ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿಯಲ್ಲ; ಬಿಜೆಪಿ ನಾಯಕನ ಭವಿಷ್ಯ!
ಬೆಂಗಳೂರು, ನವೆಂಬರ್ 15; ಬಾದಾಮಿ ಶಾಸಕ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರಕ್ಕೆ ಭಾನುವಾರ ಭೇಟಿ ನೀಡಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ. 2023ರ ಚುನಾವಣೆಗೆ ಅವರು ಕೋಲಾರದಿಂದಲೇ ಕಣಕ್ಕಿಳಿಯಲಿದ್ದಾರೆ? ಎಂಬ ಸುದ್ದಿಗಳು ಹಬ್ಬಿವೆ. ಇದಕ್ಕೆ ವಿರೋಧ ಪಕ್ಷದ ನಾಯಕರು ಸಹ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಕೋಲಾರಕ್ಕೆ ಭೇಟಿ ನೀಡಿದ ಸಿದ್ದರಾಮಯ್ಯ ದೇವಾಲಯ, ಚರ್ಚ್, ಮದರಸಾಗಳಿಗೆ ಭೇಟಿ ನೀಡಿದ್ದರು. ಡಾ. ಬಿ. ಆರ್. ಅಂಬೇಡ್ಕರ್ ಸೇರಿದಂತೆ ವಿವಿಧ ನಾಯಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು. ಬಳಿಕ ಮಾತನಾಡಿ, "ಕೋಲಾರದಿಂದ ಸ್ಪರ್ಧಿಸಬೇಕು ಎಂಬುದು ಎಲ್ಲರ ಒತ್ತಾಸೆಯಾಗಿದೆ, ಆಗಲ್ಲ ಎನ್ನಲಾರೆ. ನಾನು ಈಗ ನಾಮಪತ್ರ ಸಲ್ಲಿಸಲು ಬಂದಿಲ್ಲ. ಹೈಕಮಾಂಡ್ ಒಪ್ಪಿಗೆ ನೀಡಿ, ನಾಮಪತ್ರ ಸಲ್ಲಿಕೆ ಮಾಡಲು ಬಂದಾಗ ಜೋರಾಗಿ ಚಪ್ಪಾಳೆ ಹೊಡೆಯಿರಿ" ಎಂದು ಹೇಳಿದ್ದರು.
ಕೋಲಾರದಲ್ಲಿ ಬಿಜೆಪಿಯ ಪ್ರಭಾವ ಅಷ್ಟಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸಾಕಷ್ಟು ಪ್ರಭಾವ ಹೊಂದಿವೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನ ಶ್ರೀನಿವಾಸ ಗೌಡ 82,788 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ರಾಜ್ಯಸಭೆಯಲ್ಲಿ ಅಡ್ಡ ಮತದಾನ ಮಾಡಿದ ಬಳಿಕ ಅವರು ಪಕ್ಷದಿಂದ ಉಚ್ಛಾಟನೆಗೊಂಡಿದ್ದಾರೆ. ಅವರು ಸಹ ಕಾಂಗ್ರೆಸ್ ಸೇರುವ ತಯಾರಿಯಲ್ಲಿದ್ದಾರೆ. ಈಗ ಜಿಲ್ಲೆಗೆ ಸಿದ್ದರಾಮಯ್ಯ ಪ್ರವೇಶ ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಕೋಲಾರ ಭೇಟಿ ಬಗ್ಗೆ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸದ್ಯ ಬಿಜೆಪಿಯಲ್ಲಿರುವ, ಸಿದ್ದರಾಮಯ್ಯ ಆಪ್ತರಾಗಿದ್ದ ಮಾಜಿ ಸಚಿವ ವರ್ತೂರು ಪ್ರಕಾಶ್, ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ ಸಹ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿಯಲ್ಲ
ಮಾಜಿ ಸಚಿವ ವರ್ತೂರು ಪ್ರಕಾಶ್ ಮಾತನಾಡಿ, "ಸಿದ್ದರಾಮಯ್ಯ ಏನು ಎಂದು ನನಗೆ ಚೆನ್ನಾಗಿ ಗೊತ್ತು. ನಾನು ಏನು ಎಂದು ಸಹ ಅವರಿಗೆ ಗೊತ್ತು. ಅವರು ಯಾವುದೇ ಕಾರಣಕ್ಕೂ ಕೋಲಾರಕ್ಕೆ ಬರುವುದಿಲ್ಲ. ರಮೇಶ್ ಕುಮಾರ್ ಮತ್ತು ಇತರ ಶಾಸಕರ ಒತ್ತಾಯಕ್ಕೆ ಮಣಿದು ಕೋಲಾರಕ್ಕೆ ಬಂದು ಹೋಗಿದ್ದಾರೆ. ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಸಹ ಅವರು ಹೇಳಿಲ್ಲ" ಎಂದರು.

