ಸಿದ್ದರಾಮಯ್ಯ ಅವರು ಯಾಕೆ ಓಡಿ ಹೋಗುವ ಕೆಲಸ ಮಾಡಿದ್ದಾರೆ: ಬಿ ವೈ ವಿಜಯೇಂದ್ರ ಹೀಗೆ ಹೇಳಿದ್ಯಾಕೆ?
ಬೆಂಗಳೂರು, ಆಗಸ್ಟ್ 21: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾಕೆ ಓಡಿ ಹೋಗುವ ಕೆಲಸ ಮಾಡಿದ್ದಾರೆ. ಸದನದಲ್ಲಿ ವಿಪಕ್ಷ ನಾಯಕರು ಚರ್ಚೆ ಮಾಡಬೇಕೆಂದು ಕೋರಿದರೂ ಪಲಾಯನವಾದ ಮಾಡಿದ್ದಾರೆ ಎಂದು ವಿಜಯೇಂದ್ರ ಅವರು ಆಕ್ಷೇಪಿಸಿದರು. ಈ ಮೂಲಕ ಸದನಕ್ಕೆ ಅಗೌರವ ತೋರಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟಿನ ಆದೇಶವನ್ನೂ ಸರಿಯಾಗಿ ಪಾಲನೆ ಮಾಡಿದಂತೆ ಕಾಣುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ. ಜಸ್ಟಿಸ್ ಸದಾಶಿವ ಆಯೋಗದ ವರದಿಯನ್ನೂ ಸರಿಯಾಗಿ ಪಾಲಿಸಿದಂತೆ ಕಾಣುತ್ತಿಲ್ಲ. ಅದೇರೀತಿ ನ್ಯಾ.ನಾಗಮೋಹನ್ ದಾಸ್ ವರದಿಯನ್ನೂ ಸರಿಯಾಗಿ ಪಾಲಿಸಿದಂತೆ ಕಾಣುತ್ತಿಲ್ಲ ಎಂದು ಆಕ್ಷೇಪಿಸಿದರು. ನ್ಯಾ.ನಾಗಮೋಹನ್ ದಾಸ್ ವರದಿಯಲ್ಲಿ ಎ, ಬಿ, ಸಿ, ಡಿ, ಇ ಎಂದು 5 ವರ್ಗಗಳನ್ನು ಮಾಡಿದ್ದರು. ಅದನ್ನು ಎ, ಬಿ, ಸಿ ಎಂದು ಮಾಡಿದ್ದಾರೆ ಎಂದು ಆರೋಪಿಸಿದರು.

ನರೇಂದ್ರ ಸ್ವಾಮಿ ಮೊದಲಾದವರ ಮೂಲಕ ನೀವೇ ವಿಂಗಡಣೆ ಮಾಡುವುದಾದರೆ, ಸರಕಾರ ಮತ್ತು ಸಿದ್ದರಾಮಯ್ಯನವರಿಗೆ ಜಸ್ಟಿಸ್ ಸದಾಶಿವ ಆಯೋಗ, ನ್ಯಾ.ನಾಗಮೋಹನ್ ದಾಸ್ ಆಯೋಗಕ್ಕೆ ನೂರಾರು ಕೋಟಿ ಖರ್ಚು ಮಾಡುವ ಅವಶ್ಯಕತೆ ಏನಿತ್ತು. ಹಿಂದೆ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ಅವರು ಪರಿಶಿಷ್ಟ ಜಾತಿ, ಪಂಗಡಗಳ ಕುರಿತು ಒಂದು ದಿಟ್ಟ ನಿರ್ಧಾರ ಮಾಡಿದ್ದರು. ಅವತ್ತು ಬೊಮ್ಮಾಯಿಯವರು ಪರಿಶಿಷ್ಟ ಜಾತಿಗೆ ಶೇ 15 ಇದ್ದುದನ್ನು ಶೇ 17ಕ್ಕೆ ಏರಿಸಿದ್ದರು. ಪರಿಶಿಷ್ಟ ಪಂಗಡಕ್ಕೆ ಶೇ 3 ಇದ್ದುದನ್ನು ಶೇ 7ಕ್ಕೆ ಏರಿಕೆ ಮಾಡಿದ್ದರು. ಆಗ ವಿಪಕ್ಷ ನಾಯಕರಾಗಿದ್ದ ಇದೇ ಸಿದ್ದರಾಮಯ್ಯನವರು, ಒಳ ಮೀಸಲಾತಿಯ ಬಿಜೆಪಿ ಸರಕಾರದ ನಿರ್ಧಾರವನ್ನು ಯಾವುದೂ ಅನುಷ್ಠಾನ ಆಗಿಲ್ಲ; ಇವರು ಬೂಟಾಟಿಕೆ- ನಾಟಕ ಮಾಡುತ್ತಿದ್ದಾರೆÉಂದು ರಾಜ್ಯಾದ್ಯಂತ ಓಡಾಡಿ ಅಪಪ್ರಚಾರ ಮಾಡಿದ್ದರು ಎಂದು ಟೀಕಿಸಿದರು.
