ಮದವೇರಿದ ಸಿದ್ದುಗೆ ಸಿಎಂ ಸ್ಥಾನ ಹೋಗಲಿದೆ: ದೇವೇಗೌಡ
ಕೃಷ್ಣರಾಜಪೇಟೆ, ಏ.10- ರಾಷ್ಟ್ರ ರಾಜಕಾರಣದಲ್ಲಿ ಜೆಡಿಎಸ್ ಪಕ್ಷವು ನಿರ್ಣಾಯಕ ಪಾತ್ರವನ್ನು ವಹಿಸುವ ಕಾಲ ಸನ್ನಿಹಿತವಾಗಿದೆ. ದೇಶದ ಪ್ರಧಾನಿಯನ್ನು ಆಯ್ಕೆ ಮಾಡುವ ಸಂದರ್ಭ ಬಂದಾಗ ಈ ದೇವೇಗೌಡ ಸೂಚಿಸುವ ವ್ಯಕ್ತಿಯು ದೇಶದ ಪ್ರಧಾನ ಮಂತ್ರಿಯಾಗುತ್ತಾರೆ. ಆದ್ದರಿಂದ ಈ ಸುವರ್ಣಾವಕಾಶವನ್ನು ಸದ್ಭಳಕೆ ಮಾಡಿಕೊಂಡು ರಾಜ್ಯದ ಪ್ರಜ್ಞಾವಂತ ಮತದಾರರು ರಾಜ್ಯದ ಅಭಿವೃಧ್ಧಿಯನ್ನು ಗುರಿಯನ್ನಾಗಿಸಿಕೊಂಡಿರುವ ಜೆಡಿಎಸ್ ಪಕ್ಷಕ್ಕೆ ಶಕ್ತಿ ತುಂಬಬೇಕು ಎಂದು ಮಾಜಿ ಪ್ರಧಾನಿ ದೇವೇಗೌಡ ಕರೆ ನೀಡಿದರು.
ಅವರು ಇಂದು ಪಟ್ಟಣದ ಜಯನಗರ ಬಡಾವಣೆಯ ಶ್ರೀರಂಗ ಚಿತ್ರಮಂದಿರದ ಆವರಣದಲ್ಲಿ ತಾಲೂಕು ಜೆಡಿಎಸ್ ಘಟಕವು ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿರುವ ಜನಪರ ಹೋರಾಟಗಾರ ಸಿಎಸ್ ಪುಟ್ಟರಾಜು ಅವರ ಪರವಾಗಿ ಆಯೋಜಿಸಿದ್ದ ಬೃಹತ್ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದ ಅಭಿವೃದ್ಧಿಯನ್ನು ಕಡೆಗಣಿಸಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ಮೋದಿ ಅಲೆಯಲ್ಲಿ ತೇಲುತ್ತಿರುವ ಕೋಮುವಾದಿ ಬಿಜೆಪಿ ಪಕ್ಷಗಳನ್ನು ತಿರಸ್ಕರಿಸಲಿರುವ ರಾಜ್ಯದ ಜನತೆ ಈ ಬಾರಿ ತೃತೀಯ ರಂಗದೊಂದಿಗೆ ದೇಶದ ಅಧಿಕಾರವನ್ನು ಹಿಡಿಯಲು ನಿರ್ಣಾಯಕ ಪಾತ್ರವನ್ನು ವಹಿಸುವ ಜೆಡಿಎಸ್ ಪಕ್ಷಕ್ಕೆ ಶಕ್ತಿಯನ್ನು ತುಂಬಿ ಹರಸಿ ಆಶೀರ್ವದಿಸಲಿದ್ದಾರೆ ಎಂದು ಹೇಳಿದರು.

