ಸೌಜನ್ಯ ಪ್ರಕರಣ: ಹೆಚ್ಚಿನ ತನಿಖೆಗೆ ಸಿಬಿಐ ವಿಶೇಷ ನ್ಯಾಯಾಲಯ ಆದೇಶ

Subscribe to Oneindia Kannada

ಬೆಂಗಳೂರು, ಫೆಬ್ರವರಿ 8: ಧರ್ಮಸ್ಥಳ ಗ್ರಾಮದ ಪಾಂಗಳ ನಿವಾಸಿಯಾಗಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಹೆಚ್ಚಿನ ತನಿಖೆಗೆ ಆದೇಶ ನೀಡಿದೆ. ಈ ಮೂಲಕ ಪ್ರಕರಣ ಮತ್ತೆ ಜೀವಂತವಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ದೇಶದ ಪ್ರಖ್ಯಾತ ಸಂಸ್ಥೆ ಸಿಬಿಐ ಸಲ್ಲಿಸಿದ ಜಾರ್ಜ್ ಶೀಟ್ ನಲ್ಲಿ ತಪ್ಪುಗಳಿವೆ ಎಂದು ಸೌಜನ್ಯ ತಂದೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸೌಜನ್ಯ ತಂದೆ ಚಂದಪ್ಪ ಗೌಡ ಸಲ್ಲಿಸಿದ ಅರ್ಜಿ ಪುರಸ್ಕರಿಸಿದ ಸಿಬಿಐ ನ್ಯಾಯಾಲಯ ಹೆಚ್ಚುವರಿ ತನಿಖೆ ನಡೆಸುವಂತೆ ಸಿಬಿಐಗೆ ಆದೇಶ ನೀಡಿದೆ.[ಧರ್ಮಸ್ಥಳ ಸೌಜನ್ಯ ಅತ್ಯಾಚಾರ, ಕೊಲೆ: ಸಿಬಿಐ ಅಂತಿಮ ವರದಿ ಸಲ್ಲಿಕೆ]

Soujanya rape and murder case: CBI Special court orders further probe

ಪ್ರಕರಣದ ಹಿನ್ನಲೆ

ನಾಲ್ಕೂವರೆ ವರ್ಷಗಳ ಹಿಂದೆ (ಅಕ್ಟೋಬರ್ 10, 2012) ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಕೊಲೆಯಾಗಿದ್ದರು. ಆಕೆಯ ಮೃತ ದೇಹ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸಮೀಪ ಮಣ್ಣ ಸಂಕ ಎಂಬಲ್ಲಿ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮರು ದಿನ ಸಂಜೆ ವೇಳೆಗೆ ಸಂತೋಷ್ ರಾವ್ ಎಂಬಾತನನ್ನು ಧರ್ಮಸ್ಥಳ ದೇವಾಲಯದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ನಂತರ ಪೊಲೀಸರು ಈತನೇ ಸೌಜನ್ಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಹೇಳಿದ್ದರು.[ಸೌಜನ್ಯ ಹತ್ಯೆ ಆರೋಪಿಗಳಿಗೆ ಶಿಕ್ಷೆ ಯಾವಾಗ?]

ಆದರೆ ಪ್ರಕರಣದ ತನಿಖೆ ಬಗ್ಗೆ ಜನ ಅನುಮಾನ ವ್ಯಕ್ತಪಡಿಸಿದ್ದರಿಂದ ರಾಜ್ಯ ಸರಕಾರ ತನಿಖೆಯನ್ನು ಸಿಐಡಿಗೆ ವಹಿಸಿತು. ಒಂದು ವರ್ಷದಲ್ಲಿ ಸಿಐಡಿ ತನಿಖೆಯಲ್ಲಿ ಯಾವುದೇ ಪ್ರಗತಿ ಸಾಧಿಸದ ಹಿನ್ನಲೆಯಲ್ಲಿ ಭಾರೀ ಪ್ರತಿಭಟನೆಗಳು ಹುಟ್ಟಿಕೊಂಡವು. ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬ ಸದಸ್ಯರ ಮೇಲೆ ಗುರುತರ ಆರೋಪಗಳು ಕೇಳಿಬಂದವು. ಕೊನೆಗೆ ಒತ್ತಡ ಹೆಚ್ಚಾಗಿ ಅನಿವಾರ್ಯವಾಗಿ ಸರಕಾರ ಪ್ರಕರಣವನ್ನು 2013 ನವೆಂಬರಿನಲ್ಲಿ ಸಿಬಿಐಗೆ ವಹಿಸಿತು.

ಪ್ರಕರಣ ಕೈಗೆತ್ತಿಕೊಂಡ ಸಿಬಿಐ 2015ರ ಅಕ್ಟೋಬರಿನಲ್ಲಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿತು. ಸಿಬಿಐ ತನ್ನ ಜಾರ್ಜ್ ಶೀಟಿನಲ್ಲಿಯೂ ತನಿಖೆಯಿಂದ ಸಂತೋಷ್ ರಾವ್ ಸೌಜನ್ಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂಬುದು ದೃಢಪಟ್ಟಿದೆ ಎಂದಿತ್ತು.

ಸಿಬಿಐ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಆರಂಭವಾಗಿ 14 ಜನ ಸಾಕ್ಷಿಗಳ ಹೇಳಿಕೆಯನ್ನೂ ಇಲ್ಲಿವರೆಗೆ ದಾಖಲಿಸಿಕೊಳ್ಳಲಾಗಿದೆ. ಇದೀಗ ಸೌಜನ್ಯ ತಂದೆ ಚಂದಪ್ಪ ಗೌಡ ಅರ್ಜಿಯ ಮೇರೆಗೆ ಕೋರ್ಟ್ ಹೆಚ್ಚುವರಿ ತನಿಖೆಗೆ ಆದೇಶ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
CBI special court on Tuesday ordered further investigation in the rape and murder case of Soujanya. Soujanya was a II PU student of Shri Dharmastala Manjunatheswara college, Ujire, who was found dead near Dharmasthala on Oct 10, 2012.
Please Wait while comments are loading...