ಸಿದ್ದರಾಮಯ್ಯ ಈ ಜನ್ಮದಲ್ಲಿ ಮುಖ್ಯಮಂತ್ರಿ ಆಗಲ್ಲ: ಗೋವಿಂದ ಕಾರಜೋಳ ಕಿಡಿ
ಬಾಗಲಕೋಟೆ, ಮೇ 11: ರಾಜ್ಯದಲ್ಲಿ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಈ ಜನ್ಮದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ಈ ಕುರಿತು ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈ ಬಾರಿಯೂ ಬಿಜೆಪಿ ಸರ್ಕಾರ ಸಂಪೂರ್ಣ ಮತಗಳಿಂದ ಅಧಿಕಾರಕ್ಕೆ ಬರುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದಿಲ್ಲ. ಸಿದ್ದರಾಮಯ್ಯ ಸಿಎಂ ಆಗೋದು ಎಲ್ಲಿಂದ ಬಂತು ಎಂದು ಸಚಿವ ಗೋವಿಂದ ಕಾರಜೋಳ ಕಿಡಿಕಾರಿದರು.

ಇನ್ನೂ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಈ ಬಾರೀ ಕಿಂಗ್ ಮೇಕರ್ ಆಗುತ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಾರೀಯೂ ಬಿಜೆಪಿ ಗೆಲುವು ಸಾಧಿಸಲಿದೆ. ಇವತ್ತಿನ ವಾತಾವರಣ ನೋಡಿದರೆ ನಮಗೆ ಸ್ಪಷ್ಟಬಹುಮತ ಬರುತ್ತೆ. 125 ಸ್ಥಾನಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತೆ. ಸ್ವಂತ ಬಲದ ಮೇಲೆ ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಮುಧೋಳ ಕ್ಷೇತ್ರದಲ್ಲಿ ನನ್ನ ಗೆಲವು ಖಚಿತ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ನಾನು ಮತ್ತೆ ಕ್ಷೇತ್ರದ ಶಾಸಕನಾಗಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡುತ್ತೇನೆ. ಮತಕ್ಷೇತ್ರದ ಮತದಾರರ ಋುಣವನ್ನು ತೀರಿಸುತ್ತೇನೆಂದು ಹೇಳಿದ ಅವರು, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 130 ಸ್ಥಾನ ಗೆದ್ದು ಮತ್ತೆ ರಾಜ್ಯದಲ್ಲಿ ಆಡಳಿತಕ್ಕೆ ಬರಲಿದೆ.

ನಾನು ಮುಧೋಳ ಮತಕ್ಷೇತ್ರದ ಶಾಸಕನಾಗಿ, ವಿವಿಧ ಇಲಾಖೆಗಳ ಸಚಿವನಾಗಿ, ಉಪ ಮುಖ್ಯ ಮಂತ್ರಿಯಾಗಿ ಮುಧೋಳ ತಾಲೂಕನ್ನ ಅಭಿವೃದ್ಧಿಗೊಳಿಸಿದ್ದೇನೆ. ನಾನು ಮಾಡಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮೆಚ್ಚಿರುವ ಕ್ಷೇತ್ರದ ಮತದಾರರು ನನಗೆ ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ನಾವು ಸಂಪೂರ್ಣ ಬಹುಮತ ಪಡೆಯುತ್ತೇವೆ: ಸಿಎಂ ಬೊಮ್ಮಾಯಿ
ಎಕ್ಸಿಟ್ ಪೋಲ್ ಒಂದೊಂದು ರೀತಿ ತೋರಿಸುತ್ತಿವೆ. ನಮ್ಮ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್ ಮೂಲಕ ನಾವು ಸಂಪೂರ್ಣ ಬಹುಮತ ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಎಕ್ಸಿಟ್ ಪೋಲ್ ನೂರಕ್ಕೆ ನೂರರಷ್ಟು ನಿಖರವಾಗಿರುವುದಿಲ್ಲ. 5 ರಿಂದ 10% ಹೆಚ್ಚು ಕಮ್ಮಿ ಆಗುತ್ತಿರುತ್ತದೆ. ಒಂದೊಂದು ಸಂಸ್ಥೆ ಒಂದೊಂದು ರೀತಿ ತೋರಿಸುತ್ತಿದೆ, ಯಾವುದು ಸ್ಥಿರವಾಗಿಲ್ಲ. ನಮಗೆ ಕಂಪ್ಲೀಟ್ ಗ್ರೌಂಡ್ ರಿಪೋರ್ಟ್ ಇದೆ. ಸಂಪೂರ್ಣ ಬಹುಮತ ಸಿಗುತ್ತದೆ.
ಚುನಾವಣೆಯ ನಿಜವಾದ ಫಲಿತಾಂಶಕ್ಕೆ ಮೇ 13ರವರೆಗೆ ಕಾಯೋಣ. ರೆಸಾರ್ಟ್ ರಾಜಕೀಯ ಇಲ್ಲ. ಯಾವುದೇ ರೆಸಾರ್ಟ್ ಆಗುವುದಿಲ್ಲ. ಈ ಬಾರಿ ಆ ಪ್ರಶ್ನೆಯೇ ಇಲ್ಲ. ಬಿಜೆಪಿಗೆ ಸಂಪೂರ್ಣ ಬಹುಮತ ಬರುತ್ತದೆ. ಜೆಡಿಎಸ್ ಕಿಂಗ್ ಮೇಕರ್ ಆಗುವ ಅವಶ್ಯಕತೆಯೇ ಇಲ್ಲ ಎಂದರು.












Click it and Unblock the Notifications