Government Employee: ಬೇಸಿಗೆ ರಜೆ ಸರ್ಕಾರಕ್ಕೆ ಸರ್ಕಾರಿ ನೌಕರರ ಸಂಘದ ಪತ್ರ
ಬೆಂಗಳೂರು, ಮಾರ್ಚ್ 26: ಶಾಲೆಗಳ ಪರೀಕ್ಷೆಗಳು ಮುಗಿಯುತ್ತಾ ಬಂದಿದ್ದು, ಶಾಲೆಗಳಿಗೆ ಬೇಸಿಗೆ ರಜೆ ಪ್ರಾರಂಭವಾಗುತ್ತಿದೆ. ಬೇಸಿಗೆ ರಜೆಗಳು, ಶಾಲಾ ಶಿಕ್ಷಕರ ರಜೆಗಳ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮಾನ್ಯ ಅಪರ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಕಲಬುರಗಿ ವಿಭಾಗ ಇವರಿಗೆ ಪತ್ರವನ್ನು ಬರೆದಿದೆ. ಬೇಸಿಗೆ ರಜೆ ಅವಧಿಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವ ಕುರಿತು ಗಮನವನ್ನು ಸೆಳೆಯಲಾಗಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಈ ಪತ್ರವನ್ನು ಬರೆದಿದ್ದಾರೆ. ಈ ಪತ್ರ ಬೇಸಿಗೆ ರಜೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ನಡೆಸುವ ನಡವಳಿಯ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. ಅಧ್ಯಕ್ಷರು, ಕ.ರಾ.ಸ.ನೌ.ಸಂಘ, ಕೊಪ್ಪಳ ಇವರ ಮನವಿ ದಿನಾಂಕ 24/3/2025 ಉಲ್ಲೇಖಿಸಿದ್ದಾರೆ.

ಪತ್ರದ ವಿವರಗಳು: ಪತ್ರದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮ ಅಧ್ಯಕ್ಷತೆಯಲ್ಲಿ ದಿನಾಂಕ 14-03-2025ರಂದು ನಡೆದ ಕಲಬುರಗಿ ವಿಭಾಗದ ಉಪ ನಿರ್ದೇಶಕರುಗಳ ಸಭೆಯ ನಡವಳಿಯಲ್ಲಿ 9ನೇ ತರಗತಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿಶೇಷ ತರಗತಿಗಳನ್ನು ಬೇಸಿಗೆ ರಜೆಯಲ್ಲಿ ದಿನಾಂಕ 01-05-2025 ರಿಂದ ಒಂದು ತಿಂಗಳು ಅರ್ಧ ದಿನದ ಮಟ್ಟಿಗೆ ವಿಶೇಷ ತರಗತಿಗಳನ್ನು ಪ್ರಾರಂಭಿಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಆದರೆ, ಬೇಸಿಗೆ ರಜೆ ಅವಧಿಯಲ್ಲಿ ಶಿಕ್ಷಕರು ಶಾಲೆಗಳಿಗೆ ಹಾಜರಾಗಿ ವಿಶೇಷ ತರಗತಿಗಳನ್ನು ನಡೆಸಲು ತೊಂದರೆಯಾಗುವುದಾಗಿ ಹಾಗೂ ಕಲಬುರಗಿ ವಿಭಾಗದ ಜಿಲ್ಲೆಗಳಲ್ಲಿ ಮೇ ತಿಂಗಳಿನಲ್ಲಿ ಬಿಸಿಲಿನ ತಾಪಮಾನ ಹೆಚ್ಚಿರುವುದರಿಂದ ತರಗತಿಗಳನ್ನು ನಡೆಸಲು ಕಷ್ಟಸಾಧ್ಯವಾಗುವುದರಿಂದ ಹಾಗೂ ಮಕ್ಕಳು ಶಾಲೆಗೆ ಬರಲು ತೊಂದರೆಯಾಗುವುದರಿಂದ ಈ ಪ್ರಸ್ತಾವನೆಯನ್ನು ಕೈಬಿಡುವಂತೆ ಉಲ್ಲೇಖಿತ ಪತ್ರದಲ್ಲಿ ಮನವಿ ಮಾಡಿರುತ್ತಾರೆ.
