BJP President: ತಾರಕಕ್ಕೇರಿದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಕದನ: ಯಾರಿಗೆ ಸಿಗಲಿದೆ ಅಧ್ಯಕ್ಷಗಿರಿ ಪಟ್ಟ?
ಬೆಂಗಳೂರು, ಫೆಬ್ರವರಿ 05: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೇರಿದ್ದು, ಬಿಜೆಪಿ ನಾಯಕರ ಒಳಜಗಳ ಬೀದಿಗೆ ಬಂದಿದೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರನ್ನ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಿಗಿಳಿಸಬೇಕು, ಅಧ್ಯಕ್ಷರ ಬದಲಾವಣೆಯಾಗಬೇಕು ಎಂದು ದೆಹಲಿ ವರಿಷ್ಠರ ಭೇಟಿಗೆ ವಿಜಯೇಂದ್ರ ವಿರೋಧಿ ಬಣ ಮುಂದಾಗಿದೆ.
ಇದೀಗ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆ ವಿಚಾರ ನಿರ್ಣಾಯಕ ಹಂತ ತಲುಪಿದ್ದು, ಹಾಲಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮುಂದುವರೆಯಲಿದ್ದಾರೆಯೇ? ಇಲ್ಲವೆ ಭಿನ್ನಮತೀಯರ ಪಟ್ಟಿನಂತೆ ಹೊಸಬರಿಗೆ ಅವಕಾಶ ಸಿಗಲಿದೆಯಾ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಶತಾಯ ಗತಾಯ ವಿಜಯೇಂದ್ರ ಅವರ ಬದಲಾವಣೆಗೆ ಪಟ್ಟು ಹಿಡಿದು ದೆಹಲಿಯಲ್ಲಿ ಬೀಡು ಬಿಟ್ಟಿರುವ ಭಿನ್ನಮತೀಯರು ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿಯಾಗುವ ಕಾದುಕುಳಿತಿದ್ದಾರೆ. ಅಲ್ಲದೇ ವಿಜಯೇಂದ್ರ ಅವರ ವಿರೋಧಿ ಬಣ ಈಗಾಗಲೇ ರಾಷ್ಟ್ರೀಯ ಸಂಘಟಾನ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರನ್ನ ಭೇಟಿ ಮಾಡಿ ಸುಧೀರ್ಘವಾಗಿ ಮಾತುಕತೆ ನಡೆಸಿದ್ದಾರೆ.
ಇನ್ನೂ ಕಳೆದ ರಾತ್ರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಭೇಟಿ ಮಾಡಿ ರಾಜ್ಯದ ವಸ್ತು ಸ್ಥಿತಿಯನ್ನು ವಿವರಿಸಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಅವರು ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿರುವುದಕ್ಕೆ ನಿದರ್ಶನವಾಗಿ ಫೋಟೋಗಳು ಲಭ್ಯವಿಲ್ಲದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ ಮಂಗಳವಾರ ಬೆಳಿಗ್ಗೆ ಸಂಸತ್ತಿನಲ್ಲಿ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ , ಕುಮಾರ್ ಬಂಗಾರಪ್ಪ, ಶ್ರೀಮಂತಪಾಟೀಲ್ ಸೇರಿದಂತೆ ಕೆಲವರು ಭೇಟಿಯಾಗಿದ್ದರು.
ಈಗಾಗಲೇ ಬಜೆಟ್ ಕುರಿತು ಅಧಿವೇಶನ ನಡೆಯುತ್ತಿದ್ದು, ರಾಜ್ಯ ಚುನಾವಣಾ ಉಸ್ತುವಾರಿ ಶಿವರಾಜ್ಸಿಂಗ್ ಚೌವ್ಹಾಣ್ ಅವರನ್ನು ಭೇಟಿ ಮಾಡಲು ಸಮಯಾವಕಾಶ ಕೇಳಿದ್ದರಾದರೂ ಭೇಟಿಗೆ ಅವಕಾಶ ನೀಡಿಲ್ಲ. ರಾತ್ರಿ ವೇಳೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತಿತರರು ಭಿನ್ನಮತೀಯರನ್ನು ಸೇರಿಕೊಂಡಿದ್ದು, ವರಿಷ್ಠರ ಭೇಟಿಗೆ ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ. ಈಗಾಗಲೇ ಪಕ್ಷದ ಹೈಕಮಾಂಡ್ ಮುಂದೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಣ ಹಲವು ಬೇಡಿಕೆಯನ್ನು ಇಟ್ಟಿದ್ದಾರೆ. ಇದರ ಜೊತೆಗೆ 23 ಜಿಲ್ಲಾಧ್ಯಕ್ಷರ ಆಯ್ಕೆ ಘೋಷಣೆಯನ್ನು ರದ್ದು ಮಾಡಬೇಕು, ರಾಜ್ಯಾಧ್ಯಕ್ಷರ ಚುನಾವಣೆ ನಡೆಸಬೇಕೆಂಬ ಒತ್ತಡ ಹಾಗೂ ವಿಜಯೇಂದ್ರರನ್ನ ಪಟ್ಟದಿಂದ ಇಳಿಸಬೇಕು ಎಂಬ ಬೇಡಿಕೆಯನ್ನ ಹೈಕಮಾಂಡ್ ಮುಂದೆ ಇಡಲಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನದ ಬದಲಾವಣೆಯ ನಿರೀಕ್ಷೆಯಲ್ಲಿ ಯತ್ನಾಳ್ ಬಣವಿದೆ. ಆದರೆ, ರಾಜ್ಯಾಧ್ಯಕ್ಷ ಸ್ಥಾನದ ವಿಚಾರದಲ್ಲಿ ಚುನಾವಣೆ ನಡೆಯುವ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅವರ ಬಣ ಹೈಕಮಾಂಡ್ ನಾಯಕರ ಭೇಟಿಗೆ ತೆರಳಿದ್ದು, ಎರಡು ಮೂರು ದಿನ ದೆಹಲಿಯಲ್ಲೇ ಠಿಕಾಣಿ ಹೂಡಲಿದ್ದಾರೆ. ದೆಹಲಿಗೆ ತೆರಳಿರುವ ತಂಡದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಬಿ.ಪಿ .ಹರೀಶ್, ಜಿ.ಎಂ.ಸಿದ್ಧೇಶ್ವರ ಸೇರಿ ಪ್ರಮುಖ ನಾಯಕರು ಸದ್ಯ ರಾಷ್ಟ್ರ ರಾಜಧಾನಿಯಲ್ಲಿ ಬೀಡು ಬಿಟ್ಟಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ರೆಬೆಲ್ ಟೀಂಗೆ ಇನ್ನೂ ವರಿಷ್ಠರ ಭೇಟಿಗೆ ಅವಕಾಶ ಸಿಕ್ಕಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಬೇಕು ಎಂದು ಯತ್ನಾಳ್ ಬಣದ ಉದ್ದೇಶವಾಗಿದೆ. ಆದರೆ, ಇದುವರೆಗೂ ಯತ್ನಾಳ್ ಬಣಕ್ಕೆ ಕಾಲವಕಾಶ ಸಿಕ್ಕಿಲ್ಲ. ಈ ಎಲ್ಲಾ ಬೆಳವಣಿಗೆಯನ್ನ ಗಮನಿಸಿದರೇ ಬಿ ವೈ ವಿಜಯೇಂದ್ರ ಅವರನ್ನೇ ಮುಂದೆವರೆಸುವ ಉದ್ದೇಶವನ್ನ ಹೈಕಮಾಂಡ್ ಹಾಕಿಕೊಂಡಿದ್ಯಾ ಎನ್ನಲಾಗಿದೆ.












Click it and Unblock the Notifications