ಚುನಾವಣೆ ನಂತರ ರಾಜ್ಯ ರಾಜಕಾರಣದಲ್ಲಿ ಬದಲಾವಣೆ
ಚುನಾವಣೆಯ ನಂತರ ರಾಜ್ಯ ರಾಜಕಾರಣದಲ್ಲಿಯೂ ಮಹತ್ತರವಾದ ಬದಲಾವಣೆಗಳಾಗಲಿದ್ದು ಮುಖ್ಯಮಂತ್ರಿಯಾಗಿ ಅಧಿಕಾರದ ಮದವೇರಿ ಮೆರೆಯುತ್ತಿರುವ ಸಿದ್ದರಾಮಯ್ಯ ಅವರು ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ರಾಜ್ಯದ ಆಡಳಿತ ನಡೆಸುತ್ತಿರುವ ಸಿದ್ಧರಾಮಯ್ಯನವರು ಮುಖ್ಯಮಂತ್ರಿ ಹುದ್ದೆಗೇರಿ ರಾಜಕೀಯವಾಗಿ ವಿವಿಧ ಅಧಿಕಾರವನ್ನು ಪಡೆದು ಪಕ್ವಗೊಳ್ಳಲು ಜಾತ್ಯಾತೀತ ಜನತಾದಳ ಪಕ್ಷದ ಕೊಡುಗೆ ಅಪಾರವಾಗಿದೆ. ಈ ಸತ್ಯದ ಬಗ್ಗೆ ತಿಳುವಳಿಕೆಯಿದ್ದರೂ ಹತ್ತಿದ ಏಣಿಯನ್ನು ಕಾಲಿನಿಂದ ಒದೆಯುವಂತೆ ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ತೇಜೋವಧೆ ಮಾಡುತ್ತಿದ್ದಾರೆ

JDS ಮುಗಿಸಲು ಸಿದ್ದರಾಮಯ್ಯ ಪಿತೂರಿ: ದೇವೇಗೌಡ
ಸಿದ್ದರಾಮಯ್ಯ ನಮ್ಮ ಪಕ್ಷವನ್ನು ಮುಗಿಸಲು ಪಿತೂರಿ ಮಾಡಿದ್ದಾರೆ. ಆದರೆ ಆ ಸಂಚು ಫಲಿಸುವುದಿಲ್ಲ. ರೈತರು, ಬಡವರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ಧ್ವನಿಯಾಗಿ ರಾಜ್ಯದ ಅಭಿವೃದ್ಧಿಯನ್ನು ಗುರಿಯನ್ನಾಗಿಸಿಕೊಂಡು ಕೆಲಸ ಮಾಡುತ್ತಿರುವ ಜೆಡಿಎಸ್ ಪಕ್ಷವು ಜನತೆಯ ಪಕ್ಷವಾಗಿದೆ. ಜೆಡಿಎಸ್ ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವ ಕೆಲವು ಮುಖ್ಯಮಂತ್ರಿಗಳು ಸೋಲಿನ ಕಹಿಯನ್ನು ಉಣ್ಣುತ್ತಾರೆ. ಆದರೆ ಈ ದೇವೇಗೌಡನನ್ನು ಸೋಲಿಸಲು ನೂರು ಜನ ಸಿದ್ದರಾಮಯ್ಯನಂತಹವರು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಏಕೆಂದರೆ ಸಿದ್ದರಾಮಯ್ಯನವರಿಗೆ ರಾಜಕೀಯ ತಂತ್ರಗಾರಿಕೆಯ ಒಳಪಟ್ಟುಗಳು ಹಾಗೂ ತಂತ್ರಗಳನ್ನು ಕಲಿಸಿಕೊಟ್ಟವನು ಈ ದೇವೇಗೌಡ ಎಂದು ಗೌಡರು ಗುಡುಗಿದರು.

ರಾಜ್ಯಕ್ಕೆ ಜೆಡಿಎಸ್ ಕೊಡುಗೆ ಅಪಾರ-ದೇವೇಗೌಡ
ರಾಜ್ಯದ ನೀರಾವರಿ ಯೋಜನೆಗಳು ಸಂಪೂರ್ಣಗೊಳ್ಳಲು ಬದ್ಧತೆಯಿಂದ ಕೆಲಸ ಮಾಡಿದ ಪಕ್ಷವೊಂದಿದ್ದರೆ ಅದು ರೈತರ ಪಕ್ಷವಾದ ನಮ್ಮ ಜೆಡಿಎಸ್ ಪಕ್ಷ. ನೀರಾವರಿ ಯೋಜನೆಗಳಿಗೆ ಸಮರ್ಪಕವಾಗಿ ಹಣ ನೀಡಲಿಲ್ಲವೆಂದು ನನ್ನ ಮಂತ್ರಿ ಪದವಿಗೆ ರಾಜೀನಾಮೆ ನೀಡಿ ರಾಮಕೃಷ್ಣ ಹೆಗಡೆ ಅವರ ಸಚಿವ ಸಂಪುಟದಿಂದ ಹೊರಬಂದವನು ಈ ದೇವೇಗೌಡ. ರಾಜ್ಯದ ಸಮಗ್ರವಾದ ಅಭಿವೃದ್ಧಿಗೆ ನಮ್ಮ ಪಕ್ಷದ ಕೊಡುಗೆಯು ಅಪಾರವಾಗಿದೆ.