ಮೇಲಿನ ಅಂಶಗಳ ಹಿನ್ನೆಲೆಯಲ್ಲಿ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ರಜಾ ಸಹಿತ ಇಲಾಖೆಯಾಗಿರುವುದರಿಂದ ದಿನಾಂಕ 14-03-2025ರ ಸಭಾ ನಿರ್ಣಯದಂತೆ 9ನೇ ತರಗತಿ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ವೇಳೆಯಲ್ಲಿ ದಿನಾಂಕ 01-05-2025 ರಿಂದ ಒಂದು ತಿಂಗಳ ಕಾಲ ವಿಶೇಷ ತರಗತಿಗಳನ್ನು ಪ್ರಾರಂಭಿಸುವ ಪ್ರಸ್ತಾವನೆಯನ್ನು ಕೈಬಿಡುವಂತೆ ತಮ್ಮಲ್ಲಿ ಕೋರಿದೆ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಪತ್ರ: ಇದೇ ವಿಚಾರವಾಗಿ ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಸಹ ಶಿಕ್ಷಣ ಇಲಾಖೆ ಅಪರ ಆಯುಕ್ತರಿಗೆ ಪತ್ರವನ್ನು ಬರೆದಿತ್ತು.
ಈ ಪತ್ರವು 01-05-2025ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿ ಆಯೋಜಿಸಲಿರುವ ವಿಶೇಷ ತರಗತಿಗಳನ್ನು ರದ್ದು ಮಾಡುವ ಕುರಿತು ಮನವಿ ಎಂಬ ವಿಷಯವನ್ನು ಒಳಗೊಂಡಿತ್ತು ಮತ್ತು ಅಪರ ಆಯುಕ್ತರ ಕಛೇರಿ ನಡಾವಳಿಯನ್ನು ಉಲ್ಲೇಖ ಮಾಡಲಾಗಿತ್ತು.
ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಕೋರುವುದೇನೆಂದರೆ, ಕಲ್ಯಾಣ ಕರ್ನಾಟಕ ವಿಭಾಗವು ಸೇರಿದಂತೆ ರಾಜ್ಯಾದ್ಯಂತ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ವಿಶೇಷ ತರಗತಿಗಳು ಸೇರಿದಂತೆ ಇಲಾಖೆ ಸೂಚಿಸಿದ ಎಲ್ಲಾ ಕಾರ್ಯಕ್ರಮಗಳನ್ನು ಪ್ರೌಢಶಾಲಾ ಶಿಕ್ಷಕರು ಯಶಸ್ವಿಯಾಗಿ ಅನುಪಾಲನೆ ಮಾಡಿದ್ದಾರೆ.
ಶಿಕ್ಷಣ ಇಲಾಖೆಯು ರಜೆ ಸಹಿತ ಇಲಾಖೆಯಾಗಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯದಲ್ಲಿ ಏಪ್ರಿಲ್ ತಿಂಗಳ ಅಂತ್ಯದವರೆವಿಗೂ ಪ್ರೌಢಶಾಲಾ ಸಹ ಶಿಕ್ಷಕರು ಕರ್ತವ್ಯದಲ್ಲಿ ಇರುತ್ತಾರೆ.
ಈಗಾಗಲೇ ಬೇಸಿಗೆ ಕಾಲ ಆರಂಭವಾಗಿದ್ದು ಪ್ರಸ್ತುತ ವಾತಾವರಣದಲ್ಲಿ ತೀವ್ರ ಉಷ್ಣತೆ ಹೆಚ್ಚಾಗಿದ್ದು, ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಿಂದ ಹವಾಮಾನ ಇಲಾಖೆಯು ವಯಸ್ಸಾದವರು ಹಾಗೂ ಮಕ್ಕಳು ಕೂಡ ಮನೆಯಿಂದ ಹೊರಗಡೆ ಬಾರದಂತೆ ಇರಲು ನಿರ್ದೇಶನ ನೀಡಿರುತ್ತದೆ.
ಈ ಹಿನ್ನಲೆಯಲ್ಲಿ ದಿನಾಂಕ 01-05-2025 ರಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆಯಲ್ಲಿ ವಿಶೇಷ ತರಗತಿಗಳನ್ನು ನಡೆಸಲು ಸಭಾ ನಡಾವಳಿಯನ್ವಯ ಚರ್ಚಿಸಿರುವುದು ಅವೈಜ್ಞಾನಿಕ ಕ್ರಮವಾಗಿರುತ್ತದೆ.
ಈ ಕ್ರಮ ಮನೋವೈಜ್ಞಾನಿಕವಾಗಿಯೂ ಮಕ್ಕಳು ಮತ್ತು ಶಿಕ್ಷಕರಿಗೆ ಒತ್ತಡವನ್ನು ತರುವುದಾಗಿದೆ. ಆದುದರಿಂದ ತಾವು ನಡಾವಳಿಯಲ್ಲಿ ತೆಗೆದುಕೊಂಡಿರುವ ನಿರ್ಣಯವನ್ನು ಕೈಬಿಡಲು ಈ ಮೂಲಕ ತಮ್ಮಲ್ಲಿ ಕೋರುತ್ತೇವೆ ಎಂದು ಪತ್ರದಲ್ಲಿ ಮನವಿ ಮಾಡಲಾಗಿತ್ತು.












Click it and Unblock the Notifications