ತೆಂಗಿನ ಬೆಳೆಗೆ ಬಿಳಿ ನೊಣ, ಕೀಟಗಳ ನಿಯಂತ್ರಣಕ್ಕೆ ಕ್ರಮ: ಎಸ್.ಎಸ್. ಮಲ್ಲಿಕಾರ್ಜುನ್
ಬೆಂಗಳೂರು: ತೆಂಗು ಬೆಳೆಯಲ್ಲಿ ಕಂಡು ಬರುವ ಕಪ್ಪು ತಲೆಹುಳು ಹಾಗೂ ಬಿಳಿನೊಣ ಕೀಟಗಳ ನಿಯಂತ್ರಣಕ್ಕಾಗಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 23 ಪ್ರಯೋಗ ಶಾಲೆಗಳಲ್ಲಿ ಗೋನಿಯೋಜಸ್ ಎಂಬ ಪರೋಪಜೀವಿಗಳು ಹಾಗೂ ಐಸಿರಿಯಾ ಜೈವಿಕ ಕೀಟನಾಶಕವನ್ನು ಉತ್ಪಾದನೆ ಮಾಡಿ ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ರಮೇಶ್ ಬಂಡಿಸಿದ್ದೇಗೌಡ ಎ.ಬಿ ಅವರ ಪ್ರಶ್ನೆಗೆ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಒಟ್ಟು ರೂ. 140 ಲಕ್ಷಗಳ ಅನುದಾನ ನಿಗದಿಯಾಗಿದ್ದು, ಮಂಡ್ಯ ಜಿಲ್ಲೆಗೆ 18 ಲಕ್ಷಗಳನ್ನು ನೀಡಲಾಗಿದ್ದು ಈವರೆಗೂ 588 ರೈತರಿಗೆ ರೂ. 12.13ಲಕ್ಷಗಳಲ್ಲಿ 23.62 ಲಕ್ಷ ಸಂಖ್ಯೆ ಪರೋಪ ಜೀವಿಗಳನ್ನು ಉತ್ಪಾದಿಸಿ ವಿತರಿಸಲಾಗಿದೆ.

ತೆಂಗಿನ ಇಳುವರಿ ಕಡಿಮೆ ಆದ ಪರಿಣಾಮ ರೈತರು ಸಂಕಷ್ಟಕ್ಕೆ ಒಳಗಾಗಿದ್ದು, ತೆಂಗಿನ ತೋಟಗಳಲ್ಲಿ ಪ್ರಾತ್ಯಕ್ಷಿಕೆ ಹಾಗೂ ನಿರ್ವಹಣೆಯಿಂದ ತೆಂಗಿನ ಮರಗಳು ಸದೃಡಗೊಂಡು ರೋಗ/ಕೀಟ ನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತವೆ. ಆದ್ದರಿಂದ ಈ ಚಟುವಟಿಕೆಗಳಿಗಾಗಿ ಪ್ರತಿ ಫಲಾನುಭವಿಗೆ ಒಂದು ಹೆಕ್ಟೇರ್ ಗೆ ರೂ,35,000 ಗಳಂತೆ 2 ವರ್ಷಗಳ ಅವಧಿಗೆ ಮೊದಲನೇ ವರ್ಷ ರೂ. 17,500ಗಳು ಮತ್ತು ಎರಡನೇ ವರ್ಷದಲ್ಲಿ ರೂ.17,500ಗಳಂತೆ ಸಹಾಯ ಧನ ನೀಡಲಾಗುತ್ತಿದೆ. ರೋಗ ಮತ್ತು ಕೀಟಬಾಧಿತ ತಾಕುಗಳನ್ನು ಗುಚ್ಛಗಳಲ್ಲಿ (Clusters) ಆಯ್ಕೆ ಮಾಡಿ ಸಹಾಯಧನ ನೀಡಲಾಗಿರುತ್ತದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಕಪ್ಪು ತಲೆ ಹುಳುವಿನ ನಿಯಂತ್ರಣಕ್ಕಾಗಿ ಪರೋಪ ಜೀವಿಗಳನ್ನು ಉತ್ಪಾದಿಸಿ ವಿತರಣೆಗಾಗಿ ಹೊಸದಾಗಿ ಪ್ರಯೋಗ ಶಾಲೆ ಸ್ಥಾಪಿಸುವುದು ಸೇರಿದಂತೆ PM-RKYY DPR (Pradhan Mantri Rastriya