ಕ್ಷೇತ್ರಕ್ಕೆ ಜೆಡಿಎಸ್ ಕೊಡುಗೆ ಅಪಾರ- ದೇವೇಗೌಡ
ಕೃಷ್ಣರಾಜಪೇಟೆ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆಯು ಆರಂಭವಾಗಿ ರೈತರು ನೆಮ್ಮದಿಯಿಂದ ಕಬ್ಬನ್ನು ಬೆಳೆದುಕೊಂಡು ಜೀವನ ನಿರ್ವಹಣೆ ಮಾಡಿಕೊಂಡು ನೆಮ್ಮದಿಯ ಜೀವನ ನಡೆಸಲು ಕಾರಣನಾದವನು ಈ ದೇವೇಗೌಡ. ತಾಲೂಕಿನಲ್ಲಿ ಏಳೆಂಟು ಸಬ್ ಸ್ಟೇಷನ್ ಗಳ ನಿರ್ಮಾಣ, 220 ಕೆವಿ ಸಾಮರ್ಥ್ಯದ ವಿದ್ಯುತ್ ಸ್ವೀಕರಣಾ ಕೇಂದ್ರದ ನಿರ್ಮಾಣ, ಇಂಜಿನಿಯರಿಂಗ್, ಐಟಿಐ ಕಾಲೇಜಿನ ಆರಂಭ ಜೆಡಿಎಸ್ ಪಕ್ಷದ ಕೊಡುಗೆ. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಕ್ರಾಂತಿ ಮಾಡಿ ಶಾಲಾ, ಕಾಲೇಜುಗಳನ್ನು ಆರಂಭಿಸಿದ್ದು ಕುಮಾರಸ್ವಾಮಿ, ನಾನು ರಾಜ್ಯದ ಯಾವುದೇ ತಾಲೂಕಿಗೆ ಹೋದರೂ ನಾನು ಮಂಜೂರಾತಿ ನೀಡಿರುವ ಕಾಮಗಾರಿಗಳು ಸಾಕಷ್ಟಿವೆ.

ಕೆಲ ಮಾಜಿ ಸಿಎಂ ಅಭ್ಯರ್ಥಿಗಳು ಸೋಲುವುದು ಖಚಿತ
ಜೆಡಿಎಸ್ ಪಕ್ಷದಿಂದ ಎಲ್ಲಾ ಸ್ಥಾನಮಾನ ಪಡೆದು ಮಂತ್ರಿಯಾಗಿ ಈಗ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುವ ಮಹನೀಯರು ಸೇರಿದಂತೆ, ನನ್ನಿಂದ ಉಪಯೋಗ ಪಡೆದುಕೊಂಡು ನನಗೆ ಕೇಡು ಬಯಸುವ ಮಂದಿ ಅಪಾರವಾಗಿದ್ದಾರೆ. ಇಂತಹ ನಾಯಕರ ಗೊಡ್ಡು ಬೆದರಿಕೆಗಳಿಗೆ ಈ ದೇವೇಗೌಡ ಜಗ್ಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗೌಡರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಈ ಭಾರಿ ಪುಟ್ಟರಾಜು ಅವರು ಗೆಲುವು ಸಾಧಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜಿಲ್ಲೆಯ ಪ್ರಜ್ಞಾವಂತ ಜನತೆ ಈ ಬಾರಿ ಪುಟ್ಟರಾಜು ಅವರಿಗೆ ವಿಜಯಮಾಲೆಯನ್ನು ತೊಡಿಸಿ ಹರಸಿ ಆಶೀರ್ವದಿಸುತ್ತಾರೆ. ಮಂಡ್ಯ ಜಿಲ್ಲೆಯು ಜೆಡಿಎಸ್ ಭದ್ರಕೋಟೆ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗಲಿದೆ ಎಂದು ದೇವೇಗೌಡ ಭವಿಷ್ಯ ನುಡಿದರು.












Click it and Unblock the Notifications