ಲೋಕಾ ಹಗರಣ: ಎಸ್ ಐಟಿ ಕೈ ಸೇರಿದ ಮೊದಲ ದೂರು
ಬೆಂಗಳೂರು, ಜು. 08: ಲೋಕಾಯುಕ್ತ ಹಗರಣಕ್ಕೆ ಸಂಬಂಧಿಸಿ ಅಧಿಕೃತ ತನಿಖೆಗೆ ಆರಂಭ ಸಿಕ್ಕಿದೆ. ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ್ ರಾವ್ ಪುತ್ರ ಅಶ್ವಿನ್ ರಾವ್ ವಿರುದ್ಧ ಸಲ್ಲಿಕೆ ಮಾಡಿರುವ ದೂರು ಅಧಿಕೃತವಾಗಿ ವಿಶೇಷ ತನಿಖಾ ತಂಡದ(ಎಸ್ ಐಟಿ) ಮುಖ್ಯಸ್ಥ ಎಡಿಜಿಪಿ ಕಮಲ್ ಪಂತ್ ಕೈ ಸೇರಿದೆ.
ಬೆಂಗಳೂರು ಉದ್ಯಮಿ ಕೃಷ್ಣಮೂರ್ತಿ ಎಂಬುವರು ಅಶ್ವಿನ್ ರಾವ್ ಮತ್ತು ಭಾಸ್ಕರ್ ರಾವ್ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಜಮೀನು ಪತ್ರ ಮಾಡಿಸಿಕೊಡುತ್ತೇನೆ ಎಂದು ಹೇಳಿ ಅಶ್ವಿನ್ ರಾವ್ ಹಣ ಪಡೆದಿದ್ದಾರೆ ಎಂದು ಕೃಷ್ಣಮೂರ್ತಿ ದೂರಿನಲ್ಲಿ ಆರೋಪಿಸಿದ್ದಾರೆ.[ಲೋಕಾಯುಕ್ತರ ಪದಚ್ಯುತಿ, ಕಾನೂನು ಇಲಾಖೆ ಹೇಳುವುದೇನು?]

ತನಿಖಾ ದಳದ ಇತರ ಅಧಿಕಾರಿಗಳಾಗಿ ಕೆಎಸ್‌ಆರ್‌ಟಿಸಿ ಭದ್ರತಾ ಮತ್ತು ಜಾಗೃತ ದಳದ ನಿರ್ದೇಶಕ (ಡಿಐಜಿ )ಸೌಮೇಂದ್ರ ಮುಖರ್ಜಿ, ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಲಾಬೂರಾಮ್, ಕೇಂದ್ರ ವಿಭಾಗದ ಡಿಸಿಪಿ ಸಂದೀಪ್‌ಪಾಟೀಲ್, ಸಿಐಡಿ ವಿಭಾಗದ ಇಬ್ಬರು ಡಿವೈಎಸ್‌ಪಿ , ಮೂವರು ಇನ್ಸ್‌ಪೆಕ್ಟರ್‌ಗಳು, ಇಬ್ಬರು ಸಬ್‌ಇನ್ಸ್‌ಪೆಕ್ಟರ್ ಸೇರಿದಂತೆ ಒಟ್ಟು 12 ಮಂದಿ ಇರಲಿದ್ದಾರೆ.
ಸಿಸಿಬಿಯಿಂದ ಮೊದಲು ಪ್ರಕರಣ ತನಿಖೆ ಮಾಡಲಾಗುವುದು ಎಂದು ಹೇಳಾಗಿತ್ತು. ಆದರೆ ಇದಕ್ಕೆ ಕೆಲ ವಿರೋಧಗಳು ಎದುರಾದ ಹಿನ್ನೆಲೆಯಲ್ಲಿ ಸರ್ಕಾರ ವಿಶೇಷ ತನಿಖಾ ದಳದ ನೇಮಕ ಮಾಡಿತ್ತು.[ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಾರಿದ್ದ ಅಶ್ವಿನ್ ರಾವ್]
ಭಾಸ್ಕರ್ ರಾವ್ ಪುತ್ರ ಅಶ್ವಿನ್ ರಾವ್ ನಕಲಿ ದಾಖಲೆ ಸೃಷ್ಟಿಸಿ ಭೂಮಿ ಮಾರಾಟ ಮಾಡಿದ ಪ್ರಕರಣದ ವಿಚಾರಣೆಯನ್ನು ಮೊದಲು ತನಿಖಾ ತಂಡ ಕೈಗೆತ್ತಿಕೊಳ್ಳಲಿದೆ ಎಂದು ಹೇಳಲಾಗಿದೆ.
ರಾಜ್ಯಾದ್ಯಂತ ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರ್ ರಾವ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿವೆ. ರಜೆ ಮೇಲೆ ತೆರಳಿರುವ ಲೋಕಾಯುಕ್ತ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications