ಭವಾನಿ ರೇವಣ್ಣ ಹುಡುಕಾಟಕ್ಕೆ ಎಸ್‌ಐಟಿಯಿಂದ 4 ವಿಶೇಷ ತಂಡ ರಚನೆ
ಬೆಂಗಳೂರು, ಜೂನ್ 03: ಹಾಸನ ಸಂಸದ ಪ್ರಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣಗಾಗಿ ಎಸ್‌ಐಟಿ ಹುಡುಕಾಟ ನಡೆಸುತ್ತಿದೆ. ಮೈಸೂರು ಜಿಲ್ಲೆಯ ಕೆ.ಆರ್. ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಅವರು ಬಂಧನ ಭೀತಿಯಲ್ಲಿದ್ದು, ನಿರೀಕ್ಷಣಾ ಜಾಮೀನಿಗಾಗಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಕಳೆದ ಶುಕ್ರವಾರ ಭವಾನಿ ರೇವಣ್ಣ ಜಾಮೀನು ಅರ್ಜಿ ತಿರಸ್ಕಾರವಾಗಿದೆ. ಬಳಿಕ ಎಸ್‌ಐಟಿ ಭವಾನಿ ರೇವಣ್ಣಗಾಗಿ ಹುಡುಕಾಟ ನಡೆಸುತ್ತಿದೆ. ಶನಿವಾರ ಹೊಳೆನರಸೀಪುರ ನಿವಾಸದಲ್ಲಿ ಸಂಜೆಯ ತನಕ ಕಾದರೂ ಸಹ ಭವಾನಿ ರೇವಣ್ಣ ವಿಚಾರಣೆಗೆ ಆಗಮಿಸಿಲ್ಲ.

ಬಂಧನ ಭೀತಿಯಲ್ಲಿರುವ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನಿಗಾಗಿ ಕರ್ನಾಟಕ ಹೈಕೋರ್ಟ್‌ಗೆ ಶನಿವಾರ ಅರ್ಜಿ ಸಲ್ಲಿಸಿದ್ದಾರೆ. ಇದೇ ಅಪಹರಣ ಪ್ರಕರಣದಲ್ಲಿ ಎಸ್‌ಐಟಿ ಎಚ್. ಡಿ. ರೇವಣ್ಣ ಬಂಧಿಸಿತ್ತು, ಸದ್ಯ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
4 ತಂಡಗಳು ರಚನೆ: ಭವಾನಿ ರೇವಣ್ಣ ಬಂಧನಕ್ಕಾಗಿಯೇ ಎಸ್‌ಐಟಿ 4 ವಿಶೇಷ ತಂಡಗಳನ್ನು ರಚನೆ ಮಾಡಿದೆ. ಮತ್ತೊಂದು ಕಡೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ಆರೋಪಿ, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಎಸ್ಐಟಿ ವಶದಲ್ಲಿದ್ದು, ಅವರ ವಿಚಾರಣೆ ಸಹ ನಡೆಯುತ್ತಿದೆ.
ಎಚ್. ಡಿ. ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂಬುದು ಆರೋಪವಾಗಿದೆ. ಈ ದೂರುದಾರ ಮಹಿಳೆಯನ್ನು ಅಪಹರಣ ಮಾಡಲಾಗಿತ್ತು. ಈ ಕುರಿತು ಕೆ.ಆರ್. ನಗರ ಠಾಣೆಯಲ್ಲಿ ಮಹಿಳೆಯ ಪುತ್ರ ಅಪಹರಣ ಪ್ರಕರಣ ದಾಖಲಿಸಿದ್ದರು.
ಸರ್ಕಾರ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಪ್ರಕರಣದ ತನಿಖೆಗೆ ಎಸ್‌ಐಟಿ ರಚನೆ ಮಾಡಿತು. ಬಳಿಕ ಈ ಪ್ರಕರಣದ ತನಿಖೆಯನ್ನು ಸಹ ಕೆ. ಆರ್. ನಗರ ಪೊಲೀಸ್ ಠಾಣೆಯಿಂದ ಎಸ್‌ಐಟಿಗೆ ಹಸ್ತಾಂತರ ಮಾಡಲಾಗಿದೆ.