ರಾಜ್ಯದ ಜನರೇ ಉಗಿಯುತ್ತಾರೆ
"ಸಿದ್ದರಾಮಯ್ಯ ರಾಜ್ಯದ ನಾಯಕರು. ಅವರಿಗೆ ರಾಜ್ಯಾದ್ಯಂತ ಪ್ರವಾಸ ಮಾಡುವ ಜವಾಬ್ದಾರಿ ಇರುತ್ತದೆ. ಅದರಂತೆ ಕೋಲಾರಕ್ಕೆ ಸಹ ಬಂದು ಹೋಗಿದ್ದಾರೆ. ನಾನು ಕುರುಬ ಸಮುದಾಯದವನು ಸಿದ್ದರಾಮಯ್ಯ ಏನೆಂದು ಚೆನ್ನಾಗಿ ತಿಳಿದಿದೆ. ಒಂದು ವೇಳೆ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಿದರೆ ರಾಜ್ಯದ ಜನರೇ ಅವರಿಗೆ ಉಗಿಯುತ್ತಾರೆ" ಎಂದು ವರ್ತೂರು ಪ್ರಕಾಶ್ ಹೇಳಿದ್ದಾರೆ.

ಒಂದು ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ
ಕೋಲಾರ ಸಂಸದ, ಬಿಜೆಪಿ ನಾಯಕ ಮುನಿಸ್ವಾಮಿ ಸಹ ಸಿದ್ದರಾಮಯ್ಯ ಕೋಲಾರ ಭೇಟಿ ಬಗ್ಗೆ ವ್ಯಂಗ್ಯವಾಡಿದ್ದಾರೆ, "ರಾಜ್ಯದ ಮುಖ್ಯಮಂತ್ರಿ ಆಗಿದ್ದವರು ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಹುಡುಕಾಟ ನಡೆಸುತ್ತಿದ್ದಾರೆ. ಅವರು ಇನ್ನು ಹತ್ತು ಬಾರಿ ಬಂದು ಹೋದರೂ ಸಹ ಕೋಲಾರದಲ್ಲಿ ಗೆಲ್ಲುವುದಿಲ್ಲ. ಜನರ ಪರವಾಗಿ ಕೆಲಸ ಮಾಡಿದ್ದರೆ ಈಗ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುವ ಪರಿಸ್ಥಿತಿಯೇ ಬರುತ್ತಿರಲಿಲ್ಲ" ಎಂದು ಹೇಳಿದರು.

ಸಿಎಂ ಆಗಿದ್ದಾಗಲೇ ಗೆಲ್ಲಲು ಸಾಧ್ಯವಾಗಿಲ್ಲ
"ಅವರು ಸಿಎಂ ಆಗಿದ್ದಾಗಲೇ ಚಾಮುಂಡೇಶ್ವರಿಯಲ್ಲಿ ಗೆಲ್ಲಲಾಗಲಿಲ್ಲ. ಬಾದಾಮಿಯಲ್ಲೂ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ. ಅವರು ಎಷ್ಟು ತಿಪ್ಪರಲಾಗ ಹಾಕಿದರೂ ಕೋಲಾರದಲ್ಲಿ ಗೆಲ್ಲುವುದಿಲ್ಲ. ಅವರ ಪಕ್ಷದಲ್ಲಿಯೇ ಆಂತರಿಕ ಭಿನ್ನಾಭಿಪ್ರಾಯವಿದೆ. ಭಾನುವಾರ ನಡೆದ ಕಾರ್ಯಕ್ರಮದಲ್ಲಿಯೇ ಇದು ಸಾಬೀತಾಗಿದೆ. ಕೆ. ಹೆಚ್. ಮುನಿಯಪ್ಪ ಬಣದವರು, ಕೆಜಿಎಫ್ ಶಾಸಕಿ ದೂರ ಉಳಿದಿದ್ದೇ ಇದಕ್ಕೆ ಉದಾಹರಣೆಯಾಗಿದೆ" ಎಂದು ಸಂಸದ ಮುನಿಸ್ವಾಮಿ ಹೇಳಿದರು.

ಎಚ್. ಡಿ. ಕುಮಾರಸ್ವಾಮಿ ಹೇಳಿಕೆ
ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಹ ಸಿದ್ದರಾಮಯ್ಯ ಕೋಲಾರದಿಂದ ಕಣಕ್ಕಿಳಿಯುವ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಕೋಲಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಬಿಜೆಪಿ, ಜೆಡಿಎಸ್ ಮೈತ್ರಿ ಪ್ರಶ್ನೆಯೇ ಇಲ್ಲ. ಯಾವುದೇ ಕಾರಣಕ್ಕೂ ಆ ಪಕ್ಷದ ಜೊತೆ ಮೈತ್ರಿ, ಒಪ್ಪಂದ ಮಾಡಿಕೊಳ್ಳಲ್ಲ. ಬಿಜೆಪಿ ಜೊತೆ ಯಾವುದೆ ಚರ್ಚೆ ಆಗಿಲ್ಲ" ಎಂದು ಸ್ಪಷ್ಟಪಡಿಸಿದರು.
"ಸಿದ್ದರಾಮಯ್ಯ ಆಗಲಿ, ಬೇರೆಯವರು ಅಭ್ಯರ್ಥಿಯಾಗಲಿ ನಮಗೆ ಕೋಲಾರದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ. ಸಿದ್ದರಾಮಯ್ಯ ಅವರನ್ನು ನಾವು ಸೋಲಿಸಬೇಕಿಲ್ಲ. ಅವರ ಪಕ್ಷದವರೇ ಸೋಲಿಸುತ್ತಾರೆ" ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications