'ಇವರೂ ಬಿಹಾರಕ್ಕೆ ಹೋಗಲೇಬೇಕಿತ್ತಾ?'
ಬೆಂಗಳೂರು, ನವೆಂಬರ್ 21 : 'ಇವರೂ ಬಿಹಾರಕ್ಕೆ ಹೋಗಲೇಬೇಕಿತ್ತಾ?, ನೋಡೀಪ್ಪಾ, ಬಿಹಾರಕ್ಕೆ ಹೋಗದಿದ್ದರೆ ಅವರ ಗಂಟಲಲ್ಲಿ ಅನ್ನ ಇಳಿಯುವುದಿಲ್ಲವಂತೆ' ಇದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸಚಿವರ ಗೈರು ಹಾಜರಿ ಬಗ್ಗೆ ಸದನದಲ್ಲಿ ವ್ಯಂಗ್ಯವಾಡಿದ ರೀತಿ.
ಶುಕ್ರವಾರದ ವಿಧಾನಸಭೆ ಕಲಾಪಕ್ಕೆ ಲೋಕೋಪಯೋಗಿ ಸಚಿವ ಎಚ್.ಸಿ.ಮಹಾದೇವಪ್ಪ ಅವರು ಗೈರು ಹಾಜರಾಗಿದ್ದರು. ಇದರಿಂದ ಅಸಮಾಧಾನಗೊಂಡ ಸ್ಪೀಕರ್ 'ಇವರೂ ಬಿಹಾರಕ್ಕೆ ಹೋಗಲೇಬೇಕಿತ್ತಾ?' ಎಂದು ಪ್ರಶ್ನಿಸಿದರು. ['ಮಂತ್ರಿಯಾಗುವುದೇ ಪುಣ್ಯ, ಸರಿಯಾಗಿ ಕೆಲಸ ಮಾಡಿ']

ಕಲಾಪದಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಐಹೊಳೆ ಡಿ.ಮಹಾಲಿಂಗಪ್ಪ ಅವರು ಪ್ರಶ್ನೆ ಕೇಳಿದರು. ಆದರೆ, ಅದಕ್ಕೆ ಉತ್ತರಿಸಲು ಮಹದೇವಪ್ಪ ಅವರ ಬದಲು ಸಹಕಾರಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಎದ್ದುನಿಂತರು. [ಬಿಹಾರದಲ್ಲಿ ಮಹಾಮೈತ್ರಿಕೂಟ ಪರ್ವ ಆರಂಭ]
ಆಗ ಅಸಮಾಧಾನಗೊಂಡ ಸ್ಪೀಕರ್ ಸಚಿವರು ಎಲ್ಲಿ? ಎಂದು ಪ್ರಶ್ನಿಸಿದರು. ಆಗ ಬಿಹಾರಕ್ಕೆ ನಿತೀಶ್ ಕುಮಾರ್ ಅವರ ಪ್ರಮಾಣ ವಚನ ಸಮಾರಂಭಕ್ಕೆ ಸಿದ್ದರಾಮಯ್ಯ ಅವರ ಜೊತೆ ಹೋಗಿದ್ದಾರೆ ಎಂಬುದು ತಿಳಿದುಬಂದಿತು. ಇದರಿಂದ ಸ್ಪೀಕರ್ ಸಣ್ಣಗೆ ಸಿಟ್ಟು ಮಾಡಿಕೊಂಡರು.
ಲೋಕೋಪಯೋಗಿ ಸಚಿವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ವಿರೋಧ ಪಕ್ಷದವರತ್ತ ತಿರುಗಿ, 'ನೋಡೀಪ್ಪಾ, ಬಿಹಾರಕ್ಕೆ ಹೋಗದಿದ್ದರೆ ಅವರ ಗಂಟಲಲ್ಲಿ ಅನ್ನ ಇಳಿಯುವುದಿಲ್ಲವಂತೆ' ಎಂದು ವ್ಯಂಗ್ಯವಾಗಿ ಹೇಳಿದರು.

ಸಿದ್ದರಾಮಯ್ಯ ತೆರಳಿದ್ದರು : ಶುಕ್ರವಾರ ಬಿಹಾರದಲ್ಲಿ ಜೆಡಿಯು, ಆರ್‌ಜೆಡಿ ಮಹಾಮೈತ್ರಿ ಕೂಟ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಶುಕ್ರವಾರ ನಿತೀಶ್ ಕುಮಾರ್ ಅವರು 5ನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಪಾಟ್ನಾದ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತೆರಳಿದ್ದರು.












Click it and Unblock the Notifications