ಸಚಿವ ಬೈರತಿ ಬಸವರಾಜು ರಾಜೀನಾಮೆ ನೀಡಲಿ; ಸಿದ್ದರಾಮಯ್ಯ
ಬೆಂಗಳೂರು, ಡಿಸೆಂಬರ್ 17; "ಭೂ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆ ಎದುರಿಸುತ್ತಿರುವ ಬೈರತಿ ಬಸವರಾಜು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಮತ್ತು ಸದನದಲ್ಲಿ ಈ ವಿಚಾರದ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕು" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಶುಕ್ರವಾರ ಈ ಕುರಿತು ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದಾರೆ. "ಡಿವೈಎಸ್‌ಪಿ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಾಗ ಪ್ರಕರಣದ ನೈತಿಕ ಹೊಣೆ ಹೊತ್ತು ಜಾರ್ಜ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು" ಎಂದು ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.
"ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿ ತಿಂಗಳಾಗುತ್ತಾ ಬಂದರೂ ಬೈರತಿ ಬಸವರಾಜ್ ಅವರ ರಾಜೀನಾಮೆ ಪಡೆಯದ ಬಿಜೆಪಿ ನಾಯಕರಿಗೆ ಸರ್ಕಾರ ನಡೆಸಲು ಯಾವ ನೈತಿಕತೆ ಇದೆ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
"ಇಂದು ಬೈರತಿ ಬಸವರಾಜ್ ಅವರ ಮೇಲಿನ ಭೂ ಹಗರಣದ ಬಗ್ಗೆ ಸದನದಲ್ಲಿ ಚರ್ಚೆ ನಡೆಸಿದರೆ ನ್ಯಾಯಾಲಯದ ವಿಚಾರಣೆಯ ಮೇಲೆ ಪ್ರಭಾವ ಬೀರುತ್ತದೆ, ಆದ್ದರಿಂದ ಸದನದ ನಿಯಮಾವಳಿಗಳಲ್ಲಿ ಚರ್ಚೆಗೆ ಅವಕಾಶವಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ" ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸಿದ್ದರಾಮಯ್ಯ ಟ್ವೀಟ್
ಸಿದ್ದರಾಮಯ್ಯ ಟ್ವೀಟ್‌ನಲ್ಲಿ "ನಮ್ಮ ಸರ್ಕಾರದ ಅವಧಿಯಲ್ಲಿ ಡಿ. ಕೆ. ರವಿ ಮತ್ತು ಗಣಪತಿ ಅವರು ವೈಯಕ್ತಿಕ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಗ ಇದೇ ಜಗದೀಶ್ ಶೆಟ್ಟರ್, ಆರ್.ಅಶೋಕ್, ಬಸವರಾಜ ಬೊಮ್ಮಾಯಿ ಅವರು ನಿಯಮ 60 ರಡಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿರಲಿಲ್ಲವೇ?"
"ಈಗಿನಂತೆ ಹಿಂದೆಯೂ ಐ.ಪಿ.ಸಿ ಸೆಕ್ಷನ್ 200 ರಡಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿ ಪ್ರಕರಣ ನ್ಯಾಯಾಲಯದಲ್ಲಿತ್ತು, ಸದನದ ಅಂದಿನ ನಿಯಮಾವಳಿಗಳೇ ಇಂದೂ ಇವೆ, ಅಂದು ಹಠ ಹಿಡಿದು ಚರ್ಚೆ ನಡೆಸಿದಾಗ ನ್ಯಾಯಾಲಯದ ವಿಚಾರಣೆ ಮೇಲೆ ಪ್ರಭಾವ ಬೀರದ್ದು ಇಂದು ಮಾತ್ರ ಬೀರುತ್ತದೆಯೇ?" ಎಂದು ಪ್ರಶ್ನಿಸಿದ್ದಾರೆ.
