರ ಪ್ರಭಾವವಿದೆ ಎಂದು ಗೊತ್ತಾಗಿದೆ. ಮೂರನೆಯದು ದೆಹಲಿ ಹಾಗೂ ಹಿಮಾಚಲ ಪ್ರದೇಶದಂತೆ ಕರ್ನಾಟಕದಲ್ಲೂ ಮೋದಿಯವರು ಬಿಜೆಪಿಯನ್ನು ಗೆಲ್ಲಿಸಲು ಸಾಧ್ಯವಿಲ್ಲ. ಈ ಮೂರು ಅಂಶಗಳಿಂದ ಎಎಪಿ ಮುಂದಿನ ಚುನಾವಣೆಗಳಲ್ಲಿ ಗೆಲ್ಲಲಿದೆ. ಈಗಾಗಲೇ ಬಿಜೆಪಿಯ ಭದ್ರಕೋಟೆ ಎಂದು ಕರೆಯಲ್ಪಡುವ ಗುಜರಾತ್‌ನಲ್ಲೂ 12ರಷ್ಟು ಮತಗಳನ್ನು ಪಡೆಯುವುದರಲ್ಲಿ ಎಎಪಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದರು.

2012ರಲ್ಲಿ 'ಭ್ರಷ್ಟಾಚಾರ ವಿರೋಧಿ ಭಾರತ' ಹೋರಾಟದ ಮುಂದಿನ ಭಾಗವಾಗಿ ಆಮ್ ಆದ್ಮಿ ಪಾರ್ಟಿ ಹುಟ್ಟಿಕೊಂಡಿತು. ಅಂದು ಸುಮಾರು ಹತ್ತು ಕಾರ್ಯಕರ್ತರಿಂದ ಆರಂಭವಾದ ಪಕ್ಷವು ದೆಹಲಿಯಲ್ಲಿ ಭದ್ರವಾಗಿ ಬೇರೂರಿದೆ. ಈಗ ದೇಶದೆಲ್ಲೆಡೆ ಹೆಮ್ಮರವಾಗಿ ಬೆಳೆಯುತ್ತಿದೆ. ಚುನಾವಣಾ ಆಯೋಗದ ಮಾನದಂಡಕ್ಕೆ ಅನುಗುಣವಾಗಿ ನಾಲ್ಕು ರಾಜ್ಯಗಳಲ್ಲಿ ಸಾಧನೆ ತೋರುವ ಮೂಲಕ ರಾಷ್ಟ್ರೀಯ ಪಕ್ಷ ಎಂಬ ಮಾನ್ಯತೆ ಪಡೆಯಲು ಅರ್ಹವಾಗಿದೆ. ಎಎಪಿಗೆ ದೇಶಾದ್ಯಂತ ಸಿಗುತ್ತಿರುವ ಯಶಸ್ಸಿಗೆ ನಮ್ಮ ನಾಯಕರು ಮತ್ತು ಕಾರ್ಯಕರ್ತರ ಅವಿರತ ಪರಿಶ್ರಮ ಹಾಗೂ ಪಕ್ಷದ ತತ್ತ್ವ ಸಿದ್ಧಾಂತಗಳು ಕಾರಣ ಎಂದರು.
ಎಎಪಿ ರಾಜಕೀಯ ಪರ್ಯಾಯ ಶಕ್ತಿ
ಆಮ್ ಆದ್ಮಿ ಪಾರ್ಟಿ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಮಾತನಾಡಿ, ಕರ್ನಾಟಕದ ರಾಜಕೀಯದಲ್ಲಿ ಪರ್ಯಾಯ ಶಕ್ತಿಯಾಗಿ ಆಮ್ ಆದ್ಮಿ ಪಾರ್ಟಿ ಎದ್ದು ನಿಲ್ಲಲಿದೆ. ಮುಂಬರುವ ಬಿಬಿಎಂಪಿ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವು ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಸಾಧ್ಯತೆ ದಟ್ಟವಾಗಿದೆ. ಆದಷ್ಟು ಶೀಘ್ರವೇ ಪಕ್ಷದ ಸಂಘಟನೆಯು ಇನ್ನಷ್ಟು ಬಲಗೊಳ್ಳಲಿದೆ ಎಂದು ಹೇಳಿದರು.

ಎಎಪಿ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು, ಕಾಂಗ್ರೆಸ್ ಪಕ್ಷವನ್ನು ಹತ್ತಿಕ್ಕಲು ಬಿಜೆಪಿಯು ಎಎಪಿಯನ್ನು ಬಳಸಿಕೊಳ್ಳುತ್ತಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ಮೂರ್ಖತನದಿಂದ ಕೂಡಿದೆ. ಚುನಾವಣೆ ಎಂಬ ಯುದ್ಧಕ್ಕೂ ಮುನ್ನವೇ ಶಸ್ತ್ರತ್ಯಾಗ ಮಾಡಿ ಸೋಲೊಪ್ಪಿಕೊಳ್ಳುವ ಕಾಂಗ್ರೆಸ್‌ಗೆ ಎಎಪಿ ಬಗ್ಗೆ ಮಾತಾಡುವ ನೈತಿಕತೆಯಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಅತ್ಯಂತ ಭ್ರಷ್ಟ ಪಕ್ಷಗಳಾಗಿದ್ದು, ಇವೆರಡರ ದುರಾಡಳಿತದಿಂದ ಬೇಸತ್ತಿರುವವರು ಹಾಗೂ ದೇಶದ ರಾಜಕೀಯದಲ್ಲಿ ಬದಲಾವಣೆ ತರಬೇಕೆಂದು ಬಯಸುತ್ತಿರುವವರು ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ತಿಳಿಸಿದರು.












Click it and Unblock the Notifications