ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಕೋಲಾರಕ್ಕೆ ಬರುವುದಿಲ್ಲ: ವೈ.ಎ.ನಾರಾಯಣಸ್ವಾಮಿ
ಕೋಲಾರ,ಏಪ್ರಿಲ್5: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕ್ಷೇತ್ರ ವಿಚಾರ. ಈಗಾಗಲೇ ಕಾಂಗ್ರೆಸ್ ಮೊದಲ ಪಟ್ಟಿ ಘೋಷಣೆಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ವರುಣಾ ಕ್ಷೇತ್ರದಿಂದ ಟಿಕೆಟ್ ನೀಡಿದೆ.
ಇನ್ನೂ ಈ ಬಾರಿಯ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದಲೂ ಸ್ಪರ್ಧೆಗೆ ಟಿಕೆಟ್ ಕೇಳಿದ್ದಾರೆ. ಈ ವಿಚಾರವಾಗಿಯೂ ಬಿಜೆಪಿ ಪಾಳಯದಲ್ಲಿ ಸಾಕಷ್ಟು ಟೀಕೆಗಳು ಕೇಳಿ ಬರುತ್ತಿವೆ.

ಇನ್ನೂ ಈ ವಿಚಾರವಾಗಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ನಿಲ್ಲುವುದಾಗಿ ಹೇಳಿದ್ದಾರೆ. ಅವರು ಯಾವುದೇ ಕಾರಣಕ್ಕೂ ಕೋಲಾರಕ್ಕೆ ಬರುವುದಿಲ್ಲ, ಈ ಬಗ್ಗೆ ಚರ್ಚೆಯೂ ಅವಶ್ಯಕತೆ ಇಲ್ಲ. ಆದ್ರೆ ಮನೆಯವರನ್ನು ಕೇಳಿ ಚುನಾವಣೆಗೆ ನಿಲ್ಲುತ್ತೇನೆ ಅಂತ ಸಿದ್ದರಾಮಯ್ಯ ಹೇಳುವುದು ದುರಂತ ಎಂದು ವ್ಯಂಗ್ಯವಾಡಿದರು.
ಈ ಹಿಂದೆ ಸಿದ್ದರಾಮಯ್ಯ ಅವರು 5 ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದವರು. ಆದ್ರೂ ಸಹ ಸಮೀಕ್ಷೆ ಆಧರಿಸಿ ಚುನಾವಣೆಗೆ ನಿಲ್ಲುತ್ತೇನೆ ಎನ್ನುವ ಮಟ್ಟಕ್ಕೆ ಇಳಿದಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ಗೌರವ ತರುವುದಲ್ಲ. ವಿರೋಧ ಪಕ್ಷದವರಾಗಿದ್ದು, ಅಹಿಂದ ನಾಯಕರಾಗಿದ್ದು ಹಲವು ಭಾಗ್ಯಗಳನ್ನು ಕೊಟ್ಟಿದ್ದೇನೆ ಎನ್ನುತ್ತಾರೆ. ಆದ್ರೂ ಸಹ ಸಮೀಕ್ಷೆ ಆಧಾರದ ಮೇಲೆ ನಿಲ್ಲುವುದಾಗಿ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಅವರ ಮನಸ್ಥಿತಿ ದುರ್ಬಲ ಮನಸ್ಥಿತಿ. ಅವರಿಗೆ ಗಟ್ಟಿತನ ಇಲ್ಲ. ಇದು ಕೊನೆಯ ಚುನಾವಣೆ ಅಂತ ಹಲವು ಬಾರಿ ಹೇಳಿದ್ದಾರೆ. ಈಗಲೂ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಆಗಿದ್ದವರು ಹೀಗೆ ಹೇಳುವುದು ಸಮಂಜಸವಲ್ಲ ಎಂದರು.

ಇನ್ನು ಕೋಲಾರ ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ. ಹೆಬ್ಬಾಳ ಕ್ಷೇತ್ರದಲ್ಲಿ ಮಾತ್ರ ನಾನು ಟಿಕೆಟ್ ಕೇಳಿದ್ದೇನೆ. ಹೈಕಮಾಂಡ್ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ. ಇಲ್ಲ ಅಂದ್ರೆ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು. ಜನಾರ್ದನ ರೆಡ್ಡಿ ಅವರು 2006 ರಲ್ಲಿ ಇದ್ದ ಹಾಗೆ ಅಂದುಕೊಂಡಿದ್ದಾರೆ. ಆ ಜನಾರ್ದನ ರೆಡ್ಡಿನೇ ಬೇರೆ ಈಗಿನ ಜನಾರ್ದನ ರೆಡ್ಡಿಯೇ ಬೇರೆ. ಇವರಿಂದ ಬಿಜೆಪಿ ಪಕ್ಷಕ್ಕೆ ಯಾವುದೇ ತೊಂದರೆ ಇಲ್ಲ. ಬಿಜೆಪಿಗೆ ತನ್ನದೇ ಆದ ಶಕ್ತಿ, ಸಾಮರ್ಥ್ಯ ಇದೆ. ಇಡೀ ದೇಶಾದ್ಯಂತ ಗಟ್ಟಿಯಾಗಿ ಬೇರೂರಿದೆ.
ವರುಣಾದಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧೆ ಮಾಡ್ತಾರೆ ಅನ್ನೋದು ಹೈಕಮಾಂಡ್ ಗೆ ಬಿಟ್ಟಿದ್ದು, ವಿಜಯೇಂದ್ರ ಎಲ್ಲಿ ಸ್ಪರ್ಧೆ ಮಾಡ್ತಾರೆ ಅನ್ನೋದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಬಿಜೆಪಿ ದೊಡ್ಡ ಪಕ್ಷವಾದ್ದರಿಂದ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿರುತ್ತಾರೆ. ಹಾಗಾಗಿ ಸಹಜವಾಗಿಯೇ ಗೊಂದಲಗಳು ಇರುತ್ತವೆ. ಮಾಲೂರು, ಕೆಜಿಎಫ್ ನಲ್ಲಿ ಸಮಸ್ಯೆ ಬಗೆಹರಿಸುತ್ತಾರೆ. ಸಮರ್ಥರಿಗೆ ಟಿಕೆಟ್ ನೀಡಿ ಮತ್ತೊಬ್ಬರನ್ನು ಮನವೊಲಿಸಲಾಗುತ್ತದೆ. ಎಲ್ಲರೂ ಒಟ್ಟಾಗಿ ಚುನಾವಣೆಯನ್ನು ಎದುರಿಸುತ್ತಾರೆ. ಯಾವುದೇ ಗೊಂದಲಗಳು ಇರುವುದಿಲ್ಲ ಎಂದು ಹೇಳಿದರು.












Click it and Unblock the Notifications