ಸೋಯಾ, ಸೂರ್ಯಕಾಂತಿ, ಹೆಸರು ಖರೀದಿ ಆರಂಭ: ಮಹತ್ವದ ಮಾಹಿತಿ ಇಲ್ಲಿದೆ
ಬೆಂಗಳೂರು, ಅಕ್ಟೋಬರ್ 28: ಇಂದಿನಿಂದ ಬೆಂಬಲ ಬೆಲೆಯಲ್ಲಿ (ಅಕ್ಟೋಬರ್ 28) ಸೋಯಾಬಿನ್, ಸೂರ್ಯಕಾಂತಿ ಮತ್ತು ಹೆಸರುಕಾಳು ಖರೀದಿ ಆರಂಭವಾಗಲಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. ಎಲ್ಲೆಡೆ ಈಗಾಗಲೇ ಖರೀದಿ ಕೇಂದ್ರಗಳನ್ನು ತೆರದು ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ. ಸೋಯಾಬಿನ್ ಖರೀದಿಗೆ ಒಟ್ಟು 206 ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, 19,325 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ಬೀದರ್ ಜಿಲ್ಲೆಯಲ್ಲಿ 116 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, 13,033 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 3,047, ಧಾರವಾಡ ಜಿಲ್ಲೆಯಲ್ಲಿ 2,164 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೆಸರುಕಾಳು ಖರೀದಿಗೆ ಒಟ್ಟು 211 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, 16,578 ರೈತರು ನೋಂದಣಿ ಮಾಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚು (6362) ರೈತರು ನೋಂದಣಿ ಮಾಡಿಸಿದ್ದಾರೆ.

ಸೂರ್ಯಕಾಂತಿ ಖರೀದಿಗೆ 120 ಖರೀದಿ ಕೇಂದ್ರಗಳನ್ನು ಆರಂಭಿಸಿದ್ದು, 5,341 ರೈತರು ನೋಂದಣಿ ಮಾಡಿಸಿದ್ದಾರೆ. ಉದ್ದಿನಕಾಳು ಖರೀದಿಗೆ 134 ಖರೀದಿ ಕೇಂದ್ರಗಳನ್ನು ಆರಂಭಿಸಿದ್ದು, 5,274 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ರಾಜ್ಯದಲ್ಲಿ ಘಟಕ ಸ್ಥಾಪನೆಗೆ ಜವಳಿ ಉದ್ಯಮಿಗಳ ಆಕರ್ಷಣೆಗೆ ಅಗತ್ಯ ನೆರವು ಕೋರಿ ಶೀಘ್ರದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಿದ್ದು, ಮಧ್ಯಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿನ ನೀತಿಯ ವರದಿ ಸಿದ್ದಪಡಿಸಿ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಅವರು ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಾಜ್ಯಕ್ಕೆ ನೆರೆ ರಾಜ್ಯಗಳ ಜವಳಿ ಉದ್ಯಮಿಗಳನ್ನು ಆಕರ್ಷಣೆ ಮಾಡಲು ಇರುವ ಸಾಧ್ಯತೆಗಳ ಕುರಿತು ವರದಿ ಸಿದ್ಧಪಡಿಸಿ, ಮಧ್ಯಪ್ರದೇಶ, ತಮಿಳು ನಾಡು ರಾಜ್ಯಗಳು ಉದ್ಯಮಿಗಳಿಗೆ ಯಾವ ಯಾವ ಸವಲತ್ತುಗಳನ್ನು ನೀಡುತ್ತಿವೆ ಎಂಬ ಮಾಹಿತಿ ಈ ವರದಿಯಲ್ಲಿರಲಿ ಎಂದು ವಿಧಾನಸೌಧದಲ್ಲಿ ನಡೆದ ಕರ್ನಾಟಕ ನೂತನ ಜವಳಿ ಮತ್ತು ಸಿದ್ದ ಉಡುಪು ನೀತಿ ಅನುಷ್ಠಾನ ಕುರಿತ ಉನ್ನತ ಮಟ್ಟದ ಸಬಲೀಕರಣ ಸಮಿತಿ ಸಭೆಯಲ್ಲಿ ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಾಂಗ್ಲಾ ದೇಶದಲ್ಲಿನ ಪ್ರತಿಕೂಲ ಪರಿಸ್ಥಿತಿ ಪರಿಣಾಮ ಅಲ್ಲಿನ ಜವಳಿ ಉದ್ಯಮ ಬೇರೆಡೆಗೆ ಸ್ಥಳಾಂತರವಾಗುತ್ತಿದ್ದು, ಅಲ್ಲಿನ ಉದ್ಯಮಿಗಳನ್ನು ಕರ್ನಾಟಕಕ್ಕೆ ಸೆಳೆಯುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ, ತಮಿಳು ನಾಡಿನಲ್ಲಿ ಉದ್ಯಮ ಸುಸ್ಥಿತಿಯಲ್ಲಿದೆ ಎಂಬ ವರದಿ ಇದೆ. ಆ ರಾಜ್ಯದಲ್ಲಿ ಜವಳಿ ಉದ್ಯಮಿಗಳಿಗೆ ಅಲ್ಲಿನ ಸರ್ಕಾರ ಏನೇನು ಸವಲತ್ತುಗಳನ್ನು ನೀಡುತ್ತಿದೆ. ಯಾವ ಕಾರಣಕ್ಕೆ ಉದ್ಯಮಿಗಳು ತಮಿಳುನಾಡಿನಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರುತ್ತಿದ್ದಾರೆ. ಅವರನ್ನು ಕರ್ನಾಟಕ ರಾಜ್ಯದತ್ತ ಸೆಳೆಯಲು ಏನು ಮಾಡಬೇಕು ಎಂದು ಅಧ್ಯಯನ ಮಾಡಿ ವರದಿ ರೂಪಿಸಿ ಎಂದು ಸೂಚನೆ ನೀಡಿದರು.












Click it and Unblock the Notifications