ಜಸ್ಟಿಸ್ ಸದಾಶಿವ ಆಯೋಗವನ್ನು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಘೋಷಣೆ ಮಾಡಿತ್ತೇ ವಿನಾ ಆ ಆಯೋಗಕ್ಕೆ ಹಣಕಾಸಿನ ನೆರವನ್ನು ಕೊಟ್ಟು ವ್ಯವಸ್ಥೆ ಮಾಡಿದ್ದು, ಯಡಿಯೂರಪ್ಪ ಅವರ ನೇತೃತ್ವದ ಹಿಂದಿನ ಬಿಜೆಪಿ ಸರಕಾರ. ಅದನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲು ಬಸವರಾಜ ಬೊಮ್ಮಾಯಿಯವರು ಮುಂದಾಗಿದ್ದರು. ದತ್ತಾಂಶ ಇಟ್ಟುಕೊಂಡು ವರ್ಗೀಕರಣ ಮಾಡಬೇಕಿತ್ತು. ಒಳ ಮೀಸಲಾತಿ ಜಾರಿ ವಿಚಾರದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆ ವಿಚಾರವನ್ನು ಇಟ್ಟುಕೊಂಡು ಒಳ ಮೀಸಲಾತಿ ಕೊಡಬೇಕೇ ಹೊರತು ಜನಸಂಖ್ಯೆ ಆಧಾರದಲ್ಲಿ ಅಲ್ಲ ಎಂದು ಪ್ರತಿಪಾದಿಸಿದರು.
ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಪ್ರಾಮಾಣಿಕ ಉತ್ತರ ಕೊಡಬೇಕು. ಹಿಂದೆ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರ ಶೇ 17 ಮೀಸಲಾತಿ ಕೊಟ್ಟಾಗ ಅಪಪ್ರಚಾರ ಮಾಡಿದ್ದೀರಿ. ಈಗ ಅದೇ ಶೇ 17 ಅನ್ನು ಮುಂದಿಟ್ಟಿದ್ದೀರಲ್ಲವೇ? ಹಿಂದಿನ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರ ಮಾಡಿದ್ದನ್ನು ಈಗಲಾದರೂ ಒಪ್ಪಿಕೊಳ್ಳಿ ಎಂದು ಆಗ್ರಹಿಸಿದರು. ಇದನ್ನು ಇಂದು ಸದನದಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳಿಂದ ಹೇಳಿಕೆ ಪಡೆಯುತ್ತೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಸತ್ಯಾಂಶವನ್ನು ಜನತೆಗೆ ತಿಳಿಸಲಿ; ಅಲ್ಲದೇ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದರು. ದತ್ತಾಂಶವಿಲ್ಲದೇ ಹೇಗೆ ಇದನ್ನು ಮಾಡಿದ್ದಾರೆ ಎಂಬ ಕುರಿತು ನಾಳೆ ಚರ್ಚೆ ಮಾಡುತ್ತೇವೆ ಎಂದರು.












Click it and Unblock the Notifications