ಕಾಫಿ, ತಿಂಡಿ, ಬಿಸ್ಕೆಟ್ ಹೆಸರಲ್ಲಿ 200 ಕೋಟಿ ಲೂಟಿ ಆರೋಪ: ಸಿದ್ದರಾಮಯ್ಯ ಹೇಳಿದ್ದೇನು? ಇಲ್ಲಿದೆ ಮಾಹಿತಿ
"ನನ್ನ ಅವಧಿಯಲ್ಲಿ ಕಾಫಿ, ತಿಂಡಿ ಮತ್ತು ಊಟ ಪೂರೈಕೆಗೆ ಖರ್ಚಾಗಿರುವ ಹಣ ರೂ.3.26 ಕೋಟಿ ಮಾತ್ರ"
ಬೆಂಗಳೂರು, ಮಾರ್ಚ್ 06: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿ ಮಾಡಿದ್ದಾರೆ ಎಂಬ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆರೋಪಕ್ಕೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಭ್ರಷ್ಟಾಚಾರದ ಹಗರಣದಿಂದ ಬತ್ತಲಾಗಿ ಹೋಗಿರುವ ರಾಜ್ಯ ಸರ್ಕಾರ ಮಾನ ಉಳಿಸಿಕೊಳ್ಳಲು ಇಂತಹ ಅಪಪ್ರಚಾರ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.
ರಾಜ್ಯ @BJP4Karnataka ಸರ್ಕಾರವೇ ನನಗೆ ನೀಡಿರುವ ಮಾಹಿತಿಯಂತೆ ನಾನು ಮುಖ್ಯಮಂತ್ರಿಯಾಗಿದ್ದ ಐದು ವರ್ಷಗಳ ಅವಧಿಯಲ್ಲಿ ನನ್ನ ಕಚೇರಿಯಲ್ಲಿನ ಸಭೆಗಳು ಮತ್ತು ಜನತಾದರ್ಶನಗಳು ಮತ್ತಿತರ ಕಾರ್ಯಕ್ರಮಗಳಿಗೆ ಕಾಫಿ, ತಿಂಡಿ ಮತ್ತು ಊಟ ಪೂರೈಕೆಗೆ ಖರ್ಚಾಗಿರುವ ಹಣ ರೂ.3.26 ಕೋಟಿ ಮಾತ್ರ.
— Siddaramaiah (@siddaramaiah) March 6, 2023
1/4 pic.twitter.com/zxieAmdLA1
2013-14 ರಿಂದ 2017-18 ರವರೆಗಿನ 5 ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿಗಳ ಕಚೇರಿಯ ಸಭೆಗಳು ಮತ್ತು ಮುಖ್ಯಮಂತ್ರಿಗಳ ಕಚೇರಿಗೆ ವಿವಿಧ ಕಾರ್ಯಗಳ ಪ್ರಯುಕ್ತ ಹೊರಗಿನಿಂದ ಬರುವಂತಹ ಅತಿಥಿಗಳ ಉಪಚಾರ ಕಾರ್ಯಗಳ ಹೆಸರಿನಲ್ಲಿ 200 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಲೂಟಿಯಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕಚೇರಿಯ ಸಿಬ್ಬಂದಿ ವರ್ಗ ಹಾಗೂ ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DPAR) ಯ ಅಂದಿನ ಅಧಿಕಾರಿಗಳು ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಎನ್.ಆರ್. ರಮೇಶ್ ಆರೋಪಿಸಿದ್ದರು. ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.

ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, "ರಾಜ್ಯ ಬಿಜೆಪಿ ಸರ್ಕಾರವೇ ನನಗೆ ನೀಡಿರುವ ಮಾಹಿತಿಯಂತೆ ನಾನು ಮುಖ್ಯಮಂತ್ರಿಯಾಗಿದ್ದ ಐದು ವರ್ಷಗಳ ಅವಧಿಯಲ್ಲಿ ನನ್ನ ಕಚೇರಿಯಲ್ಲಿನ ಸಭೆಗಳು ಮತ್ತು ಜನತಾದರ್ಶನಗಳು ಮತ್ತಿತರ ಕಾರ್ಯಕ್ರಮಗಳಿಗೆ ಕಾಫಿ, ತಿಂಡಿ ಮತ್ತು ಊಟ ಪೂರೈಕೆಗೆ ಖರ್ಚಾಗಿರುವ ಹಣ ರೂ.3.26 ಕೋಟಿ ಮಾತ್ರ" ಎಂದು ಬಿಜೆಪಿ ಆರೋಪಕ್ಕೆ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
"ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನನ್ನ ಕಚೇರಿಯಲ್ಲಿ ಕಾಫಿ, ತಿಂಡಿ, ಊಟ ಪೂರೈಕೆಗೆ ರೂ. 200 ಕೋಟಿ ಖರ್ಚಾಗಿದೆ ಎಂದು ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಕೂಗುಮಾರಿಗೆ ಸರಿಯಾದ ಆಸ್ಪತ್ರೆಯಲ್ಲಿ ಮಾನಸಿಕ ಆರೋಗ್ಯಕ್ಕೆ ಚಿಕಿತ್ಸೆ ಕೊಡಿಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇನೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮುಂದುವರಿದು, "ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಬ್ರಹ್ಮಾಂಡ ಭ್ರಷ್ಟಾಚಾರದ ಹಗರಣದಿಂದ ಬತ್ತಲಾಗಿ ಹೋಗಿರುವ ರಾಜ್ಯ ಬಿಜೆಪಿ ಸರ್ಕಾರ ತನ್ನ ಮಾನ ಉಳಿಸಿಕೊಳ್ಳಲು ಇಂತಹ ಕೂಗುಮಾರಿಗಳನ್ನು ಬಳಸಿಕೊಳ್ಳುತ್ತಿದೆ ಎನ್ನುವುದನ್ನು ಜನ ಅರ್ಥಮಾಡಿಕೊಳ್ಳುತ್ತಾರೆ. ಬಂಡಲ್ ಗಟ್ಟಳೆ ನೋಟುಗಳನ್ನೇ ನುಂಗಿದವರು ಕಾಫಿ -ತಿಂಡಿಯ ಲೆಕ್ಕದ ಆರೋಪ ಮಾಡುತ್ತಿರುವುದು ಹಾಸ್ಯಾಸ್ಪದ" ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು, ತಾವು ಮುಖ್ಯಮಂತ್ರಿಯಾಗಿದ್ದಾಗ ಆಗಿರುವ ವೆಚ್ಚದ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, "ರಾಜ್ಯ ಸರ್ಕಾರ ನೀಡಿರುವ ಮಾಹಿತಿ ಪ್ರಕಾರ 13-5-2013 ರಿಂದ 30-01-2014 ರವರೆಗೆ ರೂ. 85,13 ಲಕ್ಷ , 2014-15 ರಲ್ಲಿ ರೂ. 58.45 ಲಕ್ಷ , 2015-16 ರಲ್ಲಿ ರೂ.39.20 ಲಕ್ಷ , 2016-17 ರಲ್ಲಿ ರೂ. 66,03 ಲಕ್ಷ ಮತ್ತು 2017- 18 ರಲ್ಲಿ ರೂ. 77.26 ಲಕ್ಷ ಹಣವನ್ನು ಮುಖ್ಯಮಂತ್ರಿ ಕಚೇರಿಯ ಕಾಫಿ - ತಿಂಡಿಗೆ ಖರ್ಚು ಮಾಡಲಾಗಿದೆ" ಎಂದು ದಾಖಲೆಯನ್ನು ಒದಗಿಸಿದ್ದಾರೆ.
ಸಿದ್ದರಾಮಯ್ಯ ಅವರ 5 ವರ್ಷಗಳ ಅವಧಿಯಲ್ಲಿ ಕೇವಲ ಮುಖ್ಯಮಂತ್ರಿಗಳ ಕಚೇರಿಯ ಕಾರ್ಯಗಳಿಗೆ ಕಾಫಿ, ಟೀ, ತಿಂಡಿ, ಉಪಹಾರ ಪೂರೈಕೆ ಕಾರ್ಯಗಳಿಗೆಂದು ವೆಚ್ಚ ಮಾಡಿರುವ ಒಟ್ಟು ಮೊತ್ತ 200,62,93,027 ರೂಪಾಯಿಗಳು. 5 ವರ್ಷಗಳಲ್ಲಿನ 410 ರಜಾ ದಿನಗಳನ್ನೂ ಸೇರಿಸಿಕೊಂಡರೆ ಪ್ರತಿಯೊಂದು ದಿನಕ್ಕೆ ಸರಾಸರಿ 11 ಲಕ್ಷ ರೂಪಾಯಿ ವೆಚ್ಚವಾಗಿದೆ. 410 ರಜಾ ದಿನಗಳನ್ನು ಹೊರತುಪಡಿಸಿದರೆ ಪ್ರತಿಯೊಂದು ದಿನಕ್ಕೆ ಸರಾಸರಿ 14 ಲಕ್ಷ ರೂಪಾಯಿ ವೆಚ್ಚವಾಗಿದೆ ಎಂದು ಬಿಜೆಪಿ ಮುಖಂಡ ಎನ್ ಆರ್ ರಮೇಶ್ ಸೋಮವಾರ ಸುದ್ದಿಗೋಷ್ಠ ನಡೆಸಿ ಆರೋಪಿಸಿದ್ದರು.












Click it and Unblock the Notifications