ಆರ್‌ಟಿಒ ಕಚೇರಿಗಳಲ್ಲಿ ಇನ್ಮುಂದೆ ಹೊಸ ವ್ಯವಸ್ಥೆ
ರಾಜ್ಯದಲ್ಲಿರುವ ಎಲ್ಲ ಆರ್‌ಟಿಒ ಕಚೇರಿಗಳಲ್ಲಿ ಶೀಘ್ರದಲ್ಲೇ ಒಂದು ಬದಲಾವಣೆಯಾಗಲಿದೆ. ಆರ್‌ಟಿಒ ಕಚೇರಿಗಳನ್ನು ಪರಿಸರಸ್ನೇಹಿಗೊಳಿಸುವ ಉದ್ದೇಶದೊಂದಿಗೆ ವಿದ್ಯುತ್ ಬದಲಿಗೆ ಸೌರಶಕ್ತಿಯನ್ನು ಬಳಸಲು ಸಾರಿಗೆ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿರುವುದಾಗಿ ವರದಿಯಾಗಿದೆ. ಇದಕ್ಕಾಗಿ ಒಂದು ಯೋಜನೆ ಕೂಡ ಜಾರಿಯಾಗಲಿದ್ದು, ಮೊದಲ ಭಾಗವಾಗಿ 20 ಆರ್‌ಟಿಒ ಕಚೇರಿಗಳಲ್ಲಿ ಈ ಬದಲಾವಣೆ ಆಗಲಿದೆ.
ಈ ವ್ಯವಸ್ಥೆಯನ್ನು ರಾಜ್ಯಾದ್ಯಂತ ಜಾರಿ ಮಾಡುವ ಮುನ್ನ ಮೊದಲಿಗೆ 20 ಆರ್‌ಟಿಒ ಕಚೇರಿಗಳಲ್ಲಿ ಪ್ರಾಯೋಗಿಕವಾಗಿ ಸೋಲಾರ್ ಬಳಕೆಯಾಗಲಿದೆ. ಆ ನಂತರ ರಾಜ್ಯದ ಎಲ್ಲ ಆರ್‌ಟಿಒ ಕಚೇರಿಗಳಿಗೂ ಈ ಯೋಜನೆ ವಿಸ್ತರಣೆಯಾಗಲಿದೆ. ಮೊದಲಿಗೆ ಬೆಂಗಳೂರಿನಲ್ಲಿರುವ ಎಚ್‌ಎಸ್‌ಆರ್ ಲೇಔಟ್ ಆರ್‌ಟಿಒ ಕಚೇರಿಯಲ್ಲಿ ಸೌರಶಕ್ತಿಯ ಘಟಕ ಅಳವಡಿಕೆಯಾಗಲಿದೆ. ನಂತರ ಬಾಕಿ 19 ಕಚೇರಿಗಳಲ್ಲಿ ಸೌರಶಕ್ತಿ ಘಟಕ ಅಳವಡಿಕೆ ಕಾರ್ಯ ನಡೆಯಲಿದೆ ಎಂದು ಸಾರಿಗೆ ಇಲಾಖೆ ಹೇಳಿದೆ.

ಎಲ್ಲೆಲ್ಲಿ ಈ ಯೋಜನೆ ಜಾರಿ?: ಬೆಂಗಳೂರಿನ ಕೆ.ಆರ್.ಪುರ, ಎಲೆಕ್ಟ್ರಾನಿಕ್ ಸಿಟಿ, ಕಸ್ತೂರಿನಗರ, ಜ್ಞಾನಭಾರತಿ, ಯಲಹಂಕ, ದೇವನಹಳ್ಳಿ, ತುಮಕೂರು, ಚಿಂತಾಮಣಿ, ನೆಲಮಂಗಲ, ಮೈಸೂರು ಪೂರ್ವ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, , ವಿಜಯಪುರ, ಬಾಗಲಕೋಟೆ, ಮಂಗಳೂರು, ಧಾರವಾಡ ಪಶ್ಚಿಮ, ಬಳ್ಳಾರಿ ಹಾಗೂ ರಾಯಚೂರಿನ ಆರ್‌ಟಿಒ ಕಚೇರಿಗಳಲ್ಲಿ ಸೌರಶಕ್ತಿ ವಿದ್ಯುತ್ ಉತ್ಪಾದನಾ ಘಟಕ ಬರಲಿದೆ ಎನ್ನಲಾಗಿದೆ.
ಆರ್‌ಟಿಒ ಕಚೇರಿಗಳಲ್ಲಿ ವಿದ್ಯುತ್ ಬಳಕೆಯೂ ಹೆಚ್ಚಾಗಿರುವುದರಿಂದ ಅದನ್ನು ಸೋಲಾರ್ ಶಕ್ತಿಗೆ ಪರಿವರ್ತಿಸಿದರೆ, ವಿದ್ಯುತ್ ಮೇಲಿನ ಅವಲಂಬನೆ ತಗ್ಗಲಿದೆ. ಜೊತೆಗೆ ಅಗತ್ಯಕ್ಕೆ ಬೇಕಾದಷ್ಟು ವಿದ್ಯುತ್ ಸೋಲಾರ್ ಘಟಕದಿಂದಲೇ ಲಭ್ಯವಾಗಲಿದೆ ಎಂದು ಈ ಯೋಜನೆ ರೂಪಿಸಿರುವುದಾಗಿ ತಿಳಿದುಬಂದಿದೆ.

