ಮಹದಾಯಿ ನ್ಯಾಯಮಂಡಳಿಯ ಅವಧಿ 1 ವರ್ಷ ವಿಸ್ತರಣೆ
ನವದೆಹಲಿ, ಜುಲೈ 27: ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ನಡುವಿನ ನೀರು ಹಂಚಿಕೆ ವಿವಾದಗಳನ್ನು ಪರಿಹರಿಸಲು ಸ್ಥಾಪಿಸಲಾದ ಮಹದಾಯಿ ಜಲ ವಿವಾದಗಳ ನ್ಯಾಯಮಂಡಳಿ ತನ್ನ ವರದಿ ಮತ್ತು ನಿರ್ಧಾರವನ್ನು ಸಲ್ಲಿಸಲು ಒಂದು ವರ್ಷ ವಿಸ್ತರಣೆಯನ್ನು ನೀಡಿದೆ.
ಸೋಮವಾರ ಹೊರಡಿಸಲಾದ ಗೆಜೆಟ್ ಅಧಿಸೂಚನೆಯ ಪ್ರಕಾರ, ನ್ಯಾಯಮಂಡಳಿಯು ತನ್ನ ಮುಂದಿನ ವರದಿಯನ್ನು ಸಲ್ಲಿಸಲು ವಿಸ್ತರಣೆಯನ್ನು ಕೋರಿದೆ. ಈ ಮೂಲಕ ಕೇಂದ್ರ ಸರ್ಕಾರವು 20ನೇ ಆಗಸ್ಟ್, 2023 ರಿಂದ ಜಾರಿಗೆ ಬರುವಂತೆ ಈ ಟ್ರಿಬ್ಯೂನಲ್ ಮುಂದಿನ ವರದಿಯನ್ನು ಸಲ್ಲಿಸುವ ಅವಧಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸುತ್ತದೆ ಎಂದು ಅಧಿಸೂಚನೆ ತಿಳಿಸಿದೆ.

ನ್ಯಾಯಮಂಡಳಿ ತನ್ನ ಅಂತಿಮ ವರದಿಯನ್ನು ಸಲ್ಲಿಸಿದ್ದರೂ, ವರದಿಯಲ್ಲಿ ಮಾರ್ಪಾಡು ಕೋರಿ ಕರ್ನಾಟಕ ಮತ್ತು ಗೋವಾ ಎರಡೂ ಸುಪ್ರೀಂ ಕೋರ್ಟ್‌ಗೆ ಹೋಗಿದ್ದವು. ಈ ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಅಲ್ಲದೆ, ಗೋವಾ, ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರವು ನ್ಯಾಯಮಂಡಳಿಗೆ ಹೆಚ್ಚುವರಿ ಉಲ್ಲೇಖಗಳನ್ನು ಮಾಡಿದ್ದು, ನ್ಯಾಯಮಂಡಳಿಯ ಮುಂದಿನ ವರದಿಗೆ ಕಾರಣವಾಯಿತು. ಇದರ ನಂತರ ಜಲಶಕ್ತಿ ಸಚಿವಾಲಯವು ನ್ಯಾಯಮಂಡಳಿಗೆ ಒಂದು ವರ್ಷ ವಿಸ್ತರಣೆಯನ್ನು ನೀಡಲು ನಿರ್ಧರಿಸಿತು.
ಇತ್ತೀಚೆಗೆ ಕರ್ನಾಟಕದ ಗಡಿಗೆ ಹೊಂದಿಕೊಂಡು ಗೋವಾದಲ್ಲಿರುವ ಮಹದಾಯಿ ವನ್ಯಜೀವಿ ಅಭಯಾರಣ್ಯವನ್ನು ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಿ 3 ತಿಂಗಳೊಳಗೆ ಅಧಿಸೂಚನೆ ಹೊರಡಿಸುವಂತೆ ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಸೋಮವಾರ ಗೋವಾ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದರಿಂದಾಗಿ, ಕುಡಿಯುವ ನೀರಿಗಾಗಿ ಕರ್ನಾಟಕ ಕೈಗೆತ್ತಿಕೊಳ್ಳಲು ಯತ್ನಿಸುತ್ತಿರುವ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಗೆ ಇನ್ನೊಂದು ವಿಘ್ನ ಎದುರಾದಂತಾಗಿದೆ.
ಈಗಾಗಲೇ ನ್ಯಾಯಾಧಿಕರಣದ ತೀರ್ಪಿನಂತೆ ಮಹದಾಯಿ ಕಣಿವೆಯಲ್ಲಿ ತನ್ನ ಪಾಲಿನ ನೀರಿನ ಬಳಕೆಗೆ ಕರ್ನಾಟಕ ಸರ್ಕಾರ ಕೈಗೊಳ್ಳಲು ಉದ್ದೇಶಿಸಿರುವ ಯೋಜನೆಗೆ ಗೋವಾ ಸರ್ಕಾರ ತಕರಾರು ಮಾಡುತ್ತಾ ಬಂದಿದೆ. ಜೊತೆಗೆ, ಕೇಂದ್ರ ಪರಿಸರ ಸಚಿವಾಲಯದ ಅನುಮತಿ ಕೂಡ ಇನ್ನೂ ಸಿಕ್ಕಿಲ್ಲ. ಹೀಗಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಸೇರಿ 11 ತಾಲೂಕು ಕೇಂದ್ರ ಹಾಗೂ 36 ಗ್ರಾಮಗಳ ಕುಡಿಯುವ ನೀರಿಗಾಗಿ 7.5 ಟಿಎಂಸಿ ನೀರು ಬಳಕೆ ಮಾಡಿಕೊಳ್ಳುವ ಕರ್ನಾಟಕದ ಪ್ರಯತ್ನ ಕುಂಟುತ್ತಾ ಸಾಗಿದೆ.
ಇದೀಗ ಮಹದಾಯಿ ಕಣಿವೆಯಲ್ಲೇ ಬರುವ ಅರಣ್ಯ ಪ್ರದೇಶವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಿದರೆ, ಅದರಲ್ಲಿ ಕರ್ನಾಟಕದ ಪಶ್ಚಿಮ ಘಟ್ಟದ ಕೆಲ ಭಾಗಗಳು ಮತ್ತು ಉದ್ದೇಶಿತ ಕಳಸಾ-ಬಂಡೂರಾ ನಾಲಾ ಯೋಜನೆಯ ಪ್ರದೇಶವೂ ಬರುವುದರಿಂದ ಮಹದಾಯಿ ಯೋಜನೆಗೆ ಅಡ್ಡಿಯಾಗುವ ಸಾಧ್ಯತೆಯಿದೆ.












Click it and Unblock the Notifications