BJP-JDS Padayatra: ಸಿದ್ದರಾಮಯ್ಯ ಬೆಂಬಲಿಗರ ತಯಾರಿ ಏನು?
ಬೆಂಗಳೂರು, ಜುಲೈ 28: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣದ ಸದ್ದು ರಾಜ್ಯದಲ್ಲಿ ಜೋರಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಹೋರಾಟವನ್ನು ನಡೆಸುತ್ತಿವೆ.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ 10 ದಿನಗಳ ಪಾದಯಾತ್ರೆ ಮಾಡುವುದಾಗಿ ಘೋಷಣೆ ಮಾಡಿವೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ನೇತೃತ್ವದಲ್ಲಿ ಭಾನುವಾರ ನಡೆಯುವ ಸಭೆಯಲ್ಲಿ ಪಾದಯಾತ್ರೆಯ ಅಂತಿಮ ಚಿತ್ರಣ ರೂಪಿಸಲಾಗುತ್ತದೆ.

ಮತ್ತೊಂದು ಕಡೆ ಪ್ರತಿಪಕ್ಷಗಳ ಈ ನಡೆಗೆ ಎದಿರೇಟು ಕೊಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ಸಿದ್ಧವಾಗಿದ್ದಾರೆ. ಅವರು ಸಹ ಪಾದಯಾತ್ರೆ ಮಾಡುವ ನಿರೀಕ್ಷೆ ಇದೆ. ಅಲ್ಲದೇ ಸಹಕಾರ ಸಚಿವ ಕೆ. ಎನ್. ರಾಜಣ್ಣ ರಾಜ್ಯಾದ್ಯಂತ ಎನ್‌ಡಿಎ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಪಾದಯಾತ್ರೆ ರಾಜಕೀಯ: ತುಮಕೂರಿನಲ್ಲಿ ಮಾತನಾಡಿದ ಸಚಿವ ಕೆ. ಎನ್. ರಾಜಣ್ಣ, "ಬಿಜೆಪಿ-ಜೆಡಿಎಸ್ ಸಿದ್ದರಾಮಯ್ಯ ವಿರುದ್ಧ ಇಲ್ಲದ ಆರೋಪಗಳನ್ನು ಮಾಡಿಕೊಂಡು ಷಡ್ಯಂತ್ರ ರೂಪಿಸುತ್ತಿವೆ. ಮುಡಾದಲ್ಲಿ ನಡೆಯದ ಹಗರಣ ಮುಂದಿಟ್ಟುಕೊಂಡು ದೊಡ್ಡ ವಿಷಯ ಮಾಡುತ್ತಿವೆ" ಎಂದು ಆರೋಪಿಸಿದರು.
"ಹಿಂದುಳಿದ ವರ್ಗದ ನಾಯಕ ಮುಖ್ಯಮಂತ್ರಿ ಖುರ್ಚಿಯಲ್ಲಿ ಇರಬಾರದು ಎಂದು ಈ ಮಾದರಿ ಷಡ್ಯಂತ್ರ ರೂಪಿಸಲಾಗುತ್ತಿದೆ. ಇದರಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪವೂ ಇದೆ. ಇದು ಅಹಿಂದ ವರ್ಗಕ್ಕೆ ಮಾಡುತ್ತಿರುವ ಅಪಮಾನವಾಗಿದೆ" ಎಂದು ಕೆ. ಎನ್. ರಾಜಣ್ಣ ಹೇಳಿದರು.
ಮತ್ತೊಂದು ಕಡೆ ಮೈಸೂರಿನಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ. ಎಸ್. ಶಿವರಾಮು ಬಿಜೆಪಿ ಅವಧಿಯಲ್ಲಿ ನಡೆದ ಹಗರಣದ ಬಗ್ಗೆ ಉತ್ತರ ಕೊಡಿ ಎಂಬ ಪೋಸ್ಟ್ ಕಾರ್ಡ್ ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಹ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಬಿಜೆಪಿ ಮಾಡಿರುವ ಹಗರಣದ ಬಗ್ಗೆ ಪಾದಯಾತ್ರೆಯ ಸಮಯದಲ್ಲಿ ಎಲ್ಲಾ ಮಾಹಿತಿಯನ್ನು ಬಿಡುಗಡೆ ಮಾಡಲಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, "ಪಾದಯಾತ್ರೆ ಮಾಡುತ್ತಿರುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಪಾದಯಾತ್ರೆ ಮಾಡಿದರೆ ಅವರದೇ ಹಗರಣಗಳು ಬೇಕಾದಷ್ಟಿವೆ. ಅವರ ಹಗರಣಗಳೇ ಹೊರಬರುತ್ತವೆ. ಸದನದಲ್ಲಿ ಬಿಲ್ ಪಾಸು ಮಾಡುವ ವೇಳೆ ಬಿಜೆಪಿ ಶಾಸಕರು ಕೂಗುತ್ತಿದ್ದರು. ಸದನದಲ್ಲಿ ಹೇಗಿರಬೇಕೆಂಬುದೇ ಅವರಿಗೆ ಗೊತ್ತಿಲ್ಲ" ಎಂದು ಟೀಕಿಸಿದರು.
ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಮುಡಾ ಹಗರಣದ ಕುರಿತು ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ-ಜೆಡಿಎಸ್ ಸದಸ್ಯರು ಪಟ್ಟು ಹಿಡಿದರು. ಆದರೆ ಅವಕಾಶ ಸಿಗದ ಕಾರಣ ಉಭಯ ಸದನದಲ್ಲಿ ಅಹೋರಾತ್ರಿ ಧರಣಿಯನ್ನು ನಡೆಸಿದರು. ಆದರೆ ಸರ್ಕಾರ ವಿರೋಧ ಪಕ್ಷದ ಹೋರಾಟಕ್ಕೆ ಮಣಿಯಲಿಲ್ಲ. ಅಧಿವೇಶನವನ್ನು ಮುಂದೂಡಿಕೆ ಮಾಡಲಾಯಿತು.
ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುತ್ತೇವೆ ಎಂದು ಘೋಷಣೆ ಮಾಡಲಾಗಿದೆ. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ. ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಭಾನುವಾರ ನಡೆಯುವ ಸಭೆಯಲ್ಲಿ ಪಾದಯಾತ್ರೆಯ ದಿನಾಂಕ ಘೋಷಣೆಯಾಗುವ ನಿರೀಕ್ಷೆ ಇದೆ.
ರಾಮನಗರದಲ್ಲಿ ಪಾದಯಾತ್ರೆಯ ಬಗ್ಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಭೆಯನ್ನು ನಡೆಸಿದರು. ಬಿಜೆಪಿ ನಡೆಸುವ ಪಾದಯಾತ್ರೆಗೆ ಸಂಪೂರ್ಣ ಬೆಂಬಲ ನೀಡಲಾಗುತ್ತದೆ ಎಂದು ಹೇಳಿದರು.
ಒಟ್ಟಿನಲ್ಲಿ ಕರ್ನಾಟಕ 2023ರ ವಿಧಾನಸಭೆ ಚುನಾವಣೆಗೂ ಮೊದಲು ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಸಿದ ಪಾದಯಾತ್ರೆ, ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಪಾದಯಾತ್ರೆ ನೋಡಿತ್ತು. ಈಗ ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಪಾದಯಾತ್ರೆ ನಡೆಯಲಿದೆ.












Click it and Unblock the Notifications