ತಾಲೂಕು ಪಂಚಾಯಿತಿಗೆ ಚುನಾವಣೆ ಬೇಡ : ಸಿಎಂ
ಬೆಂಗಳೂರು, ಸೆ. 11 : ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿಯೆಂದು ಮೂರು ಹಂತದ ಚುನಾವಣೆ ನಡೆಸುವುದು ಸರಿ ಕಾಣುವುದಿಲ್ಲ. ತಾಲೂಕು ಪಂಚಾಯಿತಿಗಳಿಗೆ ಹೆಚ್ಚಿನ ಕೆಲಸದ ಒತ್ತಡ ಇರುವುದಿಲ್ಲ. ಆದ್ದರಿಂದ ತಾಲೂಕು ಪಂಚಾಯಿತಿಗಳಿಗೆ ನಾಮ ನಿರ್ದೇಶನ ಮಾಡುವುದು ಸೂಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ವಿಕಾಸಸೌಧದಲ್ಲಿ ಬುಧವಾರ ರಾಜ್ಯ ಪಂಚಾಯತ್ ಪರಿಷತ್ ಸಭೆ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಗಳು "ಇದು ತಮ್ಮ ವೈಯಕ್ತಿಕ ಅಭಿಪ್ರಾಯ. ಭ್ರಷ್ಟಾಚಾರ ನಿರ್ಮೂಲನೆ, ಸಂಪನ್ಮೂಲ ಕ್ರೋಡೀಕರಣ, ಜನಸಹಭಾಗಿತ್ವದಿಂದ ಆಡಳಿತ ನಡೆಸಲು ಹಿಂದಿನ ವ್ಯವಸ್ಥೆಯೇ ಉತ್ತಮವಾಗಿತ್ತು ಎಂದು ಪ್ರತಿಪಾದಿಸಿದರು.

ಪಂಚಾಯತ್ ರಾಜ್ ವ್ಯವಸ್ಥೆ ಸಬಲೀಕರಣದ ದೃಷ್ಟಿಯಿಂದ ತಾಲೂಕು ಪಂಚಾಯಿತಿ ಚುನಾವಣೆ ರದ್ದುಗೊಳಿಸುವುದು ಸೂಕ್ತ. ನಜೀರ್ ಸಾಬ್ ಅವರು ಜಾರಿಗೆ ತಂದಿದ್ದ ಪಂಚಾಯತ್ ರಾಜ್ ಕಾಯ್ದೆ ಅನ್ವಯ ಕಾರ್ಯ ನಿರ್ವಹಿಸಿದ್ದ ಅಂದಿನ ಮಂಡಲ ಪಂಚಾಯಿತಿ, ಜಿಲ್ಲಾ ಪರಿಷತ್‌ಗಳು ಅತ್ಯಂತ ಪರಿಣಾಮಕಾರಿಯಾಗಿದ್ದವು ಎಂದು ಸಿಎಂ ಹೇಳಿದರು.
'ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿಯೆಂದು 3 ಹಂತದ ಚುನಾವಣೆ ನಡೆಸುವುದು ಸರಿಯಲ್ಲ, ಗ್ರಾಮ ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆಸಿದರೆ ಸಾಕಾಗುತ್ತದೆ. ತಾಲೂಕು ಪಂಚಾಯಿತಿಗಳಿಗೆ ಹೆಚ್ಚಿನ ಕೆಲಸದ ಒತ್ತಡ ಇರುವುದಿಲ್ಲ. ಆದ್ದರಿಂದ ನಾಮ ನಿರ್ದೇಶನ ಮಾಡುವುದು ಸೂಕ್ತ ಎಂದರು.
ಪಂಚಾಯಿತಿ ವ್ಯವಸ್ಥೆ ಸುಧಾರಣೆಗಾಗಿ ರಮೇಶ್ ಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿ ಈ ಎಲ್ಲ ಅಂಶಗಳನ್ನೂ ಪರಿಶೀಲಿಸಲಿ. 2 ಹಂತದ ಚುನಾವಣೆ ಮಾದರಿ ಸಂಬಂಧ ರಾಜ್ಯ ಸರ್ಕಾರ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲು ಸಿದ್ಧವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.












Click it and Unblock the Notifications