ಶನಿವಾರ ಎಸ್‌ಐಟಿ ವಿಚಾರಣೆಗೆ ಆಗಮಿಸುತ್ತದೆ. ಹೊಳೆನರಸೀಪುರ ನಿವಾಸದಲ್ಲಿ ನೀವು ಹಾಜರಿರಬೇಕು ಎಂದು ಎಸ್‌ಐಟಿ ಭವಾನಿ ರೇವಣ್ಣಗೆ ನೋಟಿಸ್ ನೀಡಿತ್ತು. ಶನಿವಾರ ಬೆಳಗ್ಗೆ ಎಸ್‌ಐಟಿ ಅಧಿಕಾರಿಗಳು ನಿವಾಸಕ್ಕೆ ಆಗಮಿಸಿದ್ದರು.
ಆದರೆ ಬೆಳಗ್ಗೆಯಿಂದ ಸಂಜೆಯ ತನಕ ಕಾದರೂ ಸಹ ಶನಿವಾರ ಹೊಳೆನರಸೀಪುರ ನಿವಾಸಕ್ಕೆ ಭವಾನಿ ರೇವಣ್ಣ ಆಗಮಿಸಲೇ ಇಲ್ಲ. ಆಗಲೇ ಎಸ್‌ಐಟಿ ಅಧಿಕಾರಿಗಳು ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ತೀರ್ಮಾನಿಸಿದ್ದು, ಹುಡುಕಾಟ ಆರಂಭಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣ ಬೆಳಕಿಗೆ ಬಂದ ಬಳಿಕ ಎಚ್. ಡಿ. ರೇವಣ್ಣ ಕುಟುಂಬ ಹೊಳೆನರಸೀಪುರ ನಿವಾಸದಲ್ಲಿಲ್ಲ. ರೇವಣ್ಣ ಅವರು ಹಾಸನಕ್ಕೆ ಹಲವು ಬಾರಿ ಭೇಟಿ ನೀಡಿದರೂ ಸಹ ಬೆಂಗಳೂರಿನ ನಿವಾಸಕ್ಕೆ ವಾಪಸ್ ಆಗುತ್ತಿದ್ದಾರೆ.
ಮತ್ತೊಂದು ಕಡೆ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಜೂನ್ 6ರ ತನಕ ಎಸ್ಐಟಿ ವಶಕ್ಕೆ ನೀಡಲಾಗಿದೆ. ಆದರೆ ವಿಚಾರಣೆಗೆ ಅವರು ಸಹಕಾರ ನೀಡುತ್ತಿಲ್ಲ ಎಂಬುದು ಆರೋಪವಾಗಿದೆ. ಅವರನ್ನು ಹೊಳೆನರಸೀಪುರಕ್ಕೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಸಹ ಮಾಡಬೇಕಿದೆ. ಆದರೆ ಈ ಪ್ರಕ್ರಿಯೆ ಇನ್ನೂ ಬಾಕಿ ಇದೆ.
ಭವಾನಿ ರೇವಣ್ಣ ಕಳೆದ 15 ದಿನಗಳಿಂದ ಎಲ್ಲೂ ಕಾಣಿಸಿಕೊಂಡಿಲ್ಲ. ಬೆಂಗಳೂರಿನ ಜನಪ್ರತಿಧಿಗಳ ವಿಶೇಷ ನ್ಯಾಯಾಲಯಕ್ಕೆ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಆ ಅರ್ಜಿಯನ್ನು ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಆದ್ದರಿಂದ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಅರ್ಜಿಯ ವಿಚಾರಣೆ ಬಾಕಿ ಇದೆ. ಭವಾನಿ ರೇವಣ್ಣ ಎಲ್ಲಿದ್ದಾರೆ? ಎಂಬುದು ಎಲ್ಲರ ಪ್ರಶ್ನೆಯಾಗಿದೆ.












Click it and Unblock the Notifications