ಇನ್ನು ರಾಜ್ಯದಲ್ಲಿರುವ ಬಹುತೇಕ ಆರ್‌ಟಿಒ ಕಚೇರಿಗಳು ಸ್ವಂತ ಜಾಗದಲ್ಲೇ ಇರುವುದರಿಂದ ಈ ಎಲ್ಲ ಆರ್‌ಟಿಒಗಳಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿದರೆ, ವಿದ್ಯುತ್ ಬಿಲ್ ಖರ್ಚಿನ ಹೊರೆಯೂ ತಗ್ಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಪ್ರಾಯೋಗಿಕವಾಗಿ ಜಾರಿಯಾಗುವ ಯೋಜನೆಯಿಂದ ಒಂದು ಆರ್‌ಟಿಒ ಕಚೇರಿ ವಿದ್ಯುತ್ ಖರ್ಚಿಗೆ ಎಷ್ಟು ಹಣ ಖರ್ಚು ಮಾಡುತ್ತದೆ? ಹಾಗೂ ಸೋಲಾರ್ ಅಳವಡಿಸುವುದರಿಂದ ಎಷ್ಟು ಉಳಿತಾಯ ಆಗಲಿದೆ ಎಂದು ಅಂದಾಜು ಸಿಗಲಿದೆ. ಇದನ್ನು ಆಧರಿಸಿ ಎಲ್ಲ ಕಚೇರಿಗಳಿಗೂ ಸೋಲಾರ್ ಪ್ಯಾನಲ್ ಅಳವಡಿಕೆಯಾಗಲಿದೆ.

ಅಲ್ಲದೆ ಸೋಲಾರ್ ಉತ್ಪಾದನೆಗೆ ತಗುಲುವ ವೆಚ್ಚವು ಕಲ್ಲಿದ್ದಲಿಗಿಂತ ಹಾಗೂ ಜಲವಿದ್ಯುತ್ ಉತ್ಪಾದನೆಯ ವೆಚ್ಚಕ್ಕಿಂತ ಕಡಿಮೆ ಆಗಲಿದೆ. ಈ ಉದ್ದೇಶದಿಂದ ಸೋಲಾರ್ ಬಳಕೆಗೆ ಚಿಂತನೆ ನಡೆಸಲಾಗಿದ್ದು, ಇದರಿಂದ ಪರಿಸರಕ್ಕೂ ಯಾವುದೇ ತೊಂದರೆ ಆಗುವುದಿಲ್ಲ ಎಂದು ಹೇಳಲಾಗಿದೆ.
ಈ ಬಗ್ಗೆ ಮಾತನಾಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಅಳವಡಿಸುವ ಸೋಲಾರ್ ಘಟಕಗಳಲ್ಲಿ ಒಂದು ವೇಳೆ ಹೆಚ್ಚಿನ ವಿದ್ಯುತ್ ಉತ್ಪಾದನೆಯಾದರೆ, ಅದನ್ನು ಬೇರೆ ಉದ್ದೇಶಗಳಿಗೂ ಬಳಸಬಹುದು. ಈ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಕೂಡ ಮಾಡಬಹುದು. ಸೋಲಾರ್ ಘಟಕಗಳಿಗೆ ಗ್ರಿಡ್ ಕನೆಕ್ಷನ್ ನೀಡಲಾಗುವುದು. ಘಟಕಗಳಿಂದ ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡುವುದರಿಂದ ಆರ್‌ಟಿಒ ಕಚೇರಿಗಳಿಗೆ ಲಾಭ ಕೂಡ ಹೆಚ್ಚಾಗಲಿದೆ ಎಂದು ವಿವರಿಸಿದ್ದಾರೆ.












Click it and Unblock the Notifications