|
ಕಾನೂನು ಬಾಹಿರವಾಗಿ ಭೂಮಿ ಖರೀದಿ
"ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್ ಪುರಂ ಹೋಬಳಿಯ ಕಲ್ಕೆರೆಯಲ್ಲಿರುವ 22 ಎಕರೆ ಜಮೀನನ್ನು ಅಣ್ಣಯ್ಯಪ್ಪ ಎಂಬುವರಿಂದ 21/05/2003 ರಲ್ಲಿ ಖಾಲಿ ಛಾಪಾ ಕಾಗದಕ್ಕೆ ಸಹಿ ಹಾಕಿಸಿಕೊಂಡು ಕಾನೂನು ಬಾಹಿರವಾಗಿ ಬೈರತಿ ಬಸವರಾಜ್ ಅವರು ಖರೀದಿ ಮಾಡಿದ್ದಾರೆಂಬ ಆರೋಪವಿದೆ"
"ದೂರುದಾರರಾದ ಮಾದಪ್ಪ ಪೊಲೀಸ್ ಠಾಣೆಗೆ ಹೋಗಿ ಪ್ರಕರಣ ದಾಖಲು ಮಾಡಿದ ನಂತರ ಪೊಲೀಸರು ಬಿ ರಿಪೋರ್ಟ್ ಹಾಕಿದ್ದರು. ಇದನ್ನು ಪ್ರಶ್ನಿಸಿ ಮಾದಪ್ಪನವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯವು ಪೊಲೀಸರ ಬಿ ರಿಪೋರ್ಟ್ ಅನ್ನು ವಜಾಗೊಳಿಸಿ, ಸೆಕ್ಷನ್ 120 (420, 427, 465, 467, 471 ಗಳಡಿಯಲ್ಲಿ ಕ್ರಿಮಿನಲ್ ಅಪರಾಧ ಪ್ರಕರಣವನ್ನು ದಾಖಲಿಸಿಕೊಂಡು, ಸಮನ್ಸ್ ಜಾರಿಗೊಳಿಸುವಂತೆ ಆದೇಶಿಸಿದೆ. ಇವುಗಳಲ್ಲಿ ಕೆಲವು ಜಾಮೀನು ರಹಿತ ಅಪರಾಧಗಳಾಗಿವೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
|
ಮುಖ್ಯಮಂತ್ರಿಗಳಿಗೆ ಒತ್ತಾಯ
ಸಿದ್ದರಾಮಯ್ಯ ತಮ್ಮ ಟ್ವೀಟ್‌ನಲ್ಲಿ "ಡಿ. ಕೆ. ರವಿ ಹಾಗೂ ಗಣಪತಿ ಅವರ ಆತ್ಮಹತ್ಯೆ ಪ್ರಕರಣವನ್ನು ನಮ್ಮ ಸರ್ಕಾರ ಸಿ.ಬಿ.ಐ ತನಿಖೆಗೆ ಒಪ್ಪಿಸಿತ್ತು. ಎರಡೂ ಪ್ರಕರಣದಲ್ಲಿ ಜಾರ್ಜ್ ಅವರು ನಿರಪರಾಧಿ ಎಂದು ವರದಿ ಬಂದಿದೆ. ಜಾರ್ಜ್ ಅವರಿಗೆ ನೈತಿಕತೆ ಆಧಾರದಲ್ಲಿ ರಾಜೀನಾಮೆಗೆ ಒತ್ತಾಯಿಸಿದ ಬಿಜೆಪಿಯವರಿಗೂ ನೈತಿಕತೆ ಇರಬೇಕಲ್ಲವೇ?. ಬಿಜೆಪಿಯವರಿಗೆ ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆಯಿದ್ದರೆ, ರಾಜ್ಯದ ಜನರಿಗೆ ಭ್ರಷ್ಟಾಚಾರ ರಹಿತ, ಪಾರದರ್ಶಕ ಆಡಳಿತ ನೀಡಬೇಕು ಎಂಬ ಆಶಯವಿದ್ದರೆ ತಕ್ಷಣ ಬೈರತಿ ಬಸವರಾಜ್ ಅವರ ರಾಜೀನಾಮೆ ಪಡೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ" ಎಂದು ಹೇಳಿದ್ದಾರೆ.
|
ನಾವು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ
"ಪ್ರಕರಣವು ತಾರ್ಕಿಕ ಅಂತ್ಯ ಕಾಣುವವರೆಗೆ ನಾವು ಹಿಂದೆ ಸರಿಯುವ ಪ್ರಶ್ನೇಯೇ ಇಲ್ಲ. ಸಮಯಾವಕಾಶದ ಕೊರತೆ ಇದೆ ಎನಿಸಿದರೆ ರಾಜ್ಯ ಸರ್ಕಾರ ಸದನವನ್ನು ಒಂದು ತಿಂಗಳವರೆಗೆ ಮುಂದುವರೆಸಲಿ, ನಾವು ಸದನಕ್ಕೆ ಹಾಜರಾಗಲು ಸಿದ್ಧರಿದ್ದೇವೆ. ಭೂ ಹಗರಣದ ಚರ್ಚೆಯಾಗಲೇಬೇಕು" ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.












Click it and Unblock the Notifications