Krishi Vikas Yojana Detailed Project Report) ಯೋಜನೆಯಡಿ ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ 2026-27ನೇ ಸಾಲಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ರಬ್ಬರ್ ಬೆಳೆಯನ್ನು ತೋಟಗಾರಿಕಾ ಬೆಳೆಗಳ ವ್ಯಾಪ್ತಿಗೆ ಶಿಫಾರಸ್ಸು
ರಬ್ಬರ್ ಗೆ ಬೆಂಬಲ ಬೆಲೆ ನಿಗದಿಪಡಿಸುವ ಮತ್ತು ಕೃಷಿ ಹವಾಮಾನ ಆಧಾರಿತ ವಿಮೆ ಸೌಲಭ್ಯ ಒದಗಿಸಲು ಇರುವ ಸಾಧ್ಯತೆ ಬಗ್ಗೆ ರಬ್ಬರ್ ಮಂಡಳಿಯು ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ಬಗ್ಗೆ ರಬ್ಬರ್ ಬೋರ್ಡ್ ಗೆ ರಾಜ್ಯ ಸರ್ಕಾರದಿಂದ ಶಿಫಾರಸ್ಸು ಮಾಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ವಿಧಾನ ಸಭೆಯ ಕಲಾಪದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸುಳ್ಯ ವಿಧಾನಸಭಾ ಸದಸ್ಯೆ ಭಾಗೀರಥಿ ಇವರು ರಬ್ಬರ್ ಬೆಳೆಯನ್ನು ತೋಟಗಾರಿಕಾ ಬೆಳೆಗಳ ವ್ಯಾಪ್ತಿಗೆ ಒಳಪಡಿಸಿ ಬೆಳೆ ಸ್ಥಿರೀಕರಣ ನಿಧಿ ಸ್ಥಾಪಿಸಿ ರಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಂತೆ ಹಾಗೂ ರಬ್ಬರ್ ಕೃಷಿಗೆ ಹವಾಮಾನ ಆಧಾರಿತ ವಿಮಾ ಸೌಲಭ್ಯ ಒದಗಿಸುವಂತೆ ಕೋರಿದರು.
ವಾಣಿಜ್ಯ ಬೆಳೆಯಾದ ರಬ್ಬರ್ ನ ಬೆಲೆ ವಿಷಯವು ಬಹುಪಾಲು ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತದೆ. ರಬ್ಬರ್ ಬೆಳೆಯವ ರೈತರು ತೊಂದರೆಗಳನ್ನು ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ರಬ್ಬರ್ ಬೆಳೆಯು ಬಹುವಾರ್ಷಿಕ ವಾಣಿಜ್ಯ ಬೆಳೆಯಾಗಿದ್ದು, ಪ್ಲಾಂಟೇಷನ್ ಬೆಳೆಯಾಗಿದೆ. ಈ ಬೆಳೆಯು ಕೇಂದ್ರ ಸರ್ಕಾರದ ಸಂಸ್ಥೆಯಾದ ರಬ್ಬರ್ ಮಂಡಳಿ ವ್ಯಾಪ್ತಿಗೆ ಒಳಪಟ್ಟಿದ್ದು, ರಬ್ಬರ್ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ರಬ್ಬರ್ ಮಂಡಳಿ ಅನುಷ್ಠಾನಗೊಳಿಸುತ್ತಿದೆ.












Click it and Unblock the Notifications